ತುಮಕೂರು:
ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ನಗರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯನ್ನು ಅಗತ್ಯ ಸಿಬ್ಬಂದಿಗಳನ್ನು ಒದಗಿಸಿ ಮತ್ತಷ್ಟು ಬಲವರ್ಧನೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ ಅವರು ತಿಳಿಸಿದರು.
ತಮ್ಮ ಕಛೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನತೆ ನಿರ್ಭಯವಾಗಿ ಓಡಾಡಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವುದು ಇಲಾಖೆಯ ಪ್ರಥಮಾದ್ಯತೆ. ಜನರ ಸುರಕ್ಷತೆಗಾಗಿ ಮಾಧ್ಯಮದವರು ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಹಕರಿಸಬೇಕೆಂದು ಮನವಿ ಮಾಡಿದರು.
ಈ ವಾರದಲ್ಲಿ ರೌಡಿ ಪರೇಡ್ :-
ಜಿಲ್ಲೆಯಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯದಂತೆ ಕ್ರಮ ಕೈಗೊಳ್ಳಲು ಈ ವಾರದಲ್ಲಿ ಜಿಲ್ಲಾ ಮಟ್ಟದ “ರೌಡಿ ಪರೇಡ್” ನಡೆಸಲಾಗುವುದು. ಈ ಪರೇಡ್‍ನಲ್ಲಿ ರೌಡಿ ಶೀಟರ್ ಪಟ್ಟಿಯಲ್ಲಿರುವವರ ಮೇಲೆ ನಿಗಾ ಇಡಲಾಗುವುದು. ಪ್ರತೀ ದಿನ ಅವರ ಮೊಬೈಲ್ ಸಂಖ್ಯೆ ಹಾಗೂ ಠಿಕಾಣಿಗಳ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲಾಗುವುದೆಂದು ತಿಳಿಸಿದರು.
ಹೆಚ್ಚಿದ ಸೈಬರ್ ಕ್ರೈಮ್ ನಿಯಂತ್ರಣಕ್ಕೆ ತರಬೇತಿ :-
ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂಗಳ ಪ್ರಮಾಣ ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸುವುದು ಅಷ್ಟೊಂದು ಸುಲಭವಲ್ಲ. ಇದಕ್ಕಾಗಿ ಸೂಕ್ತ ತರಬೇತಿ ಅಗತ್ಯವಿದ್ದು, ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಗೆ ಹೈದ್ರಾಬಾದ್‍ನಲ್ಲಿ ಅಗತ್ಯ ತರಬೇತಿ ಪಡೆಯಲು ನಿಯೋಜಿಸಲಾಗುವುದು. ಮೊಬೈಲ್ ಕರೆ ಮೂಲಕ ಬ್ಯಾಂಕಿನ ಮಾಹಿತಿ ಪಡೆದು ಹಣ ದೋಚುವವರ ಬಗ್ಗೆ ಸಾರ್ವಜನಿಕರು ಎಚ್ಚರವಹಿಸುವುದು ಅಗತ್ಯ. ಬ್ಯಾಂಕುಗಳು ಯಾವುದೇ ರೀತಿಯ ಮಾಹಿತಿಯನ್ನು ಮೊಬೈಲ್ ಕರೆ ಮೂಲಕ ತನ್ನ ಗ್ರಾಹಕರಿಂದ ಪಡೆಯುವುದಿಲ್ಲ ಎಂಬ ಅರಿವು ಸಾರ್ವಜನಿಕರಲ್ಲಿ ಮೂಡುವಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಗಾಂಜಾ ಮಾರಾಟದ ಶಂಕೆ-ಹದ್ದಿನ ಕಣ್ಣು:
ಕಾಲೇಜು ವಿದ್ಯಾರ್ಥಿಗಳಿಗೆ ಟೀ-ಶಾಪ್‍ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಶಂಕೆಯಿದೆ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಇಂತಹ ಟೀ ಶಾಪ್‍ಗಳ ಮೇಲೆ ಇಂಟೆಲಿಜೆನ್ಸ್‍ನವರಿಂದ ಗೌಪ್ಯವಾಗಿ ಮಾಹಿತಿ ಪಡೆದು ಹದ್ದಿನ ಕಣ್ಣಿಡಲು ಕ್ರಮವಹಿಸಲಾಗುವುದೆಂದರು.
ಆಂಧ್ರಪ್ರದೇಶದ ಹಳದಿ ಬೋರ್ಡ್ ವಾಹನಗಳು ರಾಜ್ಯದೊಳಗೆ ಯಾವುದೇ ಅಡ್ಡಿಯಿಲ್ಲದೆ ಸಂಚರಿಸುತ್ತವೆ. ಆದರೆ ನಮ್ಮ ರಾಜ್ಯದ ಹಳದಿ ಬೋರ್ಡ್ ವಾಹನಗಳನ್ನು ಆಂಧ್ರದ ಗಡಿ ಪ್ರದೇಶ ಮಡಕಶಿರಾದ ಬಳಿ ತಡೆದು ಪೊಲೀಸರು ತಮಗಿಷ್ಟ ಬಂದಂತೆ ದಂಡ ವಿಧಿಸುತ್ತಿದ್ದಾರೆ ಎಂಬ ದೂರಿಗೆ ಸ್ಪಂದಿಸಿದ ಅವರು ಅಂತರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವ ಬಗ್ಗೆ ಭರವಸೆ ನೀಡಿದರು.
ನಕಲಿ ಲೈಸೆನ್ಸ್‍ಗೆ ಕಡಿವಾಣ :-
ಜಿಲ್ಲೆಯಲ್ಲಿ ನಕಲಿ ಲೈಸೆನ್ಸ್‍ಗಳ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕಡಿವಾಣ ಹಾಕಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದಲ್ಲದೆ 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡದಂತೆ ಪೋಷಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೈಲೆನ್ಸರ್ ಇಲ್ಲದ ದ್ವಿಚಕ್ರ ವಾಹನ ಚಾಲನೆ, ಬೇರೆ ರೀತಿಯಲ್ಲಿ ಸದ್ದು ಮಾಡುವ ಹಾರ್ನ್‍ಗಳು, ಹೆಲ್ಮೆಟ್ ಧರಿಸಿದ ದ್ವಿಚಕ್ರ ವಾಹನ ಚಾಲಕರು ಹಾಗೂ ನಂಬರ್ ಬೋರ್ಡ್ ಇಲ್ಲದ ವಾಹನಗಳ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಗರದಲ್ಲಿ ರಾತ್ರಿ 10 ಗಂಟೆ ನಂತರ ಹೋಟೆಲ್‍ಗಳು ಮುಚ್ಚುವ ಕ್ರಮದಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆಂಬ ಸಮಸ್ಯೆಯನ್ನು ಆಲಿಸಿದ ಅವರು ತಡರಾತ್ರಿ ಬರುವ ರೈಲು ಹಾಗೂ ಬಸ್ ಪ್ರಯಾಣಿಕರಿಗೆ ಅನುವಾಗುವಂತೆ ಊಟದ ಹೋಟೆಲ್‍ಗಳನ್ನು 10 ಗಂಟೆಗೆ ಮುಚ್ಚದಿರುವ ಬಗ್ಗೆ ಪರಿಶೀಲಿಸಿ ನಿರ್ಣಯ ಕೈಗೊಳ್ಳಲಾಗುವುದೆಂದರಲ್ಲದೆ, ರಾತ್ರಿ 11.30ರ ನಂತರ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್‍ಗಳು ಕಡ್ಡಾಯವಾಗಿ ಮುಚ್ಚಬೇಕು. ಬಾಗಿಲು ಮುಚ್ಚಿ 11.30 ಗಂಟೆಯ ನಂತರವೂ ವ್ಯವಹರಿಸುವ ಬಾರ್‍ಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದೆಂದರು.
ಉತ್ತಮ ಸೇವೆಗೆ ನಗದು ಬಹುಮಾನ :-
ರಾತ್ರಿ ಕಳ್ಳತನ, ಅಪಘಾತ, ದರೋಡೆ, ಮತ್ತಿತರ ಅಪರಾಧ ಪ್ರಕರಣಗಳನ್ನು ಬೇಧಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಧಿಕಾರಿ/ಸಿಬ್ಬಂದಿಗಳಿಗೆ ನಗದು ಬಹುಮಾನ ನೀಡಲಾಗುವುದು. ಎಲ್ಲಾ ಪೊಲೀಸ್ ಕಾನ್ಸ್‍ಟೇಬಲ್, ಹೆಡ್ ಕಾನ್ಸ್‍ಟೇಬಲ್‍ಗಳನ್ನು ಸರದಿಯನುಸಾರ ತಪ್ಪದೇ ರಾತ್ರಿ ಗಸ್ತಿಗೆ ನಿಯೋಜಿಸಲಾಗುವುದು. ನಗರದಲ್ಲಿ ಸಂಭವಿಸುವ ವಾಹನ ಅಪಘಾತಗಳ ಮೇಲೆ ಕಟ್ಟೆಚ್ಚರ ವಹಿಸಲು ಸಿಸಿ ಟಿವಿ ಹಾಗೂ ಸ್ಮಾರ್ಟ್ ಪೊಲೀಸ್ ಸಲಕರಣೆಗಳನ್ನು ಖುದ್ದಾಗಿ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
ಆಂಧ್ರದ ಗಡಿ ಪಾವಗಡ, ಶಿರಾ ಹಾಗೂ ತಿಪಟೂರಿನಲ್ಲಿ ನಡೆಯುತ್ತಿದೆ ಎನ್ನಲಾಗಿರುವ ಅಕ್ರಮ ಮರಳು ಮಾಫಿಯಾ, ಮಟ್ಕಾ ದಂಧೆಗಳನ್ನು ನಿಯಂತ್ರಿಸಲು ತಂಡಗಳ ರಚನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಠದಲ್ಲಿ ಗಣ್ಯರ ಭದ್ರತೆಗಾಗಿ ಪೊಲೀಸ್ ನಿಯೋಜನೆ :-
ಶ್ರೀ ಶಿವಕುಮಾರ ಸ್ವಾಮೀಜಿಯವರ ಆರೋಗ್ಯ ವಿಚಾರಣೆಗಾಗಿ ಪ್ರತೀ ದಿನ ಮಠಕ್ಕೆ ಭೇಟಿ ನೀಡುವ ಗಣ್ಯರಿಗೆ ಸೂಕ್ತ ಭದ್ರತೆ ಒದಗಿಸುವುದು ಇಲಾಖೆಯ ಕರ್ತವ್ಯ. ಈ ನಿಟ್ಟಿನಲ್ಲಿ ಅಗತ್ಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರಲ್ಲದೆ ದೊಡ್ಡ ಜಿಲ್ಲೆಯಾಗಿರುವ ತುಮಕೂರಿನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲದೆ ಶಿಸ್ತಿನಿಂದ ಪ್ರಾಮಾಣಿಕ ಸೇವೆ ಮಾಡುವ ಹುಮ್ಮಸ್ಸಿನಿಂದ ಕಾರ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.