ತುಮಕೂರು:
ಕರ್ನಾಟಕ ರಾಜ್ಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಜನರಿಗೆ ಕುಡಿಯುವ ನೀರು, ಜಾನುವಾರುಗಳ ಮೇವು,ಜನರಿಗೆ ಕೆಲಸ ಸೇರಿದಂತೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧ್ಯಯನ ನಡೆಸಲು ನೇಮಕಗೊಂಡಿರುವ ಕೃಷಿ ಸಚಿವ ಶಿವಶಂಕರ್‍ರೆಡ್ಡಿ ನೇತೃತ್ವದ ಸಚಿವ ಸಂಪುಟದ ಉಪ ಸಮಿತಿ ತುಮಕೂರು ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಿತು.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕು ಬೈರನಹಳ್ಳಿ ಕ್ರಾಸ್‍ಗೆ ಆಗಮಿಸಿದ ತಂಡವನ್ನು ಕಾರ್ಮಿಕ ಸಚಿವ ವೆಂಕಟರವಣಪ್ಪ,ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್,ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್, ಸಿಇಓ ಅನೀಸ್ ಕೆ.ಜಾಯ್ ಅವರುಗಳು ತಂಡವನ್ನು ಬರ ಮಾಡಿಕೊಂಡರು.
ಬೈರನಹಳ್ಳಿ ಕ್ರಾಸ್‍ನಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತರಿ ಯೋಜನೆಯಲ್ಲಿ ಕೈಗೊಂಡಿರುವ ಗೋಕಟ್ಟೆಯ ಹೂಳೆತ್ತುವ ಕಾಮಗಾರಿ ವೀಕ್ಷಿಸಿದ ಸಚಿವರು, ಯಂತ್ರೋಪಕರಣಗಳನ್ನು ಬಳಸದೆ,ಮಾನವ ಸಂಪನ್ಮೂಲ ಬಳಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮಧುಗಿರಿ ತಾಲೂಕಿನ ಚನ್ನಸಾಗರ ಗ್ರಾಮದ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿ ವೀಕ್ಷಿಸಿದ ಸಚಿವ ಶಿವಶಂಕರರೆಡ್ಡಿ,ಜಾನುವಾರುಗಳಿಗೆ ತೊಂದರೆಯಾಗದಂತೆ ತೊಟ್ಟಿಯ ಸುತ್ತಲು ಸಿಮೆಂಟ್ ಕಾಂಕ್ರಿಟ್ ನಿರ್ಮಿಸುವಂತೆ ಸೂಚನೆ ನೀಡಿದರು. ಟಿ.ವಿ.ತಿಮ್ಮಯ್ಯ ಅವರ ತೋಟದಲ್ಲಿ ಕೃಷಿ ಇಲಾಖೆ ವತಿಯಿಂದ ನೀಡಲಾಗಿರುವ ಮೇವಿನ ಕಿಟ್‍ನಲ್ಲಿ ಬೆಳೆದಿರುವ ಜೋಳದ ಹಸಿರು ಮೇವು ವೀಕ್ಷಿಸಿದರು.
ಮಧುಗಿರಿ ತಾಲೂಕಿನ ಕೊಡುಗದಾಲ ಗ್ರಾ.ಪಂ.ವ್ಯಾಪ್ತಿಯ ರಂಗನಹಳ್ಳಿ ಗ್ರಾಮದ ಲಕ್ಷ್ಮಮ್ಮ ಕೋ ನಾಗರಾಜು ಅವರ 3 ಎಕರೆ ಭೂಮಿಯಲ್ಲಿ ರೇಷ್ಮೆ ಇಲಾಖೆಯ ಎಂ.ಎನ್.ಆರ್.ಇ.ಜಿ.ಎ ಯಲ್ಲಿ ಬೆಳೆದಿರುವ ಹಿಪ್ಪುನೇರಳೆ ಬೆಳೆ ವೀಕ್ಷಿಸಿದ ತಂಡ ಫಲಾನುಭವಿ ಲಕ್ಷ್ಮಮ್ಮ ಅವರೊಂದಿಗೆ ಚರ್ಚೆ ನಡೆಸಿದರು. ಮೊದಲಿಗೆ ಮೂರು ಬೆಳೆಯನ್ನು ತೆಗೆದಿದ್ದು, ಈಗ ಹುಳು ಸಾಕಾಣಿಕೆಯ ಶೆಡ್ ನಿರ್ಮಿಸುತ್ತಿರುವ ಹಿನ್ನೆಲೆಯಲ್ಲಿ ಸೊಪ್ಪನ್ನು ಮಾರಾಟ ಮಾಡಲಾಗುತ್ತಿದೆ. ಸರಕಾರದ ಈ ಯೋಜನೆಯಿಂದ ಅನುಕೂಲವಾಗಿದೆ ಎಂದು ಲಕ್ಷ್ಮಮ್ಮ ಅವರ ಪುತ್ರ ಅರುಣಕುಮಾರ್ ಸಚಿವರಿಗೆ ವಿವರಿಸಿದರು. ನಂತರ ವೀರನಹಳ್ಳಿ ತಾಂಡದ ರಾಮಯ್ಯ ಅವರ ಜಮೀನಿನಲ್ಲಿ ಬೆಳೆದಿರುವ ಮೇವಿನ ಜೋಳದ ವೀಕ್ಷಿಸಿದರು.
ಮಧುಗಿರಿ ಪಟ್ಟಣಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ತಂಡವು ನಂತರ ಕೊರಟಗೆರೆ ತಾಲೂಕಿನ ಗಟ್ಲಹಳ್ಲಿಯಲ್ಲಿ ನಿರ್ಮಿಸಿರುವ ಜಾನುವಾರು ಕುಡಿಯುವ ನೀರಿನ ತೊಟ್ಟಿ ವೀಕ್ಷಿಸಿದ ಅವರು ತುಮಕೂರು ತಾಲೂಕಿನ ಬೆಳದಾರ ಸಮೀಪದ ಮುದ್ದುರಾಮಯ್ಯಪಾಳ್ಯದ ಲಕ್ಷ್ಮಿಕಾಂತಯ್ಯ ಬಿನ್ ಹುಲಿರಾಮಯ್ಯ ಅವರ ಜಮೀನಿನಲ್ಲಿ ಬೆಳೆದಿದ್ದ ಹುರುಳಿ ಬೆಳೆ ವೀಕ್ಷಿಸಿ ಹೊಲದಲ್ಲಿದ್ದ ಹುರುಳಿ ಬೆಳೆಯ ಇಳುವರಿ ಪರಿಶೀಲನೆ ಮಾಡಿ ಮಳೆಯಿಲ್ಲದೆ ಬೀಜ ಬಲಿಯದ ಚೀಕಲು ಬಿದ್ದಿರುವುದನ್ನು ಖಾತರಿ ಮಾಡಿಕೊಂಡಿತ್ತು.
ಈ ವೇಳೆ ಮಾತನಾಡಿದ ಸಚಿವ ಶಿವಶಂಕರ್ ರೆಡ್ಡಿ,ರಾಜ್ಯದಲ್ಲಿ ಸುಮಾರು 12 ಜಿಲ್ಲೆಗಳಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆಯ ಕೊರತೆ ಉಂಟಾಗಿ ಶೇ70ರಷ್ಟು ಬೆಳೆ ನಷ್ಟವಾಗಿದೆ. ಅಲ್ಲದೆ ಜನರಿಗೆ ಕೆಲಸವಿಲ್ಲದಂತಾಗಿದೆ.ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಳಲ್ಲಿ ಜನರಿಗೆ ಮನೆ ಬಾಗಿಲಲ್ಲಿಯೇ ಉದ್ಯೋಗ ನೀಡುವ ಕೆಲಸ ಮಾಡಲಾಗುತ್ತಿದೆ. ಅಲ್ಲದೆ ಗೋ ಕಟ್ಟೆಗಳನ್ನು ಕಟ್ಟಿ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಾವರಿ ಇರುವ ರೈತರಿಗೆ ವಿತರಿಸಿದ್ದ ಮೇವಿನ ಕಿಟ್‍ಗಳನ್ನು ಉಪಯೋಗಿಸಿ ಜೋಳ ಮತ್ತಿತರರ ಮೇವುಗಳನ್ನು ಬೆಳೆದಿದ್ದು, ಸದ್ಯ ಮೇವಿನ ಕೊರತೆ ಉಂಟಾಗಿಲ್ಲ ಈ ಬಗ್ಗೆ ಜಿಲ್ಲಾಡಳಿತ ಉತ್ತಮ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ಕೃಷಿ ಕಾರ್ಮಿಕರು ಕೆಲಸವಿಲ್ಲದ ಗುಳೆ ಹೋಗುವುದನ್ನು ತಡೆಯಲು ಎಂ.ಎನ್.ಆರ್.ಇ.ಜಿ.ಎ ಯಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಯಂತ್ರೊಪಕರಣಗಳಿಗೆ ಅವಕಾಶ ನೀಡದೆ, ಜನರನ್ನು ಬಳಸಿ ಕೆಲಸ ನಿರ್ವಹಿಸಲಾಗಿದೆ. ಮುಂದೆಯೂ ಹೆಚ್ಚಿನ ಜನರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳ ಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಎಸ್.ಪಿಮುದ್ದೇಹನುಮೇಗೌಡ, ಸಣ್ಣ ಕೈಗಾರಿಕೆ ಸಚಿವ ಎಸ್. ಆರ್ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್ ಕುಮಾರ್ ಜಿ.ಪಂ ಸಿ.ಇ.ಒ ಅನೀಸ್ ಕಣ್ಮಿಣಿ ಜಾಯ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶೋಭಾರಾಣಿ, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಸೇರಿಂದತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.