ತುಮಕೂರು: ಮೂವತ್ತು ವರ್ಷಗಳ ಸುದೀರ್ಘ ಕ್ಷೇತ್ರಕಾರ್ಯದ ಫಲವಾಗಿ ಹುಟ್ಟಿಕೊಂಡಿರುವ ‘ದೇವುಗಾನಿಕೆ’ ಕೃತಿಯಲ್ಲಿ ಹೆಣ್ಣು- ಗಂಡು ಇಬ್ಬರನ್ನೂ ಸಮಾನವಾಗಿ ಕಾಣಲಾಗಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ವಿಶ್ರಾಂತ ಕಾರ್ಯದರ್ಶಿ ಡಾ. ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಅಧ್ಯಯನ ಪೀಠದ ವತಿಯಿಂದ ಶುಕ್ರವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಡಾ. ಡಿ. ವಿ. ಜಿ. ಕನ್ನಡ ಅಧ್ಯಯನ ಕೇಂದ್ರದ ಸಹಪ್ರಾಧ್ಯಾಪಕ ಡಾ.ಪಿ.ಎಂ ಗಂಗಾಧರಯ್ಯ ಅವರ ‘ದೇವುಗಾನಿಕೆ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮೌಖಿಕ ಕಾವ್ಯಗಳು, ಕಥೆಗಳು, ನಮ್ಮ ಚರಿತ್ರೆಯನ್ನು ಇಂದಿಗೂ ಹಿಡಿದಿಟ್ಟುಕೊಂಡಿರುವ ಪರಿಯನ್ನು ದೇವುಗಾನಿಕೆ ಪರಿಚಯಿಸುತ್ತದೆ. ಅಂಚಿಗೆ ಸರಿದ ಅನೇಕ ಸಮುದಾಯಗಳ ಚರಿತ್ರೆಗಳನ್ನು ಹೊರ ತರುವುದರಲ್ಲಿ ಕೃತಿಕಾರರು ಮಾಡಿರುವ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕದಲ್ಲಿ ೩೦- ೩೫ ವರ್ಷಗಳ ಹಿಂದೆ ಜಾನಪದದ ಹೆಚ್ಚು ಚಟುವಟಿಕೆಗಳು ನಡೆಯುತ್ತಿದ್ದವು. ಇತ್ತೀಚಿಗೆ ಆಧುನೀಕರಣಗೊಂಡು ಎಲ್ಲವೂ ಮರೆಯಾಗುತ್ತಿದೆ. ಪ್ರಸ್ತುತ ಕೃತಿ ಇವನ್ನು ನೆನಪಿಸಿಕೊಳ್ಳುವಂತೆ ಮಾಡಿದೆ ಎಂದರು.
ಈ ಕೃತಿಯಲ್ಲಿ  ದೇವತೆಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡಲಾಗಿದೆ. ಒಟ್ಟು ಏಳು ಮಾತೃ ದೇವತೆಗಳ ಗುಂಪನ್ನು ಪರಿಚಯಿಸಲಾಗಿದೆ. ಸಿದ್ದರಬೆಟ್ಟದ ಅಸ್ಮಿತೆ ಮತ್ತು ಸತ್ಯ ಘಟನೆಗಳು, ಕ್ಷೇತ್ರವಾರು ಜಾನಪದ ಸಂಸ್ಕೃತಿಯನ್ನು ಅಭಿವ್ಯಕ್ತಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಹೆಚ್. ವಿಶ್ವನಾಥ್ ಮಾತನಾಡಿ, ಜಾನಪದ ಕಲೆಯು ಬದುಕಿನ ಎಲ್ಲಾ ತಲ್ಲಣಗಳನ್ನು ಬಿಂಬಿಸುತ್ತದೆ. ಜಾನಪದದ ಆಳ ಅಗಲ ಅಪಾರವಾದದ್ದು. ನೆಲಮೂಲ ಸಂಸ್ಕೃತಿಯನ್ನು ಎಲ್ಲೆಡೆ ತಲುಪಿಸುವ ಪ್ರಯತ್ನ ಇದಾಗಿದೆ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಸ್ಥಳೀಯ ಜಾನಪದದ ಬಗ್ಗೆ ಕೃತಿ ರಚನೆಯಾಗಿರುವುದು ಹೆಮ್ಮೆಯ ವಿಷಯ ಎಂದರು.
ಜನಪದ ಸಾಹಿತ್ಯ ಇತ್ತೀಚಿನ ದಿನಗಳಲ್ಲಿ ಅಳಿವಿನಂಚಿಗೆ ಸಾಗುತ್ತಿದೆ. ಗ್ರಾಮ ದೇವತೆಗಳು, ಗ್ರಾಮೀಣ ಪ್ರದೇಶದ ಸೊಗಸು ಕಡಿಮೆ ಆಗುತ್ತಿದೆ. ಯುವಕರು ನಮ್ಮ ಸಂಸ್ಕೃತಿ ಹಾಗೂ ಜಾನಪದ ಸಾಹಿತ್ಯವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು ಹೋಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್, ಹಾಸನದ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎನ್. ವೆಂಕಟೇಶ್, ಕೃತಿಕಾರ ಡಾ. ಪಿ. ಎಂ. ಗಂಗಾಧರಯ್ಯ
ಉಪಸ್ಥಿತರಿದ್ದರು.

(Visited 1 times, 1 visits today)