ತುಮಕೂರು :
ನಡೆದಾಡುವ ದೇವರು ಸಿದ್ದಗಂಗಾ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಆರೋಗ್ಯವಾಗಿದ್ದಾರೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಇಂದಿಲ್ಲಿ ತಿಳಿಸಿದರು.
ನಗರದ ಸಿದ್ದಗಂಗಾ ಮಠಕ್ಕೆ ತಮ್ಮ ಪತ್ನಿ ಆಶಾಪಾಟೀಲ್ ಅವರೊಂದಿಗೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿರುವ ಕೊಠಡಿಗೆ ತೆರಳಿ ಶ್ರೀಗಳ ಆರೋಗ್ಯ ವಿಚಾರಿಸಿ, ಆಶೀರ್ವಾದ ಪಡೆದಿದ್ದೇನೆ. ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಎಲ್ಲ ಪ್ಯಾರಮೀಟರ್ ಚೆನ್ನಾಗಿದೆ ಎಂದರು.
ಶ್ರೀಗಳ ಆರೋಗ್ಯ ಕುರಿತು ವೈದ್ಯರೊಂದಿಗೂ ಚರ್ಚಿಸಿದ್ದೇನೆ. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಶ್ರೀಗಳನ್ನು ಬಹಳಷ್ಟು ಜಾಗರೂಕತೆಯಿಂದ ನೋಡಿಕೊಳ್ಳಲಾಗುತ್ತಿದೆ. ಶ್ರೀಗಳನ್ನು ನೋಡಲು ಹೋದ ಸಂದರ್ಭದಲ್ಲಿ ಸೋಂಕು ತಗುಲಬಾರದು ಎಂಬ ಉದ್ದೇಶದಿಂದ ನಮ್ಮೆಲ್ಲರಿಗೂ ಮಾಸ್ಕ್ ಹಾಕಿ ಒಳಗೆ ಪ್ರವೇಶ ನೀಡಲಾಯಿತು ಎಂದ ಅವರು, ವೈದ್ಯರು ಶ್ರೀಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದು ಶೀಘ್ರ ಗುಣಮುಖರಾಗಲಿದ್ದಾರೆ ಎಂದರು.
ಶ್ರೀಗಳು ಇನ್ನೂ ಹಲವು ದಶಕಗಳ ಕಾಲ ಬದುಕಿ ನಾಡಿನ ಮತ್ತು ಸಮಾಜದ ಜನತೆಗೆ ಆಶೀರ್ವಾದ ನೀಡುವ ಜತೆಗೆ ಮಾರ್ಗದರ್ಶನ ಮಾಡಬೇಕು ಎಂಬುದು ನಮ್ಮೆಲ್ಲರ ಆಶಯ. ಅದೇ ರೀತಿ ಶ್ರೀಗಳು ಸಹ ಬೇಗ ಗುಣಮುಖರಾಗಿ ನಮಗೆ ಮಾರ್ಗದರ್ಶನ ನೀಡಲಿದ್ದಾರೆ. ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದರು.
ಶ್ರೀಗಳು ಕ್ಷೇಮವಾಗಿದ್ದಾರೆ. ಸದ್ಯಕ್ಕೆ ನನ್ನ ಜತೆ ಮಾತನಾಡಲಿಲ್ಲ. ರಕ್ತದೊತ್ತಡ ಸೇರಿದಂತೆ ಎಲ್ಲ ಪ್ಯಾರಮೀಟರ್ ಉಸಿರಾಟ ಚೆನ್ನಾಗಿದೆ. ಯಾರೂ ಸಹ ಸುಳ್ಳು ವದಂತಿಗಳನ್ನು ಹಬ್ಬಿಸಬಾರದು ಎಂದು ಮನವಿ ಮಾಡಿದರು.
ಶ್ರೀಗಳು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಇಡೀ ದೇಶ ಮತ್ತು ವಿಶ್ವಕ್ಕೆ ಅವರು ಮಾದರಿಯಾದಂತವರು. ಅವರ ಆರೋಗ್ಯದ ಬಗ್ಗೆ ಅನೇಕರು ಆತಂಕದಲ್ಲಿದ್ದಾರೆ. ಕೆಲ ಸುಳ್ಳು ವದಂತಿಗಳು ಕೂಡ ಹರಿದಾಡುತ್ತಿವೆ. ಆದರೆ ನಾನೇ ಸ್ವತಃ ಹಳೇ ಮಠದ ಕೊಠಡಿಗೆ ತೆರಳಿ ಶ್ರೀಗಳನ್ನು ನೋಡಿದ್ದೇನೆ. ಯಾವುದೇ ಆತಂಕವಿಲ್ಲ. ಶೀಘ್ರ ಗುಣಮುಖರಾಗಲಿದ್ದಾರೆ ಎಂದು ಅವರು ಹೇಳಿದರು.
ಶ್ರೀಗಳು ಶೀಘ್ರ ಗುಣುಮುಖರಾಗಲಿ ಇನ್ನು ಹಲವು ದಶಕಗಳ ನಮ್ಮಗೆ ಮಾರ್ಗದರ್ಶನ ನೀಡುವಂತೆ ಆರೋಗ್ಯ ಕರುಣಿಸಲಿ ಎಂದು ಭಗವಂತನಲ್ಲಿ ನಾವೆಲ್ಲರೂ ಪ್ರಾರ್ಥಿಸೋಣ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಸ್. ಷಫಿಅಹಮದ್, ಡಾ. ರಫೀಕ್‍ಅಹಮದ್ ಮತ್ತಿತರರು ಉಪಸ್ಥಿತರಿದ್ದರು.