ತುಮಕೂರು:
ಸಾವಿರ ಮಕ್ಕಳ ತಾಯಿ ಪದ್ಮಶ್ರೀ ಡಾ.ಸೂಲಗಿತ್ತಿ ನರಸಮ್ಮ ಅವರ ಪಣ್ಯ ಸ್ಮರಣ ಅಂಗವಾಗಿ ಜನವರಿ 10 ರ ಬೆಳಗ್ಗೆ 11.30ಕ್ಕೆ ಸೂಲಗಿತ್ತಿ ನರಸಮ್ಮ ನೆನಪುಗಳು ಕವನ ಸಂಕಲನ ಬಿಡುಗಡೆ,ಡಾ.ಸೂಲಗಿತ್ತಿ ನರಸಮ್ಮ ಸ್ಮಾರಕ ಭವನ ಶಂಕುಸ್ಥಾಪನೆ ಸಮಾರಂಭವನ್ನು ಸೂಲಗಿತ್ತಿ ನರಸಮ್ಮ ಸ್ಮಾರಕ ಸ್ಥಳ ಗಂಗಸಂದ್ರ ವಾರ್ಡ್ ನಂ 11 ದೊಡ್ಡಸಾರಂಗಿ ಮುಖ್ಯರಸ್ತೆ ತುಮಕೂರು ಇಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸೇನೆಯ ಅಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಪಾವಗಡ ತಾಲೂಕಿನ ಕೃಷ್ಣಾಪುರದಲ್ಲಿ ಜನಿಸಿದ ಡಾ.ಸೂಲಗಿತ್ತಿ ನರಸಮ್ಮ ತಮ್ಮ ಹಿರಿಯರಿಂದ ಕಲಿತ ಸೂಲಿಗಿತ್ತಿ ವೃತ್ತಿಯನ್ನು ತನ್ನ ಇಳಿ ವಯಸ್ಸಿನವರೆಗೆ ಮುಂದುವರೆಸಿಕೊಂಡು ಬಂದಿದ್ದು,ಇದುವರೆಗೂ 15 ಸಾವಿರಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದಾರೆ.ಇವರಿಗೆ ಕೇಂದ್ರ ಸರಕಾರದ ಪ್ರತಿಷ್ಠಿತ ಪದ್ಮಶ್ರೀ, ವಯೋಶ್ರೇಷ್ಠ ಸನ್ಮಾನ್ ರಾಷ್ಟ್ರಪ್ರಶಸ್ತಿಯ ಜೊತೆಗೆ, ರಾಜ್ಯ ಸರಕಾರದ ಡಿ.ದೇವರಾಜ ಅರಸು, ಕಿತ್ತೂರು ರಾಣಿ ಚನ್ನಮ್ಮ, ತುಮಕೂರು ಜಿಲ್ಲಾಡಳಿತ ನೀಡುವ ಮಹಿಳಾ ಸಾಧಕಿ ಪ್ರಶಸ್ತಿ,ತುಮಕೂರು ವಿವಿಗೆ ಗೌರವ ಡಾಕ್ಟರೇಟ್ ಸೇರಿದಂತೆ 23ಕ್ಕೂ ಹೆಚ್ಚು ಪ್ರಶಸ್ತಿ ಬಂದಿದ್ದು,ಇವರ ಹೆಸರನ್ನು ಅಜರಾಮರವಾಗಿಸುವ ನಿಟ್ಟಿನಲ್ಲಿ ಕನ್ನಡ ಸೇನೆ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ಮಾರಕ ನಿರ್ಮಾಣ, ಕವನ ಸಂಕಲನ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಯು.ಟಿ.ಖಾದರ್, ವೆಂಕಟರಮಣಪ್ಪ, ಎಸ್.ಆರ್. ಶ್ರೀನಿವಾಸ್,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಸಂಸದರಾದ ಶೋಭಾ ಕರಂದ್ಲಾಜೆ, ತುಮಕೂರು ಜಿಲ್ಲೆಯ ಸಂಸದರು,ಎಲ್ಲಾ ಶಾಸಕರು,ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ವೈದ್ಯರೇ ಇಲ್ಲದ ಕಾಲದಲ್ಲಿ ತಮ್ಮ ಕೌಶಲ್ಯದಿಂದ ಸಾವಿರಾರು ಮಕ್ಕಳು ಭೂಮಿಗೆ ಬರಲು ಕಾರಣರಾದ ಡಾ.ಸೂಲಗಿತ್ತಿ ನರಸಮ್ಮ ಅವರ ಹೆಸರು ಶಾಶ್ವತವಾಗಿ ಜನ ಮಾನಸದಲ್ಲಿ ಉಳಿಯಬೇಕೆಂಬ ಉದ್ದೇಶದಿಂದ ಜಿಲ್ಲಾಡಳಿತ ನಗರಪಾಲಿಕೆ ಆವರಣದಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ನರಸಮ್ಮ ಅವರ ಹೆಸರಿಡಬೇಕು,ನಗರ ಪ್ರತಿಷ್ಠಿತ ರಸ್ತೆಗೆ ಹಾಗೂ ತುಮಕೂರು ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡಿನ ಒಂದು ವಿಭಾಗಕ್ಕೆ ನರಸಮ್ಮ ಅವರ ಹೆಸರಿಡಬೇಕೆಂಬ ಬೇಡಿಕೆಯನ್ನು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು.ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ನರಸಮ್ಮ ಅವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕನ್ನಡ ಸೇನೆಯ ಧನಿಯಾಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ.ವಿಷ್ಣು ಸೇನಾ ಸಮಿತಿ ಜಿಲ್ಲಾಧ್ಯಕ್ಷ ಆರ್.ಸ್ವಾಧೀನ್, ಕನ್ನಡ ಸೇನೆ ನಗರ ಅಧ್ಯಕ್ಷ ವಿಠಲ, ಸೂಲಗಿತ್ತಿ ನರಸಮ್ಮ ಅವರ ಮೊಮ್ಮಗ ಚಕ್ರಧರ ಮೌರ್ಯ ಮತ್ತಿತರರು ಉಪಸ್ಥಿತರಿದ್ದರು.