ತುಮಕೂರು:
ಯುವ ಮಹಿಳೆಯರು ಶಿಕ್ಷಣ,ಸುರಕ್ಷತೆ,ಆರೋಗ್ಯ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ಒಂದು ಉತ್ತಮ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಮಹಿಳಾ ಕಾಂಗ್ರೆಸ್‍ನ ಯುವ ಘಟಕ “ಪ್ರಿಯದರ್ಶಿನಿ” ಯುವ ಮಹಿಳಾ ಮಣಿಗಳಿಗೆ ಅತ್ಯುತ್ತಮ ಸುರಕ್ಷಿತ ರಾಜಕೀಯ ವೇದಿಕೆ ಎಂದು ಘಟಕದ ರಾಜ್ಯಾಧ್ಯಕ್ಷೆ ಭವ್ಯ ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,16 ರಿಂದ 35 ವರ್ಷದ ವಯಸ್ಸಿನ ಯುವ ಮಹಿಳಾ ಮನಸ್ಸುಗಳ ದ್ವನಿಗೆ ಪೂರಕವಾಗಿ ಪ್ರಿಯದರ್ಶಿನಿ ವೇದಿಕೆ ಕೆಲಸ ಮಾಡಲಿದೆ.ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 800 ಯುವ ಮಹಿಳೆಯರನ್ನು ಪ್ರಿಯದರ್ಶಿನಿ ವೇದಿಕೆಗೆ ನೊಂದಾಯಿಸಿ,ಅವರ ಮೂಲಕ ಹದಿ ಹರೆಯದ ಮಹಿಳೆಯ ಬೇಡಿಕೆಗಳನ್ನು ತಿಳಿದು,ಅವುಗಳನ್ನು ಸರಕಾರದ ಮುಂದಿಟ್ಟು, ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಿಯದರ್ಶಿನಿ ಕೆಲಸ ಮಾಡಲಿದೆ ಎಂದರು.
ಇಂದಿನ ಪೈಪೋಟಿ ಯುಗದಲ್ಲಿ ಮಹಿಳೆಯರಿಗೆ ಅದರಲ್ಲಿಯೂ ಗ್ರಾಮೀಣ ಮಹಿಳೆಯರಿಗೆ ಪ್ರಪಂಚದ ಎಲ್ಲಾ ಜ್ಞಾನವೂ ಹೆಣ್ಣು ಮಕ್ಕಳಿಗೆ ದೊರೆಯುವಂತೆ ಮಾಡುವುದರ ಜೊತೆಗೆ, ಶಾಲೆಯಿಂದ ಹೊರಗುಳಿವ ವಿದ್ಯಾರ್ಥಿನಿಯರನ್ನು ಪತ್ತೆ ಹೆಚ್ಚಿ ಅವರನ್ನು ಮತ್ತೆ ಶಿಕ್ಷಣ ಮುಂದುವರೆಸುವಂತೆ ಮಾಡುವುದು.ಉನ್ನತ ಶಿಕ್ಷಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಅದ್ಯತೆ ನೀಡುವ ಉದ್ದೇಶದಿಂದ ಅವಕಾಶಗಳನ್ನು ಲಭ್ಯವಾಗಿಸುವ ನಿಟ್ಟಿನಲ್ಲಿ ಪ್ರಿಯದರ್ಶಿನಿ ಕೆಲಸ ಮಾಡಲಿದೆ ಎಂದು ಭವ್ಯ ನುಡಿದರು.
ಮಹಿಳೆಗೆ ಮನೆಯ ಹೊರಗೆ ಮತ್ತು ಒಳಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಕೌಟುಂಬಿಕ ಮತ್ತು ಸಮಾಜದಲ್ಲಿ ಹಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕಾಗಿದೆ.ಪ್ರತಿ 15 ನಿಮಿಷಗಳಿಗೆ ಒಂದು ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿರುವ ಇಂದಿನ ಕೆಟ್ಟ ಪರಿಸ್ಥಿತಿಯಲ್ಲಿ ಪ್ರಿಯದರ್ಶಿನಿ ವೇದಿಕೆ ಮೂಲಕ ಮಹಿಳಾ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸ್ವಯಂ ಪ್ರೇರಿತರಾಗಿ ಮಹಿಳೆಯರು ದುಡಿಯಲಿದ್ದಾರೆ ಎಂದರು.
ಮಹಿಳೆಯರ ಆರೋಗ್ಯಕ್ಕಾಗಿ ಹೆರಿಗೆ ಸಮಯ,ಋತುಚಕ್ರದ ಸಮಯದಲ್ಲಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು.ಬಾಣಂತಿ ಮಹಿಳೆಯರಲ್ಲಿ ಅಪೌಷ್ಠಿಕತೆಯಿಂದ ಉಂಟಾಗುವ ಅನಿಮೀಯ,ಇನ್ನಿತರ ಸೊಂಕುಗಳ ತೆಡೆಯುವ ನಿಟ್ಟಿನಲ್ಲಿ ಸರಕಾರದ ಜೊತೆ ಮಾತುಕತೆ ನಡೆಸಿ,ಅಗತ್ಯ ಕ್ರಮ ಕೈಗೊಳ್ಳುವುದು,ಋತಚಕ್ರದ ಸಂದರ್ಭದಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳುವುದು,ಆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಿಯದರ್ಶಿನಿ ವೇದಿಕೆ ಕೈಗೊಳ್ಳಲಿದೆ ಎಂದು ಭವ್ಯ ತಿಳಿಸಿದರು.
ಮಹಿಳೆಯರು ಅವರ ಅರ್ಹತೆಗೆ ತಕ್ಕಂತೆ ಇದುವರೆಗೂ ಉದ್ಯೋಗ ಪಡೆಯಲು ಸಾಧ್ಯವಾಗಿಲ್ಲ.ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ28ರಷ್ಟಿದೆ.ಮಹಿಳೆಯರು ಮತ್ತು ಪುರುಷರ ನಡುವಿನ ವೇತನದಲ್ಲಿಯೂ ಶೇ20ರಷ್ಟು ತಾರತಮ್ಯವಿದೆ.ಇವುಗಳ ನಿವಾರಣೆಗೆ ಪ್ರಯತ್ನಿಸುವುದು ಕೂಡ ಪ್ರಿಯದರ್ಶಿನಿ ವೇದಿಕೆಯ ಪ್ರಮುಖ ಉದ್ದೇಶವಾಗಿದೆ.ಸ್ಥಳೀಯ ಸಂಸ್ಥೆಗಳ ರೀತಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿಯೂ ಮಹಿಳೆಯರಿಗೆ ಶೇ33ರಷ್ಟು ಮೀಸಲು ನಿಗಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಿಯದರ್ಶಿನಿ ವೇದಿಕೆ ಮಂಚೂಣಿಯಲ್ಲಿ ಕೆಲಸ ಮಾಡಲಿದೆ. ಈ ಎಲ್ಲಾ ಅಂಶಗಳು ಈಡೇರಲು ಮಹಿಳೆಯರಲ್ಲಿ ಒಗ್ಗಟ್ಟು ಹೆಚ್ಚಬೇಕಿದೆ.ಈ ನಿಟ್ಟಿನಲ್ಲಿ ಯುವ ಮಹಿಳಾ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ಪ್ರಿಯದರ್ಶಿನಿ ಮಾಡುತ್ತಿದೆ.ಇದುವರೆಗೂ 8ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಿಯದರ್ಶಿನಿ ವೇದಿಕೆ ಉದ್ಘಾಟನೆಗೊಂಡಿದೆ.ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಯಲ್ಲಿಯೂ ವೇದಿಕೆ ಆರಂಭಗೊಂಡಿದೆ.ಈಗಾಗಲೇ 100ಕ್ಕೂ ಹೆಚ್ಚು ಯುವತಿಯರು ಹೆಸರು ನೊಂದಾಯಿಸಿದ್ದಾರೆ ಎಂದು ಭವ್ಯ ನುಡಿದರು.
ಕೆ.ಪಿ.ಸಿ.ಸಿ.ವಕ್ತಾರ ಮುರುಳೀಧರ ಹಾಲಪ್ಪ ಮಾತನಾಡಿ,ಉಕ್ಕಿನ ಮಹಿಳೆ ಶ್ರೀಮತಿ ಇಂದಿರಾಗಾಂಧಿ ಅವರ ರೀತಿ ಮಹಿಳೆಯರು ರಾಜಕೀಯದಲ್ಲಿ ಬೆಳೆಯಬೇಕು ಎಂಬ ಉದ್ದೇಶದಿಂದ ಈ ಪ್ರಿಯದರ್ಶಿನಿ ವೇದಿಕೆಯನ್ನು ಒದಗಿಸಲಾಗಿದೆ. ಇದರಲ್ಲಿ ತಮ್ಮ ಹೆಸರು ನೊಂದಾಯಿಸುವ ಮೂಲಕ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಿಯದರ್ಶಿನಿ ತುಮಕೂರು ಘಟಕದ ಅಧ್ಯಕ್ಷ ಭಾಗ್ಯಮ್ಮ,ಮುಖಂಡರಾದ ಟಿ.ಬಿ.ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.