ತುಮಕೂರು

     ಜಿಲ್ಲೆಯಲ್ಲಿ ಮುಂದೆ ಉದ್ಬವಿಸಬಹುದಾದ ಮೇವಿನ ಕೊರತೆ ನೀಗಿಸಲು ಹೊರ ರಾಜ್ಯಗಳಿಂದ ಮೇವು ಖರೀದಿಸುವ ಮುನ್ನ ಜಿಲ್ಲೆಯಲ್ಲಿ ನೀರಾವರಿ ಪ್ರದೇಶಗಳಲ್ಲಿ ಮೇವಿನ ಕಿಟ್ಟು ವಿತರಿಸಿ ಸ್ಥಳೀಯವಾಗಿ ಮೇವು ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಕೃಷಿ ಸಚಿವ ಶಿವಶಂಕರ ರೆಡ್ಡಿ ನೇತೃತ್ವದ ಬರಪರಿಹಾರ ಅಧ್ಯಯನಕ್ಕೆ ಆಗಮಿಸಿದ್ದ ಸಚಿವ ಸಂಪುಟದ ಉಪಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ.

      ತುಮಕೂರು ಜಿಲ್ಲೆಗೆ ಇಂದು ಆಗಮಿಸಿದ್ದ ಕೃಷಿ ಸಚಿವ ಶಿವಶಂಕರರೆಡ್ಡಿ ನೇತೃತ್ವದ ಬರ ಪರಿಹಾರ ಅಧ್ಯಯನ ತಂಡ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಮೇವು ಬ್ಯಾಂಕ್ ತೆರೆಯುವ ಬಗ್ಗೆ ಅಧಿಕಾರಿಗಳ ಪ್ರಸ್ತಾಪಕ್ಕೆ ಮೇಲಿನಂತೆ ಸಲಹೆ ನೀಡಿದ ತಂಡ, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಮೇವಿನ ಕೊರತೆಯಿಲ್ಲ. ಕೆಲವು ಕಡೆಗಳಲ್ಲಿ ಈಗಾಗಲೇ ನೀಡಿರುವ ಮೇವಿನ ಬೀಜಗಳಿಂದ ಕೆಲವು ರೈತರು ತಮ್ಮ ಗೋವುಗಳಿಗೆ ಆಗುವಷ್ಟು ಮೇವು ಬೆಳೆದುಕೊಂಡಿದ್ದು, ಸರ್ಕಾರದ ನಿಯಮದಂತೆ ಒಂದು ಟನ್‍ಗೆ ಇಷ್ಟು ಎಂದು ಹಣ ನೀಡಿ, ಮೇವು ಖರೀದಿಸುವ ಕೆಲಸ ಮಾಡಿದರೆ, ಜಿಲ್ಲೆಯ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಸೂಚಿಸಿದರು.

      ಕುಡಿಯುವ ನೀರಿಗೆ ಸಂಬಂಧಿಸಿದಂತೆ ಹೊಸ ಕೊಳವೆ ಬಾವಿಗಳನ್ನು ಕೊರೆಯುವ ಮುನ್ನ ಹಾಲಿ ಇರುವ ಕೊಳವೆ ಬಾವಿ ಆಳಗೊಳಿಸಿ, ನೀರೆತ್ತಲು ಸಾಧ್ಯವೇ ಎಂಬುದನ್ನು ಭೂ ವಿಜ್ಞಾನಿಗಳ ಸಲಹೆ ಪಡೆದುಕೊಳ್ಳಲು ಸೂಚಿಸಿ ಕುಡಿಯುವ ನೀರಿನ ಕೊಳವೆ ಬಾವಿಗಳಿಗೆ ತಕ್ಷಣವೇ ಪಂಪು ಮೋಟಾರು ಅಳವಡಿಸಿ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಸಲಹೆ ನೀಡಿತು. ಅಂತರಜಲ ಬಳಕೆ ಈ ಭಾಗದಲ್ಲಿ ಹೆಚ್ಚಾಗಿರುವ ಕಾರಣ, ಅಗತ್ಯವಿದ್ದರೆ ಮಾತ್ರ ಕೊಳವೆ ಬಾವಿ ಕೊರೆಸುವಂತೆ ಸೂಚಿಸಿದರು.

      ಸತತ ಬರದಿಂದ ಕೃಷಿ ಕಾರ್ಯಗಳಿಲ್ಲದೆ ಬರಿಗೈಯಲ್ಲಿರುವ ದುಡಿಯುವ ಜನರಿಗೆ ಅವರ ಮನೆ ಬಾಗಿಲ್ಲಲಿಯೇ ಕೆಲಸ ನೀಡುವ ನಿಟ್ಟಿನಲ್ಲಿ ಎನ್.ಆರ್.ಇ.ಜಿ.ಎ ಒಂದು ಉತ್ತಮ ಯೋಜನೆ, ಇದಕ್ಕೆ ಯಾವುದೇ ಭೌತಿಕ, ಆರ್ಥಿಕ ಗುರಿಯಿಲ್ಲ. ನೀವು ಕೆಲಸ ಮಾಡಿದಷ್ಟು ಹಣ ಬರುತ್ತದೆ. ವೈಯುಕ್ತಿಕ ಕೆಲಸಗಳಾದ ಶೌಚಾಲಯ ನಿರ್ಮಾಣ,ಹಣ್ಣಿನ ಗಿಡಗಳನ್ನು ಹಾಕುವುದು, ಇಂತಹ ಕೆಲಸಗಳ ಜೊತೆಗೆ ಸಮುದಾಯಕ್ಕೆ ಅನುಕೂಲವಾಗುವ ಶಾಶ್ವತ ಆಸ್ತಿ ವೃದ್ದಿಸುವ ರಸ್ತೆ, ಕೆರೆಗಳ ಹೂಳೆತ್ತುವುದು ಇಂತಹ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡುವಂತೆ, ಕನಿಷ್ಠ ಒಂದು ಗ್ರಾ.ಪಂ.ನಿಂದ 5 ಕೋಟಿ ಕಾಮಗಾರಿ ಕೈಗೊಳ್ಳುವಂತೆ ಸಿಇಓಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸಲಹೆ ನೀಡಿದರು.
ಸಭೆಯ ನಂತರ ರೈತರೊಂದಿಗೆ ಸಂವಾದ ನಡೆಯಿತು. ಈ ವೇಳೆ ರೈತರು ಜಿಲ್ಲೆಯ ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ, ಅರಣ್ಯ ಕೃಷಿಗೆ ಒತ್ತು ನೀಡುವಂತೆ ಬರಪರಿಹಾರ ಅಧ್ಯಯನ ತಂಡಕ್ಕೆ ಮನವಿ ಮಾಡಿದರು.
ಸಭೆಯಲ್ಲಿ ಕೃಷಿ ಸಚಿವ ಶಿವಶಂಕರರೆಡ್ಡಿ, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಡಿ.ಸಿ.ತಮ್ಮಣ್ಣ, ವೆಂಕಟರಮಣಪ್ಪ, ಸಣ್ಣ ಕೈಗಾರಿಕ ಸಚಿವ ಎಸ್.ಆರ್.ಶ್ರೀನಿವಾಸ್, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಸಂಸದ ಚಂದ್ರಪ್ಪ, ಎಂ.ಎಲ್.ಸಿ. ಬೆಮೆಲ್ ಕಾಂತರಾಜು, ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್, ಸಿಇಓ ಅನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಮತ್ತಿತರರು ಉಪಸ್ಥಿತರಿದ್ದರು.

(Visited 26 times, 1 visits today)