ತುಮಕೂರು: ಹರಿಕಥೆ ಎನ್ನುವುದು ಒಂದು ಜಾತ್ಯಾತೀತ ಕಲೆ. ಈ ಕಲೆಗೆ ಎಲ್ಲಾ ವರ್ಗದ ಪ್ರೇಕ್ಷಕರು ಇದ್ದಾರೆ.ಹಾಗಾಗಿ ಈ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಕ ಕಲಾವಿದರನ್ನು ಇತ್ತ ಸೆಳೆಯುವ ಕೆಲಸ ಆಗಬೇಕಿದೆ ಎಂದು ಹಿರಿಯ ಸುಗಮ ಸಂಗೀತ ಕಲಾವಿದರಾದ ಡಾ.ಆರ್.ಕೆ.ಪದ್ಮನಾಭನ್ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಜಿ.ಸೋಮಶೇಖರದಾಸ್ ಪ್ರತಿಷ್ಠಾನ ಬೆಂಗಳೂರು ಇವರು, ಚಿರಂತ ಸಾಂಸ್ಕೃತಿಕ ಟ್ರಸ್ಟ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಹರಿದಾಸರ ಸಮಾವೇಶ-೨೦೨೫ ವನ್ನು ಉದ್ಭಾಟಿಸಿ ಮಾತನಾಡುತಿದ್ದ ಅವರು, ಸುಗಮ ಸಂಗೀತ, ನೃತ್ಯ,ಗಮಕ ಇಂತಹ ಕಲೆಗಳಿಗೆ ಅದರದ್ದೇ ಪ್ರೇಕ್ಷಕರ ವರ್ಗವಿದೆ.ಆದರೆ ಹರಿಕಥೆಗೆ ಎಲ್ಲಾ ವರ್ಗದ ಪ್ರೇಕ್ಷಕರು ಸಹ ಆಗಮಿಸಿ, ಕೇಳಿ ಆಸ್ವಾಧಿಸುತ್ತಾರೆ. ಹಾಗಾಗಿ ಇದೊಂದು ಜಾತ್ಯಾತೀತ ಕಲೆ. ಇದು ಉಳಿದು ಬೆಳೆಯಬೇಕಿದೆ ಎಂದರು.
ನಾನು ಸಹ ಬಾಲ್ಯದಿಂದಲೂ ಹರಿಕಥೆಯನ್ನು ಕೇಳಿ ಬೆಳದವ. ಕಾಲೇಜು ದಿನಗಳಲ್ಲಿ ಗುರುರಾಜುಲುನಾಯ್ಡು ಅವರ ಹರಿಕಥಾ ಕಾರ್ಯಕ್ರಮಕ್ಕೆ ತಪ್ಪದೇ ಹೋಗುತ್ತಿದ್ದೇ, ನನ್ನ ಗಾಯನದ ಮೇಲೆ ಹರಿಕಥೆಯ ಪ್ರಭಾವವಿದೆ.ಹರಿಕಥೆ ಮಾಡುವುದು ಸುಲಭವಲ್ಲ.ಬಹಳ ಕ್ಲಿಷ್ಟಕರವಾದ ಕಲೆ. ಶರೀರದ ಜೊತೆಗೆ, ಶಾರೀರವೂ ಮುಖ್ಯ. ನವರಸಗಳನ್ನು ಒಳಗೊಂಡು ಒಂದು ಸಂಕೀರ್ಣ ಕಲೆ. ಹಾಗಾಗಿ ಪುರಾಣಗಳು, ರಾಮಾಯಣ, ಮಹಾಭಾರತ, ಗೀತೆ ಸೇರಿದಂತೆ ಸಾಹಿತ್ಯಗಳ ಅಧ್ಯಯನ, ನಿರಂತರ ಪರಿಶ್ರಮದಿಂದ ಮಾತ್ರ ಈ ಕ್ಷೇತ್ರದಲ್ಲಿ ಯಶಸ್ಸುಗಳಿಸಲು ಸಾಧ್ಯ.ಆಗ ಮಾತ್ರ ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ತಲುಪಲು ಸಾಧ್ಯ ಎಂದು ಆರ್.ಕೆ.ಪದ್ಮನಾಭನ್ ತಿಳಿಸಿದರು.
ಹರಿದಾಸರಿಗೆ ಕನ್ನಡವೇ ಆರಾಧ್ಯ ಧೈವ. ನಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಿದರೆ, ಇತರೆ ಭಾಷೆಗಳಲ್ಲಿ ಕಾರ್ಯಕ್ರಮ ನೀಡುವಷ್ಟು ಪ್ರೌಢಿಮೆ ಬೆಳೆಸಿಕೊಳ್ಳಬಹುದು. ಹೆಸರಿಗಷ್ಟೇ ಹರಿದಾಸರಾದರೆ ಸಾಲದು, ನಿಜ ಜೀವನದಲ್ಲಿಯೂ ಹರಿದಾಸರಾಗಿ, ನಾಲ್ವರಿಗೆ ಬೇಕಾದ ಮನುಷ್ಯರಾಗಿ ಬದುಕಿ ಎಂದು ಸಲಹೆ ನೀಡಿದ ಅವರು,ಯುವಕರನ್ನು ಈ ಕ್ಷೇತ್ರಕ್ಕೆ ಕರೆತರುವ ನಿಟ್ಟಿನಲ್ಲಿ ಯುವ ಹರಿಕಥಾ ವಿದ್ವಾಂಸ ಸಮಾವೇಶ ನಡೆಸಿದರೆ, ನನ್ನ ಕೈಲಾದ ಧನ ಸಹಾಯ ಮಾಡುವ ಭರವಸೆಯನ್ನು ಆರ್.ಕೆ.ಪದ್ಮನಾಭನ್ ನುಡಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾದ ಶುಭ ಧನಂಜಯ್ ಮಾತನಾಡಿ,ನಮ್ಮ ಆಕಾಡೆಮಿಯ ಅಡಿಯಲ್ಲಿ ಸಂಗೀತ, ನೃತ್ಯ ಸೇರಿದಂತೆ ಆರು ಪ್ರಮುಖ ಕಲೆಗಳು ಬರುತ್ತವೆ. ಅದರೆ ಸರಕಾರ ನೀಡುವ ಅನುದಾನದಲ್ಲಿ ಈ ಕಲೆಗಳನ್ನು ಪ್ರೋತ್ಸಾಹಿಸುವುದು ಕಷ್ಟ ಸಾಧ್ಯ. ಆದರೂ ಅಕಾಡೆಮಿ ಶಕ್ತಿ ಮೀರಿ ಕೆಲಸ ಮಾಡುತ್ತಿದೆ.ಹರಿಕಥೆಗೆ ಚೌಕಟ್ಟು ಎಂಬುದಿಲ್ಲ.ನವರಸಗಳನ್ನು ಒಳಗೊಂಡಿದೆ.ಇAತಹ ಕಲೆಗಳಿಗೆ ನಿರಂತರ ವೇದಿಕೆ ಸಿಗಬೇಕು.ಮಕ್ಕಳು ಸಹ ಪಠ್ಯದ ಜೊತೆ ಜೊತೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಾದ ಕಲೆ, ಸಾಹಿತ್ಯ, ಸಾಂಸ್ಕೃತಿಕ ಚುಟವಟಿಕೆಗಳತ್ತ ಗಮನಹರಿಬೇಕು. ವಿದ್ಯಾರ್ಥಿ ಜೀವನದಲ್ಲಿಯೇ ಕಲೆಗಳನ್ನು ಮೈಗೂಡಿಸಿಕೊಂಡರೆ ಹೆಚ್ಚು ಏಕಾಗ್ರತೆ ರೂಢಿಯಾಗುತ್ತದೆ.ಅವರು ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿ.ಸೋಮಶೇಖರದಾಸ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಕಾರ್ಯಕ್ರಮದ ಆಯೋಜಕರಾದ ಜಿ.ಸೋಮಶೇಖರದಾಸ್, ಹರಿಕಥಾ ಕ್ಷೇತ್ರಕ್ಕೆ ಅದರದ್ದೆ ಆದ ಪುರಾತನ ಪರಂಪರೆ ಇದೆ.ತಂಬೂರ ನಾರದರಿಂದ ಆರಂಬವಾಗುವ ಹರಿದಾಸ ಪರಂಪರೆ ತ್ಯಾಗರಾಜರು, ಪುರಂದರ ದಾಸರು, ಕನಕದಾಸರ ಹೀಗೆ ಮುಂದುವರೆದುಕೊAಡು ಬರುತ್ತಿದೆ.ಆದರೆ ಇತ್ತೀಚಿನ ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ಹರಿಕಥೆ ಕೇಳುವವರು, ಮಾಡುವವರು ಇಬ್ಬರು ಕಡಿಮೆಯಾಗಿದ್ದಾರೆ.ಜಗಕ್ಕೆ ಒಳ್ಳೆಯ ಸಂದೇಶ ನೀಡುವ ಇಂತಹ ಕಲೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಮ್ಮ ಪ್ರತಿಷ್ಠಾನ ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಹರಿದಾಸರಿಗೆ ವೇದಿಕೆ ಕಲ್ಪಿಸುವುದರ ಜೊತೆಗೆ, ಯುವ ಕಲಾವಿದರಿಗೆ ಅವಕಾಶ ಕಲ್ಪಿಸುವ ಕೆಲಸ ಮಾಡುತ್ತಿದೆ.ಇದರ ಜೊತೆಗೆ ವಾದ್ಯ ಕಲಾವಿದರು ಮತ್ತು ಹರಿದಾಸರ ಸಮನ್ವಯದ ಕೊಂಡಿಯಾಗಿ ಈ ಸಮಾವೇಶ ಕೆಲಸ ಮಾಡಲಿದೆ. ದಾಸ ಸಾಹಿತ್ಯ, ಶರಣ ಸಾಹಿತ್ಯ, ಸನಾತನ ಧರ್ಮದ ಉಳಿವಿಗೆ ಹರಿಕಥೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಡಾ.ಲಕ್ಷö್ಮಣದಾಸ್ ಮಾತನಾಡಿ,ಅಕಾಡೆಮಿ ಇಂತಹ ಕಲೆಯನ್ನು ಉಳಿಸಿ, ಬೆಳೆಸಲು ಮುಂದಾಗಬೇಕು. ಕನಿಷ್ಠ ತಿಂಗಳಿಗೆ ಒಂದು ಕಾರ್ಯಕ್ರಮವನ್ನಾದರೂ ಅಕಾಡೆಮಿ ವತಿಯಿಂದ ನೀಡುವ ಮೂಲಕ ವೇದಿಕೆ ಕಲ್ಪಿಸಬೇಕು.ಹರಿಕಥಾ ವಿದ್ವಾನ್ ಸೋಮಶೇಖರದಾಸ್ ತನ್ನ ಸ್ವಂತ ಹಣದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸಿ, ನಮ್ಮೆಲ್ಲರನ್ನು ಕಲೆ ಹಾಕಿ, ಆತ್ಮಾವಲೋಕಕ್ಕೆ ಅವಕಾಶ ಕಲ್ಪಿಸಿದ್ದಾರೆ. ಇಂತಹವರ ಸಂಖ್ಯೆ ಹೆಚ್ಚಾಗಲಿ, ಇದಕ್ಕೆ ಸಹಕಾರಿ ನೀಡಿದ ಎಲ್ಲರನ್ನು ಸ್ಮರಿಸುವುದಾಗಿ ತಿಳಿಸಿದರು.
ಇದೇ ವೇಳೆ ಕಲಾವಿದರಾದ ಡಾ.ಕಲ್ಕೆರೆ ನರಸಿಂಹಮೂರ್ತಿ, ಜಗದೀಶ್ ಆಚಾರ್, ಬಾಬು, ಕೃಷ್ಣಮೂರ್ತಿ ಕೆಂಗನಹಳ್ಳಿ, ವಿ.ಎನ್.ಅಶ್ವಥ್, ಡಿ.ಡಿ.ಕೃಷ್ಣಪ್ಪ, ನಂಜಪ್ಪ ಶೆಟ್ರು, ಡಿ.ಎನ್.ರಾಮಯ್ಯದಾಸರು, ಶಿವಕುಮಾರಾಚಾರ್, ಶ್ರೀಮತಿ ರಾಜೇಶ್ವರಿ ಅವರುಗಳನ್ನು ಅಭಿನಂದಿಸಲಾಯಿತು.
ಕರ್ನಾಟಕ ಕೀರ್ತನ ಕಲಾ ಪರಿಷತ್ತಿನ ಅಧ್ಯಕ್ಷರಾದ ಎಸ್.ಎಲ್.ಲೋಕೇಶದಾಸ್,ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಕೆ.ಸಿ.ನರಸಿಂಹಮೂರ್ತಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಪ್ಪ,ಜನಪದ ಅಕಾಡೆಮಿ ಸದಸ್ಯರಾದ ಕೆಂಕೆರೆ ಮಲ್ಲಿಕಾರ್ಜುನ್ ಅವರುಗಳು ಮಾತನಾಡಿದರು.ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ್, ಜಾನಪದ ಅಕಾಡೆಮಿ ಸದಸ್ಯರಾದ ಮಲ್ಲಿಕಾರ್ಜುನ ಕೆಂಕರೆ, ಹರಿಕಥಾ ವಿದ್ವಾನ್ ಶೀಲಾ ನಾಯ್ಡು, ಎಂ.ವಿ.ನಾಗಣ್ಣ ಮತ್ತಿತರರು ವೇದಿಕೆಯಲ್ಲಿದ್ದರು.

 

(Visited 1 times, 1 visits today)