ತುಮಕೂರು:
ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನವನ್ನು ನಾವು ಅತ್ಯಂತ ಶ್ರದ್ಧೆ ಮತ್ತು ಭಕ್ತಿಯಿಂದ “ವಿಶ್ವ ಮಾನವ ದಿನಾಚರಣೆ”ಯನ್ನಾಗಿ ಆಚರಿಸುತ್ತಿದ್ದು, ರೈತರು ಬೆಳೆದ ಬೆಳೆಗೆ ಮತ್ತು ರೈತರ ಆತ್ಮಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ ಕುವೆಂಪು ಅವರೇ ಮಹಾನ್ ಚೇತನ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ಅವರು ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್‍ನ ಸಂಯುಕ್ತಾಶ್ರಯದಲ್ಲಿಂದು ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ “ವಿಶ್ವ ಮಾನವ ದಿನಾಚರಣೆ”ಯನ್ನು ಉದ್ಘಾಟಿಸಿ ಮಾತನಾಡಿದರು.
ಕುವೆಂಪು ಅವರು ತೀರ್ಥಹಳ್ಳಿಯಲ್ಲಿ ಹುಟ್ಟಿ, ಅತ್ಯಂತ ಸರಳ ವಿಚಾರ, ಸಾಹಿತ್ಯ, ಕಾವ್ಯಗಳನ್ನು ರಚಿಸಿ ಜನರ ಮನ ಮುಟ್ಟುವಂತೆ ಮಾಡಿದ್ದಾರೆ. ಅವರಿಂದ ಕನ್ನಡ ಸಾಹಿತ್ಯಕ್ಕೆ ಅನೇಕ ಪ್ರಶಸ್ತಿಗಳು ದೊರೆತಿವೆ. ವಿಶ್ವ ಮಾನವ ತತ್ವವನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ ರಾಷ್ಟ್ರ ಕವಿ ಕುವೆಂಪು ಎಂದು ಹೇಳಬಹುದು ಎಂದರು.
ರೈತರು ಬೆಳೆದಂತಹ ಬೆಳೆಗೆ ಬೆಂಬಲ ಬೆಲೆ ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು ಹಾಗೂ ರೈತರಿಗೂ ಗೌರವ ಡಾಕ್ಟರೇಟ್ ಪ್ರಶಸ್ತಿ ಕೊಟ್ಟು ಗೌರವಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ನಾನು ಮನವಿ ಮಾಡಿದ್ದೇನೆ. ನಾವು ಏನಾದರೂ ಸಾಧನೆ ಮಾಡಬೇಕು ಎಂದರೆ ಅದಕ್ಕೆ ಕುವೆಂಪುರಂತಹ ಮಹಾನ್ ಚೇತನಗಳೇ ಕಾರಣ ಎಂದರು.
ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಷಿಯಲ್ ವರ್ಕ್‍ನ ಪ್ರಾಂಶುಪಾಲ ಪ್ರೊ. ಟಿ.ಗಂಗಾಧರಯ್ಯ ಅವರು ಮಾತನಾಡಿ, ಕುವೆಂಪು ಅವರು ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯವನ್ನು ರಚಿಸಿದ್ದರು. ಅವರು ಇಡೀ ಸಾಹಿತ್ಯ ಜಗತ್ತಿನಲ್ಲಿರುವ ಅಂಶಗಳ ಬಗ್ಗೆ ತಿಳಿಸಿದ್ದಾರೆ. ಕೆಲವೊಂದು ಕುವೆಂಪು ಅವರ ಕೃತಿಯನ್ನು ಓದಿದರೆ ಪ್ರಕೃತಿಯೇ ಕಣ್ಣ ಮುಂದೆ ಬಂದಂತಾಗುತ್ತದೆ. ಇಡೀ ಪ್ರಕೃತಿ ವರ್ಣನೆಯನ್ನು ಮಾಡುವುದು ಕುವೆಂಪು ಅವರ ಸಾಹಿತ್ಯದಲ್ಲಿ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ. ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪುರಸ್ಕøತ ಡಾ: ಲಕ್ಷ್ಮಣ್ ದಾಸ್, ಗುರುಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಹೆಚ್.ಜಿ.ಬಸವರಾಜು, ಖ್ಯಾತ ಸಾಹಿತಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಗುರುಶ್ರೀ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಜರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕೆಂಕೆರೆ ಮಲ್ಲಿಕಾರ್ಜುನ ತಂಡದವರಿಂದ ಕುವೆಂಪು ವಿರಚಿತ ಹಾಡುಗಳ ಗಾಯನ ನಡೆಯಿತು.