ತುಮಕೂರು:
ನಗರದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿಯಲ್ಲಿ ಮನೆ ಮನೆಗೆ ಅಡುಗೆ ಅನಿಲ ಸರಬರಾಜು ಮಾಡುವ ಪೈಪ್‍ಲೈನ್ ಅಳವಡಿಸುವ ಕಾಮಗಾರಿಗೆ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಶೆಟ್ಟಿಹಳ್ಳಿ ವೃತ್ತದ ದೋಬಿಘಾಟ್ ರಸ್ತೆಯಲ್ಲಿ ಚಾಲನೆ ನೀಡಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ 50ಃ50ರ ಅನುದಾನದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಯೋಜಯ ಪಿಪಿಪಿ ಮಾಡಲ್‍ನಲ್ಲಿ ಮನೆಮನೆಗೆ ಅಡುಗೆ ಅನಿಲ ವಿತರಿಸುವ ಪೈಪ್‍ಲೈನ್ ಕಾಮಗಾರಿಯ ಜವಾಬ್ದಾರಿಯನ್ನು ಮೇಗಾ ಗ್ಯಾಸ್ ಏಜೆನ್ಸಿಗೆ ನೀಡಲಾಗಿದೆ.ಮುಂದಿನ ಐದು ವರ್ಷದಲ್ಲಿ ನಗರದ ಎಲ್ಲಾ ಮನೆಗಳಿಗೂ ಪೈಪ್‍ಲೈನ್ ಮೂಲಕವೇ ಅಡುಗೆ ಅನಿಲ ವಿತರಣೆಯಾಗಲಿದೆ ಎಂದು ಶಾಸಕ ಜೋತಿ ಗಣೇಶ್ ತಿಳಿಸಿದ್ದಾರೆ.
ಅಭಿವೃದ್ದಿ ಕಾಮಗಾರಿಗಳು ನಡೆಯುವಾಗ ರಸ್ತೆ ಅಗೆಯುವುದು ಸಹಜ.24*7 ನಿರಂತರ ಕುಡಿಯುವ ನೀರು ಸರಬರಾಜು, ಯುಜಿಡಿ,ಜಿಯೋ ಬ್ರಾಡ್‍ಬಾಂಡ್ ಪೈಪ್‍ಲೈನ್,ಅಡುಗೆ ಅನಿಲ ಸರಬರಾಜು ಹಾಗೂ ವಿದ್ಯುತ್ ಸಂಪರ್ಕಕ್ಕೆ ಸಹ ಕಾಮಗಾರಿಗಳು ನಡೆಯುತ್ತಿದ್ದು, ರಸ್ತೆ ಅಗೆಯುವ ಕಾಮಗಾರಿ ನಡೆಯುವಾಗ ಹಾಲಿ ಇರುವ ಟೆಲಿಪೋನ್,ಕುಡಿಯುವ ನೀರಿನ ಪೈಪ್‍ಲೈನ್ ಸಂಪರ್ಕಕ್ಕೆ ತೊಂದರೆಯಾದರೆ ಗುತ್ತಿಗೆದಾರರೇ ಸರಿಪಡಿಸಿಕೊಡಲು ಸೂಚಿಸಲಾಗಿದೆ. ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಶಾಸಕರು ಸಲಹೆ ನೀಡಿದರು.
ನಗರದ 26ನೇ ವಾರ್ಡಿನ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಶಾಸಕ ಜಿ.ಬಿ.ಜೋತಿಗಣೇಶ್ ನೇತೃತ್ವದಲ್ಲಿ ನಮ್ಮ ವಾರ್ಡಿನಲ್ಲಿ ಪ್ರಥಮ ಎನ್ನುವಂತೆ ಹಲವು ನಡೆಯುತ್ತಿವೆ.ನಿರಂತರ ಕುಡಿಯುವ ನೀರು, ಮನೆಮನೆಗೆ ಪೈಪ್‍ಲೈನ್ ಮೂಲಕ ಗ್ಯಾಸ್ ವಿತರಣೆ.
ಪ್ರತಿ ಮನೆಗೆ ಶುದ್ದೀಕರಿಸಿದ ಕುಡಿಯುವ ನೀರು,ವಿದ್ಯುತ್ ಕಂಬಗಳಿಗೆ ಎಇಡಿ ಲೈಟ್ ಅಳವಡಿಕೆ ಸೇರಿದಂತೆ ಹತ್ತು ಹಲವು ಕಾಮಗಾರಿಗಳು ಜರುಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆಗಳ ಮುಂದೆ ಅಗೆದಾಗ ಗಲಾಟೆ ಮಾಡದೆ ಸಹಕರಿಸಿ, ಕಾಮಗಾರಿ ಮುಗಿಯುವವರೆಗೆ ದೂಳು ಎಳದಂತೆ ದಿನಕ್ಕೆ ಎರಡು ಬಾರಿ ನೀರು ಹಾಕುವ ಮೂಲಕ, ಮನೆಯಲ್ಲಿ ದೂಳು ತಡೆ ಮಾಸ್ಕ ಬಳಸುವ ಕೆಲಸ ಮಾಡಬೇಕು. ಇದು ಜನತೆ ದೃಷ್ಟಿಯಿಂದ ಮಾಡುತ್ತಿರುವ ಕಾಮಗಾರಿಯಾಗಿದ್ದು, ಜನರ ಸಹಕಾರ ದೊರೆತರೆ ಬಹುಬೇಗ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯ ಎಂದು ಮನವಿ ಮಾಡಿದರು.
ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್,ಬಿಜೆಪಿ ಮುಖಂಡರಾದ ಕೊಪ್ಪಲ್‍ನಾಗರಾಜು, ಮಾಜಿ ಸದಸ್ಯೆ ಸುಜಾತ ಚಂದ್ರಶೇಖರ್,ಮುಖಂಡರಾದ ಗೀತಾ, ಜೋತಿ, ಸುಜಾತ, ವಿನಯಜೈನ್, ಮಾಜಿ ಪ್ರಾಂಶುಪಾಲರಾದ ಮರುಳಯ್ಯ,ಗಡ್ಡ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.