ಬೆಂಗಳೂರು:
ಸ್ಯಾಂಡಲ್ ವುಡ್ ಗೆ ಗುರುವಾರ ಬೆಳಿಗ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಮುಂಜಾನೆ ಆರು ಗಂಟೆಗೆ ಕನ್ನಡ ಚಿತ್ರರಂಗದ ಸ್ಟಾರ್ ನಟರು ಹಾಗೂ ಸ್ಟಾರ್ ನಿರ್ಮಾಪಕರ ಮನೆ ಮೇಲೆ ದಾಳಿ ಮಾಡಿ ಗಾಬರಿ ಮೂಡಿಸಿದ್ದಾರೆ.
ಕನ್ನಡ ಚಿತ್ರರಂಗದ 8 ಜನ ಖ್ಯಾತ ನಟ ಹಾಗೂ ನಿರ್ಮಾಪಕರು ಮನೆ, ಕಛೇರಿ ಮತ್ತು ಸಂಬಂಧಿಕರ ಮನೆ ಮೇಲೆ ರೈಡ್ ಮಾಡಲಾಗಿದ್ದು, ಸುಮಾರು 200 ಅಧಿಕಾರಿಗಳು, ಬೆಂಗಳೂರಿನ 25 ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಈ ದಾಳಿಗೆ ಒಳಗಾಗಿರುವ ನಟ ಮತ್ತು ನಿರ್ಮಾಪಕರು ಸಾಮಾನ್ಯದವರಲ್ಲ. ಇಂಡಸ್ಟ್ರಿಯಲ್ಲಿ ಹೆಚ್ಚು ಖ್ಯಾತಿ ಮತ್ತು ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದರಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್:
ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಚಿನ್ನಾಭರಣಗಳು, ಹಣ, ಬ್ಯಾಂಕ್ ವ್ಯವಹಾರದ ದಾಖಲೆಗಳನ್ನು ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಯಶ್ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಸಿಕ್ಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯಕ್ಕೆ ಯಶ್ ಮನೆಯಲ್ಲಿಲ್ಲ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್:
ಐಟಿ ಅಧಿಕಾರಿಗಳ ದಾಳಿ ವೇಳೆ ಪುನೀತ್ ರಾಜ್ ಕುಮಾರ್ ಸ್ವತಃ ಮನೆಯಲ್ಲಿದ್ದರು. ಹೀಗಾಗಿ ಅವರಿಂದಲೇ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇನ್ನು, ಐಟಿ ಅಧಿಕಾರಿಗಳ ದಾಳಿ ನಡುವೆಯೇ ಅಧಿಕಾರಿಗಳ ಅನುಮತಿ ಪಡೆದು ಪುನೀತ್ ಪತ್ನಿ ಶಾಲೆಗೆ ಹೋಗಿದ್ದ ಮಗಳನ್ನು ಕರೆದುಕೊಂಡು ಬಂದಿದ್ದಾರೆ. ಅದರ ಹೊರತಾಗಿ ಯಾರನ್ನೂ ಮನೆಯಿಂದ ಹೊರಗೆ ಹೋಗಲು ಬಿಟ್ಟಿಲ್ಲ.
ಕಿಚ್ಚ ಸುದೀಪ್:
ದಾಳಿ ವೇಳೆ ಮೈಸೂರಿನಲ್ಲಿದ್ದ ಸುದೀಪ್ ಸುದ್ದಿ ತಿಳಿಯುತ್ತಿದ್ದಂತೇ ಸ್ಥಳಕ್ಕೆ ಆಗಮಿಸಿದ್ದಾರೆ. ಇದಕ್ಕೆ ಮೊದಲು ಮನೆಯಲ್ಲಿದ್ದ ತಾಯಿ ಬಳಿ ಬ್ಯಾಂಕ್ ವ್ಯವಹಾರಗಳ ಬಗ್ಗೆ ಮಾಹಿತಿ ಪಡೆಯಲಾಯಿತಾದರೂ ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇದೀಗ ಮನೆಗೆ ಆಗಮಿಸಿರುವ ಸುದೀಪ್ ಬಳಿ ಅಧಿಕಾರಿಗಳು ಮನೆಯಲ್ಲಿ ಸಿಕ್ಕ ಬ್ಯಾಂಕ್ ವ್ಯವಹಾರದ ಪತ್ರಗಳು, ಆಸ್ತಿ ಪತ್ರ ದಾಖಲೆಗಳ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.
ರಾಕ್ ಲೈನ್ ವೆಂಕಟೇಶ್:
ರಾಕ್ ಲೈನ್ ವೆಂಕಟೇಶ್ ಮನೆಯಲ್ಲಿ ಅಧಿಕಾರಿಗಳು ಪತ್ರ ವ್ಯವಹಾರಗಳ ಬಗ್ಗೆ ತನಿಖೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳ ಪ್ರಶ್ನೆಗಳಿಗೆ ಶಾಂತರಾಗಿಯೇ ಉತ್ತರಿಸಿರುವ ರಾಕ್ ಲೈನ್ ವೆಂಕಟೇಶ್ ತನಿಖೆಗೆ ಸಹಕಾರ ನೀಡುತ್ತಿದ್ದಾರೆ ಎನ್ನಲಾಗಿದೆ. ಇಲ್ಲಿಯೂ ಅಧಿಕಾರಿಗಳು ಮನೆಯವರನ್ನು ಹೊರಗಡೆ ಹೋಗಲು ಬಿಟ್ಟಿಲ್ಲ.
ವಿಜಯ್ ಕಿರಗಂದೂರು:
ಸದ್ಯ ಕೆಜಿಎಫ್ ಚಿತ್ರವನ್ನ ನಿರ್ಮಾಣ ಮಾಡಿ ಅತಿ ದೊಡ್ಡ ಗಳಿಕೆ ಕಂಡಿರುವ ನಿರ್ಮಾಪಕ ವಿಜಯ್ ಕಿರಗಂದೂರು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗರಬಾವಿಯಲ್ಲಿರುವ ನಿವಾಸಕ್ಕೆ ಮುಂಜಾನೆಯೇ ಐಟಿ ಆಫಿಸರ್ಸ್ ಎಂಟ್ರಿಯಾಗಿದ್ದಾರೆ.
ನಿರ್ಮಾಪಕ ಜಯಣ್ಣ
ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸಿನಿಮಾಗಳನ್ನ ಮಾಡ್ತಿರುವ ಖ್ಯಾತ ನಿರ್ಮಾಣ ಸಂಸ್ಥೆ ಜಯಣ್ಣ ಕಂಬೈನ್ಸ್ ಮಾಲೀಕ ಜಯಣ್ಣ ಅವರ ನಾಗರಬಾವಿ ಮನೆ ಮೇಲೆ ಐಟಿ ರೈಡ್ ಆಗಿದೆ. ‘ಮಿಸ್ಟರ್ ಅಂಡ್ ಮಿಸಸ್’ ‘ರಾಮಾಚಾರಿ’, ‘ಗೂಗ್ಲಿ’, ‘ರಣವಿಕ್ರಮ’, ‘ರುಸ್ತುಂ’ ಚಿತ್ರಗಳು ಸೇರಿದಂತೆ ಹಲವು ಬಿಗ್ ಬಜೆಟ್ ಚಿತ್ರಗಳನ್ನ ನಿರ್ಮಾಣ ಮಾಡಿದ್ದಾರೆ.