ತುಮಕೂರು:

      ಕಳೆದ ವರ್ಷದಂತೆ ಈ ವರ್ಷವೂ ಜನವರಿ 5 ಹಾಗೂ 6ರಂದು ನಗರದ ಗಾಜಿನಮನೆಯಲ್ಲಿ “ಜಿಲ್ಲಾ ಮಟ್ಟದ ಸಾವಯವ ಮತ್ತು ಸಿರಿಧಾನ್ಯ ಮೇಳ”ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

     ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯಲ್ಲಿಂದು ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಬೆಂಗಳೂರಿನಲ್ಲಿ ಜನವರಿ 18ರಂದು ರಾಜ್ಯ ಮಟ್ಟದ ಮೇಳ ನಡೆಯುವುದರಿಂದ ಅದಕ್ಕೂ ಮುನ್ನ ಜಿಲ್ಲೆಯಲ್ಲಿ ಈ ಮೇಳವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಮೇಳದಲ್ಲಿ ರೈತರು ಬೆಳೆದ ವಿವಿಧ ಬಗೆಯ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುವುದಲ್ಲದೆ, ಸಾರ್ವಜನಿಕರಿಗೆ ಸಿರಿಧಾನ್ಯಗಳ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಲಾಗುವುದೆಂದರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಜಿಲ್ಲೆಯ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಡೆಯಲಿರುವ ಈ ಮೇಳಕ್ಕೆ ಜಿಲ್ಲೆಯ ಸುಮಾರು 10 ಸಾವಿರ ರೈತರು ಆಗಮಿಸಲಿದ್ದಾರೆ ಎನ್ನುವ ನಿರೀಕ್ಷೆಯಿದೆ. ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಉತ್ತಮವಾಗಿ ಆಯೋಜಿಸಲು ಈಗಾಗಲೇ ತಯಾರಿ ನಡೆಸಲಾಗುತ್ತಿದೆ. ಈ ಮೇಳವನ್ನು ಏರ್ಪಡಿಸಲು ಕೃಷಿ ಇಲಾಖೆಯಿಂದ 7 ಲಕ್ಷ ರೂ.ಗಳ ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.

      ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬರಗಾಲ ಇರುವುದರಿಂದ ರೈತರಿಗೆ ಈ ಮೇಳ ಪ್ರಯೋಜನವಾಗಲಿದೆ. ಮೇಳದಲ್ಲಿ ಸುಮಾರು 100 ಮಳಿಗೆಗಳನ್ನು ತೆರೆದು ಸಾವಯವ ಕೃಷಿ ಪದ್ಧತಿಯಿಂದಾಗುವ ಪ್ರಯೋಜನಗಳು, ವಿವಿಧ ತಳಿಗಳ ಸಿರಿಧಾನ್ಯಗಳ ಬಗ್ಗೆ ಮಾಹಿತಿ, ಪ್ರದರ್ಶನ ಹಾಗೂ ಮಾರಾಟ ಮಾಡಲಾಗುವುದು. ಮೇಳವನ್ನು ವಾರಾಂತ್ಯದಲ್ಲಿ ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ರೈತರು, ಸಾರ್ವಜನಿಕರು ಬಿಡುವು ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಮೇಳಕ್ಕೆ ಭೇಟಿ ನೀಡಿ ಪ್ರಯೋಜನ ಪಡೆಯಬೇಕೆಂದರು.

      ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅವರು ಉದ್ಘಾಟಿಸುವರು. ಕೃಷಿ ಸಚಿವ ಎನ್.ಹೆಚ್.ಶಿವಶಂಕರ್‍ರೆಡ್ಡಿ ಸಾವಯವ ಮಳಿಗೆಗಳನ್ನು ಉದ್ಘಾಟಿಸುವರು. ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್, ಶಾಸಕ ಜಿ.ಬಿ. ಜ್ಯೋತಿಗಣೇಶ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಸಂಸದ ಎಸ್.ಪಿ. ಮುದ್ದಹನುಮೇಗೌಡ ಮತ್ತಿತರ ಜನಪ್ರತಿನಿಧಿಗಳು ಭಾಗವಹಿಸುವರು ಎಂದರು.

      ಮೇಳದ ಪ್ರಯುಕ್ತ ಜನವರಿ 5ರಂದು ಮಧ್ಯಾಹ್ನ 3 ಗಂಟೆಗೆ ತಾಂತ್ರಿಕ ಸಮಾವೇಶ ನಡೆಯಲಿದ್ದು, ಸಮಾವೇಶವನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಿರಿಧಾನ್ಯ ಆಹಾರ ತಜ್ಞ ಡಾ|| ಸುರೇಶ್ ಕೆ.ಬಿ. ಹಾಗೂ ಚಿ.ನಾ.ಹಳ್ಳಿ ತಾಲ್ಲೂಕು ಗೋಪಾಲನಹಳ್ಳಿ ಹಾರಕ ಬೆಳಗಾರರ ಸಂಘದ ರಘು ನಡೆಸಿಕೊಡಲಿದ್ದಾರೆ. ನಂತರ 6 ಗಂಟೆಯಿಂದ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನ ಭೂಮಿಕಾ ಮತ್ತು ತಂಡದವರು ಸಾಂಸ್ಕøತಿಕ ಸಿರಿ ಹಾಗೂ ಸುಧಾ ಬರಗೂರು ಮತ್ತು ತಂಡದವರು ಹಾಸ್ಯಸಿರಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ತಿಳಿಸಿದರು.

      ರೈತರಿಗೆ ಸಾವಯವ ಕೃಷಿ ಕುರಿತು ಮಾಹಿತಿ ನೀಡುವ ಸಲುವಾಗಿ ಜನವರಿ 6 ರಂದು ಬೆಳಿಗ್ಗೆ 11 ಗಂಟೆಯಿಂದ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ತುಮಕೂರು ಚನ್ನಿಗಪ್ಪ ಪಾಳ್ಯದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಕ ಮಹೇಶ್, ಕುರಿಕೆಂಪನಹಳ್ಳಿಯ ಸಾವಯವ ಕೃಷಿಕ ಅಫೀಜ್‍ವುಲ್ಲಾ ಖಾನ್, ಕಲ್ಮಠದ ಯುವ ರೈತ ಕೆ.ಟಿ.ಪರಮೇಶ್, ಕೊರಟಗೆರೆ ತಾಲ್ಲೂಕು ಪಾತಗಾನಹಳ್ಳಿಯ ನಾಗರಾಜು ಸಂವಾದ ನಡೆಸಿಕೊಡಲಿದ್ದಾರೆ. ನಂತರ ಮಧ್ಯಾಹ್ನ 3 ಗಂಟೆಯಿಂದ ‘ತಾರಸಿ ಕೈತೋಟ’ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಯಿಂದ ಜಿ ಕನ್ನಡ ಸರಿಗಮಪ ಖ್ಯಾತಿಯ ವೇಣುಗೋಪಾಲ್, ಅರವಿಂದ್, ದೀಕ್ಷಾ, ಇಂಪನ, ಮೆಹಬೂಬ್ ಸಾಬ್ ಮತ್ತು ತಂಡದವರು ಗಾನಸಿರಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

    ಜ.2ರಂದು ಜಾಥಾ:-

      “ಸಾವಯವ ಮತ್ತು ಸಿರಿಧಾನ್ಯ ವಾಣಿಜ್ಯ ಮೇಳ”ದ ಅಂಗವಾಗಿ ನಾಗರಿಕರಿಗೆ ಅರಿವು ಮೂಡಿಸುವ ಸಲುವಾಗಿ ಜನವರಿ 2ರಂದು ಬೆಳಿಗ್ಗೆ 6 ಗಂಟೆಗೆ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಎಸ್.ಎಸ್.ಪುರಂ ಮುಖ್ಯರಸ್ತೆ, ಎಸ್.ಐ.ಟಿ., ಬಿ.ಹೆಚ್.ರಸ್ತೆ, ಶಿವಕುಮಾರ ಸ್ವಾಮೀಜಿ ವೃತ್ತ ಮಾರ್ಗವಾಗಿ ಮಹಾತ್ಮಗಾಂಧಿ ಕ್ರೀಡಾಂಗಣದವರೆಗೆ ಸಿರಿಧಾನ್ಯ ನಡಿಗೆಯನ್ನು ಏರ್ಪಡಿಸಲಾಗಿದ್ದು, ರೈತಬಾಂಧವರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿಬೇಕೆಂದು ಅವರು ಮನವಿ ಮಾಡಿದರು.

      ಈ ಸಂದರ್ಭದಲ್ಲಿ ಸಿರಿಧಾನ್ಯ ಮೇಳದ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಯಸ್ವಾಮಿ, ಉಪನಿರ್ದೇಶಕರುಗಳಾದ ಉಮೇಶ್ ಹಾಗೂ ಅಶೋಕ್, ಜಿಲ್ಲೆಯ ಪ್ರಾಂತೀಯ ಸಹಕಾರ ಸಾವಯವ ಕೃಷಿಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗೋವಿಂದರಾಜು ಉಪಸ್ಥಿತರಿದ್ದರು.

(Visited 45 times, 1 visits today)