ಚಿಕ್ಕನಾಯಕನಹಳ್ಳಿ: ಗ್ರಾಮೀಣ ಭಾಗದ ಜನರ ಸಮಸ್ಯೆಗಳ ನಿವಾರಣೆಗೆ ‘ಮನೆಬಾಗಿಲಿಗೆ ಮನೆಮಗ’ ಕಾರ್ಯಕ್ರಮ ಒಂದು ಮಹತ್ವದ ಮೈಲಿಗಲ್ಲಾಗಲಿದೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು.
ಅವರು ಪಟ್ಟಣದ ತೀನಂಶ್ರೀ ಭವನದಲ್ಲಿ ನೂತನ ಕಾರ್ಯಕ್ರಮದ ಮನೆ ಬಾಗಿಲಿಗೆ ಮನೆಮಗ ಶೀರ್ಷಿಕಾ ಫಲಕವನ್ನು ಬಿಡುಗಡೆ ಗೊಳಿಸಿ ಮಾತನಾಡಿ ಈಗಾಗಲೇ ಎರಡುವರ್ಷದಿಂದ ಪ್ರತಿವಾರ ತಾಲ್ಲೂಕು ಕೇಂದ್ರದಲ್ಲಿ ಜನಸ್ಪಂದನ ಸಭೆ ಯಶಸ್ವಿಯಾಗಿ ನಡೆದಿದೆ. ಈವರೆಗೆ ೧೦ ಸಾವಿರ ರೈತರಿಗೆ ಬಗರ್‌ಹುಕುಂ ನಲ್ಲಿ ಹಕ್ಕುಪತ್ರ ನೀಡಲಾಗಿದೆ. ಇದರ ಮುಂದುವರೆದ ಭಾಗದಂತೆ ವರ್ಷದೊಳಗೆ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳನ್ನೊಳಗೊಂಡ ಗ್ರಾಮ ಸಭೆ ನಡಸಲಾಗುವುದು. ಇದರಿಂದ ಅಲ್ಲಿನ ಜನರ ಸಮಸ್ಯೆಯನ್ನು ಅಲ್ಲಿಯೇ ಭಗೆಹರಿಸುವ ನಿಟ್ಟಿನಲ್ಲಿ ಈ ಯೋಜನೆ ಮಹತ್ವದ್ದಾಗಿದೆ, ಇದರಲ್ಲಿ ಹುಳಿಯಾರು ಪಟ್ಟಣ ಪಂಚಾಯಿತಿ ಹಾಗೂ ಚಿಕ್ಕನಾಯಕನಹಳ್ಳಿ ಪುರಸಭೆಯ ವಾರ್ಡ್ಗಳಲ್ಲೂ ಸಹ ಸಭೆ ನಡೆಸಲಾಗುವುದೆಂದರು. ನಾನು ಜನರೊಟ್ಟಿಗಿದ್ದು ಕೆಲಸ ಮಾಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ಯಶಸ್ವಿಯಾಗಿ ನಡೆಸುವ ಸದುದ್ದೇಶಹೊಂದಿದ್ದೇನೆ ಎಂದರು. ಸದರಿ ಯೋಜನೆ ಮೇ.೨ರಿಂದ ಆರಂಭಗೊಳ್ಳಲಿದೆ ಎಂದರು. ತಹಸೀಲ್ದಾರ್ ಕೆ.ಪುರಂದರ್ ಮಾತನಾಡಿ ಶಾಸಕರ ನೂತನ ‘ ಮನೆ ಬಾಗಿಲಿಗೆ ಮನೆಮಗ’ ಕಾರ್ಯಕ್ರಮ ಒಂದೆ ಸೂರಿನಡಿ ಜನರ ಹತ್ತು ಹಲವು ಸಮಸ್ಯೆಗಳ ನಿವಾರಣೆಗೆ ಒಂದು ಉತ್ತಮ ವೇದಿಕೆಯಾಗಲಿದೆ. ಈ ಪ್ರಯತ್ನ ವಿನೂತವೆನಿಸಿದೆ ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ದೊಡ್ಡಸಿದ್ದಯ್ಯ ಮಾತನಾಡಿ ಈ ಗ್ರಾಮ ಸಭೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಬೇಕೆಂದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು. ಕ್ಷೇತ್ರಶಿಕ್ಷಣಾಧಿಕಾರಿ ಸಿ.ಎಸ್. ಕಾಂತರಾಜು ಸ್ವಾಗತಿಸಿದರು.

(Visited 1 times, 1 visits today)