ತುಮಕೂರು:

      ಜನವರಿ 8 ಮತ್ತು 9ರಂದು ದೇಶವ್ಯಾಪಿ ಸಾರ್ವತ್ರಿಕ ಮುಷ್ಕರ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ತುಮಕೂರು ನಗರದಲ್ಲಿ ಪ್ರಚಾರಾಂದೋಲನ ಮತ್ತು ಬೀದಿಬದಿ ಸಭೆಗಳಿಗೆ ಚಾಲನೆ ನೀಡಲಾಯಿತು. ಪ್ರಚಾರಾಂದೋಲನದಲ್ಲಿ ಜನರಿಗೆ ಕರಪತ್ರಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ನಿರಂತರ ಸಭೆಗಳನ್ನು ಮಾಡಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಲಾಯಿತು.

      ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ನೂರಾರು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ. ಅವರ ಆಶಯಗಳು ಮತ್ತು ದೇಶದ ಸಂಪತ್ತನ್ನು ಉಳಿಸಲು ನಡೆಸುವ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.

      ಸ್ವಾತಂತ್ರ್ಯ ಚೌಕದಲ್ಲಿ ನಡೆದ ಪ್ರಚಾರಾಂದೋಲನದಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಾಕಷ್ಟು ಸಮಸ್ಯೆಗಳು ಉದ್ಭವಿಸಿವೆ. ಈ ಸಮಸ್ಯೆಗಳನ್ನು ಬಗೆಹರಿಸುವುದು ಬಿಟ್ಟು ಕೇಂದ್ರ ಸರ್ಕಾರ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವ ಯತ್ನ ಮಾಡುತ್ತಲೇ ಇದೆ. ಹೀಗಾಗಿ ಜನವರಿ 8 ಮತ್ತು 9ರಂದು ದೇಶದ ಉಳಿವಿಗಾಗಿ ದೇಶಪ್ರೇಮಿಗಳು, ಕಾರ್ಮಿಕರು, ವ್ಯಾಪಾರಿಗಳು ವಿದ್ಯಾರ್ಥಿ ಯುವ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

      ಕಾರ್ಮಿಕರ ಕಾನೂನು ತಿದ್ದುಪಡಿ ಮಾಡುವುದನ್ನು ನಿಲ್ಲಿಸಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಠ 18 ಸಾವಿರ ವೇತನ ನೀಡಬೇಕು. ತುಮಕೂರು ಜಿಲ್ಲೆಯ ಸಮಗ್ರ ನೀರಾವರಿಗೆ ಕ್ರಮ ಕೈಗೊಳ್ಳಬೇಕು. ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು vಡೆಯಬೇಕು. ರೈತರ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡಬೇಕು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.

      ಇದೇ ವೇಳೆ ಬಿಎಸ್‍ಎನ್‍ಎಲ್ ಪ್ರಧಾನ ಕಚೇರಿ ಮುಂದೆ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯಿಂದ ಜಾಗೃತಿ ಸಭೆ ನಡೆಸಲಾಯಿತು. ಎಐಟಿಯುಸಿ ಕಾರ್ಯದರ್ಶಿ ಗಿರೀಶ್ ಮಾತನಾಡಿ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ಮಾತನಾಡಿದರು. ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

      ಎಐಯುಟಿಯುಸಿ ಸಂಘಟನೆಯ ಮುಖಂಡ ಎಸ್.ಎನ್.ಸ್ವಾಮಿ ಮಾತನಾಡಿ ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಪಡಿಸ ಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆ ಯನ್ನು ಕೈಬಿಡಬೇಕು ಎಂದು ಹೇಳಿದರು.

      ಪ್ರಚಾರಾಂದೋಲನದಲ್ಲಿ ಸಿಐಟಿಯು ಮುಖಂಡರಾದ ಲಕ್ಷ್ಮಣ್, ಖಲೀಲ್, ಮುಖಂಡರಾದ ರತ್ನಮ್ಮ, ಮಂಜುಳ, ಅಶ್ವಿನಿ, ಎಐಟಿಯುಸಿ ಮುಖಂಡ ಸತ್ಯನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

(Visited 9 times, 1 visits today)