ತುಮಕೂರು:

      ಮಹಿಳೆಯರು ಶಬರಿಮಲೆ ದೇಗುಲವ ಪ್ರವೇಶಿಸಿರುವುದು ದಾಖಲೆಗಷ್ಟೇ ಹೊರತು ಅವರಿಗೆ ದೇವರ ದರ್ಶನವಾಗಿಲ್ಲ, ಮಹಿಳೆಯರನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸುವಂತಹ ಅಚಾತುರ್ಯವನ್ನು ಕೇರಳ ಸರ್ಕಾರ ಮಾಡಿರುವುದು ಸರಿಯಲ್ಲ ಎಂದು ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು.

      ನಗರದ ಟೌನ್‍ಹಾಲ್ ಸರ್ಕಲ್‍ನಲ್ಲಿ ಶಬರಿಮಲೆಗೆ ಮಹಿಳೆಯ ಪ್ರವೇಶಿಸಿರುವುದನ್ನು ವಿರೋಧಿಸಿ ಹಿಂದೂ ಪರ ಸಂಘಟನೆಗಳು ನಡೆಸಿದ ಮಾನವ ಸರಪಳಿ ನಿರ್ಮಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಬರಿಮಲೆಗೆ ಮಹಿಳೆಯರನ್ನು ಕರೆದುಕೊಂಡು ಹೋಗಿ ದರ್ಶನ ಮಾಡಿಸಿರುವ ಪಿಣರಾಯಿ ಅವರ ಕಮ್ಯುನಿಸ್ಟ್ ಸರ್ಕಾರ ಅಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆಯನ್ನು ಮಾಡಿದೆ, ಪಿಣರಾಯಿ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಎಲ್ಲ ಸಂಘಟನೆಗಳೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

      ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಈಗಾಗಲೇ ಕೇರಳದಲ್ಲಿ ಅಯ್ಯಪ್ಪಸ್ವಾಮಿ ಆ್ಯಕ್ಷನ್ ಕೌನ್ಸಿಲ್ ಮೂಲಕ ಹೋರಾಟಕ್ಕೆ ಮುಂದಾಗಿದೆ. ಈ ಕೌನ್ಸಿಲ್‍ನ ಹೆಸರಲ್ಲಿನ ಇಂದು ಕೇರಳ ಬಂದ್‍ಗೆ ಕರೆ ನೀಡಲಾಗಿದೆ, 14 ರಾಜ್ಯಗಳಲ್ಲಿ ಶಬರಿಮಲೆಗೆ ಮಹಿಳೆಯರ ಪ್ರವೇಶದ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ಕೇರಳಬಂದ್‍ಗೆ ಬೆಂಬಲ ನೀಡಲಾಗುತ್ತಿದೆ. ಪಿಣರಾಯಿ ಸರ್ಕಾರಕ್ಕೆ ಇದು ಕೊನೆಗಾಲವಾಗಿದ್ದು, ಹಿಂದೂ ಭಾವನೆಗಳ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ನಿಲ್ಲಿಸದೇ ಹೋದಲ್ಲಿ ತೀವ್ರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದರು.

      ಹಿಂದೂ ಜಾಗರಣ ವೇದಿಕೆಯ ಜಿ.ಎಸ್.ಬಸವರಾಜು ಮಾತನಾಡಿ, ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶದ ಹಿಂದೆ ಅಂತರಾಷ್ಟ್ರೀಯ ಕುತಂತ್ರವಿದ್ದು, ಕಮ್ಯುನಿಸ್ಟ್ ಸರ್ಕಾರ ಈ ಕುತಂತ್ರಕ್ಕೆ ಕುಮ್ಮಕ್ಕು ನೀಡುವ ಮೂಲಕ ಅನ್ಯಧರ್ಮಿಯ ಮಹಿಳೆಯರನ್ನು ಶಬರಿಮಲೆ ದೇಗುಲ ಪ್ರವೇಶಿಸುವಂತೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು.

      ಭಾರತದಲ್ಲಿರುವ 24 ಲಕ್ಷ ದೇಗುಲಗಳಲ್ಲಿ ಕೆಲವೇ ಕೆಲವು ದೇಗುಲಗಳಿಗಷ್ಟೇ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ, ಹಾಗೆಯೇ ಕೆಲವು ದೇಗುಲಗಳಿಗೆ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ ಈ ದೇಗುಲಗಳ ಪ್ರವೇಶಕ್ಕೆ ಯಾರು ಸುಪ್ರೀಂಕೋರ್ಟ್ ಮೊರೆ ಹೋಗುವುದಿಲ್ಲ, ದಕ್ಷಿಣ ಭಾರತದಲ್ಲಿಯೇ 4-5 ಕೋಟಿ ಭಕ್ತರು ಪ್ರತಿ ವರ್ಷ ಹೋಗುವ ಶಬರಿ ಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂಕೋರ್ಟ್ ಮೊರೆ ಹೋಗುವ ಮೂಲಕ, ದೇಗುಲದ ಪಾವಿತ್ರ್ಯತೆಯನ್ನು ಹಾಳು ಮಾಡುವ ಪ್ರಯತ್ನವನ್ನು ಕೆಲ ಪ್ರಗತಿಪರರೊಂದಿಗೆ ಸೇರಿಕೊಂಡು ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಪಿಣರಾಯಿ ಸರ್ಕಾರ ಹಿಂದೂ ವಿರೋಧಿ ಧೋರಣೆ ಅನುಸರಿಸುವುದನ್ನು ಬಿಡಬೇಕಿದೆ, ಹಿಂದೂಗಳನ್ನು ಕೆರಳಿಸಬೇಡಿ, ಹಿಂದೂಗಳು ಕೆರಳಿದರೆ ಗೋಧ್ರಾ ಘಟನೆ ನಂತರ ಪರಿಣಾಮ ಎದುರಿಸಬೇಕಾಗುತ್ತದೆ, ಸುಪ್ರೀಂಕೋರ್ಟ್ ಆದೇಶದ ಹೆಸರಿನಲ್ಲಿ ಕಮ್ಯುನಿಸ್ಟ್ ಸರ್ಕಾರ ಕುತಂತ್ರದ ಹಿಂದೂಗಳನ್ನು ಹಣೆಯುವ ಪ್ರಯತ್ನವನ್ನು ಬಿಡಬೇಕು ಎಂದು ಎಚ್ಚರಿಸಿದರು.

      ಭಜರಂಗ ದಳದ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ ಹಿಂದೂಗಳು ಇಂದು ದಾಸ್ಯರಾಗಿರುವುದರಿಂದಲೇ ಕಮ್ಯುನಿಸ್ಟ ಸರ್ಕಾರ ಹಿಂದೂ ದೇವರಿಗೆ ಅಪಚಾರ ಮಾಡುತ್ತಿದೆ. ಮುಸ್ಲಿಂ, ಕ್ರಿಶ್ಚಿಯನ್ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಪ್ರೇರೇಪಿಸುತ್ತಿದೆ. ಮುಸಲ್ಮಾನರಿಗೆ, ಬ್ರಿಟೀಷರಿಗೆ ಭಾರತವನ್ನಾಳಲು ಅವಕಾಶ ಮಾಡಿಕೊಟ್ಟಿದ್ದು ಸಹ ಹಿಂದೂಗಳು, ಅವರ ಸೌಮ್ಯತ್ವದಿಂದಲೇ ಇಂದು ಕಮ್ಯುನಿಸ್ಟರು ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು ವಿರೋಧಿಸದೇ ದಾಸ್ಯದಿಂದ ಬದುಕುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಹಿಂದೂಗಳು ಮೇಲೆ ಎಷ್ಟೇ ದಬ್ಬಾಳಿಕೆ ನಡೆದರೂ, ಹಿಂದೂಗಳು ಒಂದಾಗುವುದಿಲ್ಲ, ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿ ಸಂಪ್ರದಾಯವನ್ನು ಉಲ್ಲಂಘಿಸಿದಂತೆ, ಅನ್ಯ ಧರ್ಮದ ವಿಚಾರದಲ್ಲಿ ನಡೆದಿದ್ದರೆ ಎಲ್ಲರೂ ಒಂದಾಗಿ ವಿರೋಧಿಸುತ್ತಿದ್ದರು, ಹಿಂದೂ ಧರ್ಮವನ್ನು ಕಾಪಾಡಲು ಉಗ್ರ ಹೋರಾಟಕ್ಕೆ ಮುಂದಾಗಬೇಕಿದೆ, ಇದು ಅನಿವಾರ್ಯವಾಗಿದೆ ಎಂದು ಕರೆ ನೀಡಿದರು.

      ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂನ ಮುಖಂಡ ಕೃಷ್ಣಯ್ಯ ಮಾತನಾಡಿ, ಶಬರಿಮಲೆ ದೇಗುಲಕ್ಕೆ ಮುಸ್ಲಿಂ ಮಹಿಳೆಯೊಬ್ಬಳು ಪೊಲೀಸರೊಂದಿಗೆ ಪ್ರವೇಶಿಸಲು ಯತ್ನಿಸಿದಾಗ ಆಕೆ ಇರುಮಂಡಿಯಲ್ಲಿ ಒಳ ಉಡುಪುಗಳನ್ನು ತಂದಿದ್ದಳು, ಅಂತಹ ಧರ್ಮ ವಿರೋಧಿಗಳಿಗೆ ಕೇರಳ ಸರ್ಕಾರ ಬೆಂಬಲ ನೀಡುತ್ತಿದೆ, ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಬೇಕೆಂದು ಮಹಿಳೆಯರನ್ನು ದೇಗುಲಕ್ಕೆ ಮಾರುವೇಷದಲ್ಲಿ ಪೊಲೀಸರೊಂದಿಗೆ ಕಳುಹಿಸಿದೆ, ಮಹಿಳೆಯರು ದೇಗುಲಕ್ಕೆ ಹೋದರು ದೇವರ ದರ್ಶನವಾಗಿಲ್ಲ ಎನ್ನುವುದು ವಿಡಿಯೋದಲ್ಲಿಯೇ ಗೊತ್ತಾಗುತ್ತದೆ, ಅಯ್ಯಪ್ಪ ಸ್ವಾಮಿ ಭಕ್ತರು ಇದರ ವಿರುದ್ಧ ಹೋರಾಡದೇ ಇದ್ದಲ್ಲಿ ದೇಗುಲದ ಪವಿತ್ರತೆಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಕಳವಳ ವ್ಯಕ್ತಿಪಡಿಸಿದರು.

      ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ಜಿಲ್ಲಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಹುಲಿನಾಯ್ಕರ್ ಮಾತನಾಡಿದರು, ಪ್ರತಿಭಟನೆಯಲ್ಲಿ ಮುಖಂಡರಾದ ರವೀಶಯ್ಯ, ಜಿ.ಕೆ.ಶ್ರೀನಿವಾಸ್, ಧನುಶ್, ಶಿವಪ್ರಸಾದ್, ಪಾಲಿಕೆ ಸದಸ್ಯರಾದ ರಮೇಶ್, ವಿಷ್ಣು, ಗಿರಿಜಾ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

  

(Visited 50 times, 1 visits today)