ತುಮಕೂರು: ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವ ಗುರು ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಏಪ್ರಿಲ್ ೧೭ ರಿಂದ ೨೯ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಂಡಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಕಾರ್ಯಕ್ರಮಕ್ಕೆ ಶನಿವಾರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ರಥಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆ ಬಸವನ ಬಾಗೇವಾಡಿಯಲ್ಲಿ ಏಪ್ರಿಲ್ ೨೯ ಹಾಗೂ ೩೦ರಂದು ಆಯೋಜಿಸಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ಕಾರ್ಯಕ್ರಮದ ಅಂಗವಾಗಿ ಈ ರಥಯಾತ್ರೆಯನ್ನು ಆಯೋಜಿಸಲಾಗಿದೆ.  ವಿಧಾನಸೌಧದ ಮುಂಭಾಗದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಪ್ರಿಲ್ ೧೭ರಂದು ರಥಯಾತ್ರೆಗೆ ಚಾಲನೆ ನೀಡಿದ್ದು,  ರಥಯಾತ್ರೆಯು ನಾಡಿನಾದ್ಯಂತ ಸಂಚರಿಸಿ ಬಸವಣ್ಣನವರ ಬದುಕು, ಸಂದೇಶ ಮತ್ತು ಚಿಂತನೆಗಳನ್ನು ಪ್ರಚುರಪಡಿಸಲಿದೆ ಎಂದು ತಿಳಿಸಿದರು.
ಇಂದು ಪ್ರಜಾಪ್ರಭುತ್ವದಲ್ಲಿ ಸಮಾನತೆ, ಸ್ವಾತಂತ್ರö್ಯದ ಬಗ್ಗೆ ನಾವೆಲ್ಲಾ ಮಾತನಾಡುತ್ತಿದ್ದೇವೆ. ಆದರೆ ಬಸವಣ್ಣನವರು ೧೨ನೇ ಶತಮಾನದಲ್ಲಿಯೇ ತಮ್ಮ ಅನುಭವ ಮಂಟಪದ ಮೂಲಕ ಮಹಿಳೆಯರು ಸೇರಿದಂತೆ ಎಲ್ಲಾ ಕಾಯಕ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಏಳಿಗೆಗಾಗಿ ಹಗಲಿರುಳು ಶ್ರಮಿಸಿದರು. ಸಾಮಾಜಿಕ ತಾರತಮ್ಯ, ಲಿಂಗತಾರತಮ್ಯ, ಮೂಢ ನಂಬಿಕೆಗಳನ್ನು ಹೋಗಲಾಡಿಸಲು ೮೦೦ ವರ್ಷಗಳ ಹಿಂದೆಯೇ  ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ.  ಬಸವಣ್ಣನವರ ಮಹತ್ವವನ್ನು ನಾಡಿಗೆ ಸಾರಲು ಹೊರಟಿರುವುದು ಶ್ಲಾಘನೀಯ. ನಮ್ಮ ಜಿಲ್ಲೆಯಲ್ಲಿಯೂ ಬಸವಣ್ಣನವರ ವಚನಗಳ ಕುರಿತು ವಿಚಾರ ಸಂಕಿರಣಗಳನ್ನು ಏರ್ಪಡಿಸಲು ಜಿಲ್ಲಾಡಳಿತದಿಂದ ತಯಾರಿ ನಡೆಸಲಾಗುವುದು ಎಂದು ತಿಳಿಸಿದರು.
ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ, ಬಸವಣ್ಣನವರ ಜಯಂತಿ ಅಂಗವಾಗಿ ಅವರ ಬದುಕು, ತತ್ವಗಳನ್ನು ಜನತೆಗೆ ತಿಳಿಸಲು ಸರಕಾರ ಕೈಗೊಂಡಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆ ಇಂದು ತುಮಕೂರಿಗೆ ಆಗಮಿಸಿದೆ. ಬಸವಣ್ಣನವರ ವಚನಗಳ ಸಾರವನ್ನು ತಿಳಿದು ನಡೆದರೆ, ಕಲ್ಯಾಣ ರಾಜ್ಯ ಸಾಕಾರಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ, ಬಸವಾದಿ ಶರಣರ ಸಂದೇಶಗಳನ್ನು ಸರಕಾರ ನಾಡಿಗೆ ಪಸರಿಸಲು ಹೊರಟಿರುವುದು ಸ್ವಾಗತಾರ್ಹ. ಇದರ ಜೊತೆಗೆ ಶಾಲಾ, ಕಾಲೇಜುಗಳಲ್ಲಿ ಬಸವಣ್ಣನವರ ಬಗ್ಗೆ ವಿಚಾರ ಸಂಕಿರಣ, ಕಾರ್ಯಾಗಾರಗಳನ್ನು ನಡೆಸುವುದರ ಜೊತೆಗೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಸವಭವನ ನಿರ್ಮಾಣ ಮಾಡಬೇಕೆಂಬುದು ಬಹು ಜನರ ಬೇಡಿಕೆಯಾಗಿದೆ. ಸರಕಾರ ಈ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂಬುದು ಶರಣರ ಒತ್ತಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ್ ಕುಮಾರ್, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಡಾ: ಪರಮೇಶ್, ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಜಿ.ಎಸ್.ಚಂದ್ರಮೌಳಿ, ಮುಖಂಡರಾದ ಸದಾಶಿವಯ್ಯ, ಎಂ.ಜಿ. ಸಿದ್ದರಾಮಯ್ಯ, ಡಾ: ಡಿ.ಎನ್.ಯೋಗೀಶ್ವರಪ್ಪ, ಎಸ್. ಕುಮಾರಸ್ವಾಮಿ, ರಾಜಶೇಖರಯ್ಯ, ಶಶಿಧರನ್, ತಕರಾರಿ ಮಹೇಶ್, ಕನ್ನಡ ಪ್ರಕಾಶ, ಶ್ರೀಧರ, ಅನುಸೂಯಮ್ಮ ಸೇರಿದಂತೆ ಮತ್ತಿತರರು ಹಾಜರಿದ್ದರು.
(Visited 1 times, 1 visits today)