ತುಮಕೂರು:
ರಾಜ್ಯದ 156 ತಾಲೂಕುಗಳಲ್ಲಿ ಬರಗಾಲವಿದ್ದು ಜನ-ಜಾನುವಾರುಗಳು ಕುಡಿಯುವ ನೀರಿಲ್ಲದೆ ನರಳುವಂತಾಗಿದ್ದು ಮೇವಿಲ್ಲದೆ ಜಾನುವಾರುಗಳು ಪರಿತಪಿಸುತ್ತಿವೆ. ಹೀಗಾಗಿ ಕೂಡಲೇ ಗೋಶಾಲೆಗಳನ್ನು ತೆರೆದು ಮೂಕಪ್ರಾಣಿಗಳ ನೆರವಿಗೆ ಬರಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯÀ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದರು. ಜಿಲ್ಲೆಯ ಪಾಲಿನ ಹೇಮಾವತಿ ನಾಲೆಯ 25 ಟಿಎಂಸಿ ನೀರಿನ ಪಾಲಿನಲ್ಲಿ 15 ಟಿಎಂಸಿ ನೀರು ಹರಿಯುತ್ತಿದ್ದು ಲೆಕ್ಕದಲ್ಲಿ ಮಾತ್ರ ತೋರಿಸಲಾಗುತ್ತಿದೆ. ಜಿಲ್ಲೆಯ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರಿ ಜಿಲ್ಲೆಯ ಕೆರೆಗಳನ್ನು ತುಂಬಿಸಲು ಮುಂದಾಗಬೇಕೆಂದರು.
ಬರ ಪರಿಹಾರ ಕಾಮಗಾರಿ ಕೈಗೊಳ್ಳುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತಪರ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ತುಮಕೂರು ಜಿಲ್ಲೆಯ 10 ತಾಲೂಕುಗಳು ಬರಗಾಲಕ್ಕೆ ತುತ್ತಾಗಿವೆ. ರಾಜ್ಯದ ಪರಿಸ್ಥಿತಿಯೂ ಬೇರೆಯಾಗಿಲ್ಲ. ಹೀಗಿದ್ದರೂ ರಾಜಕಾರಣಿಗಳು ರೆಸಾರ್ಟ್ ರಾಜಕೀಯದಲ್ಲಿ ತೊಡಗಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಆರೋಪಿಸಿದರು.
ಕೃಷಿ ಮತ್ತು ಕೃಷಿಕರು ಬಿಕ್ಕಟ್ಟು ಎದುರಿಸುತ್ತಿದ್ದಾರೆ. ರೈತರು ಕೃಷಿಗಾಗಿ ಹೂಡಿದ ಬಂಡವಾಳವೂ ಬಾರದೆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿದ್ದಾರೆ. ಐದು ಆರು ವರ್ಷಗಳಿಂದ ಮಳೆ ಬಾರದೆ ಬೆಳೆಯೂ ಸರಿಯಾಗಿ ಕೈಗೆ ಬರುತ್ತಿಲ್ಲ.
ಬೆಳೆಗಳ ಸಂರಕ್ಷಣೆಗಾಗಿ 1500 ಅಡಿ ಬೋರ್‍ವೆಲ್ ಕೊರೆದರೂ ನೀರು ಸಿಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ 3.5 ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕರ್ನಾಟಕದಲ್ಲಿ 19 ಸಾವಿರ ಮಂದಿ ತುಮಕೂರು ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಕೃಷಿ ಮತ್ತು ರೈತರು ಉಳಿಯಲು ಸ್ವಾಮಿನಾಥನ್ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಬಿಜೆಪಿ ಸರ್ಕಾರ ಚುನಾವಣೆಗೂ ಮೊದಲು ತಾವು ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ತರುವುದಾಗಿ ಭರವಸೆ ನೀಡಿತ್ತು. ಆದರೆ ಈಗ ಇದು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್‍ನಲ್ಲಿ ಮನವಿ ಸಲ್ಲಿಸಿದೆ. ಹಾಗೆಯೇ ರಾಜ್ಯದಲ್ಲಿ ಪ್ರಕಾಶ್ ಕಮ್ಮರಡಿ ವರದಿ ಅನುಷ್ಠಾನ ಮಾಡಿಲ್ಲ. ರಸ್ತೆ ಅಗಲೀಕರಣಕ್ಕಾಗಿ ವಶಪಡಿಸಿಕೊಂಡು ಭೂಮಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸ್ವರಾಜ್ ಅಭಿಯಾನ ಮತ್ತು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಸಿ.ಯತಿರಾಜ್ ಮಾತನಾಡಿ ನೀರಾವರಿ, ಹೆದ್ದಾರಿ, ರೈಲ್ವೆ, ಕೈಗಾರಿಕೆ, ವಿದ್ಯುತ್ ಲೈನ್ ಯೋಜನೆಗಳಿಗೆ ರೈತರ ಭೂಮಿಯನ್ನು ವಶಪಡಿಸಿಕೊಳ್ಳುವಾಗ ರೈತರ ಒಪ್ಪಿಗೆ ಆಧಾರಿತ ಭೂಪರಿಹಾರ ನೀಡಿ ಸಾಮಾಜಿಕ ಹಾಗೂ ಪರಿಸರದ ಮೇಲಾಗುವ ದೃಷ್ಪರಿಣಾಮಗಳ ತಡೆಗೆ ವರದಿ ಆಧಾರಿತ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ತೆಂಗು, ಅಡಕೆ ಸೇರಿದಂತೆ ತೋಟಗಾರಿಕಾ ಮತ್ತು ಕೃಷಿ ಬೆಳೆಗಳು ಒಣಗಿ ಹೋಗುತ್ತಿದ್ದು ಅಧಿಕ ಉತ್ಪಾದನಾ ವೆಚ್ಚದಿಂದ ತತ್ತರಿಸಿರುವ ರೈತರಿಗೆ ಉತ್ತಮವಾದ ನಷ್ಟ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಆಗ್ರಹಿಸಿದರು.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕಾರ್ಯದರ್ಶಿ ಬಿ.ಉಮೇಶ್ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ರೆಸಾರ್ಟ್ ರಾಜಕೀಯ ಹಣಬಲದಲ್ಲಿ ನಡೆಯುತ್ತಿದ್ದು ಜನಸಾಮಾನ್ಯರನ್ನು ಕಷ್ಟಗಳನ್ನು ಕೇಳುವ ಪರಿಸ್ಥಿತಿ ಇಲ್ಲವಾಗಿದೆ. ಇಂಥವರನ್ನು ಆಯ್ಕೆ ಮಾಡಿದ ನಮಗೆ ನಾಚಿಕೆಯಾಗುತ್ತಿದ್ದು ನಮ್ಮ ಮುಖಕ್ಕೆ ನಾವೇ ಹೊಡೆದುಕೊಳ್ಳುವ ಪರಿಸ್ಥಿತಿ ಸೃಷ್ಠಿಸಿದ್ದಾರೆ ಎಂದರು. ಸರ್ಕಾರ ಜವಾಬ್ದಾರಿಗಳನ್ನು ವಹಿಸಿಕೊಳ್ಳದೆ ಆಡಳಿತ ಪಕ್ಷದ ಶಾಸಕರು ಸಚಿವ ಸ್ಥಾನಕ್ಕೂ, ಪ್ರತಿಪಕ್ಷದ ಮುಖಂಡ ಮುಖ್ಯಮಂತ್ರಿ ಸ್ಥಾನಕ್ಕೂ ನಡೆಯುವ ಸ್ಪರ್ಧೆಯನ್ನು ಬಿಟ್ಟು ಚುನಾವಣೆಗೆ ಮುಂಚೆ ನೀಡಿದ ಪ್ರನಾಳಿಕೆಯ ಆಧಾರದಲ್ಲಿ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಬೇಕು. ಆಗ ಮಾತ್ರವೇ ಜನಪ್ರತಿನಿಧಿಗಳಲ್ಲಿ ನಿಜವಾದ ಜವಾಬ್ದಾರಿ ಬರುತ್ತದೆ ಎಂದರು.
ಪ್ರಾಂತ ರೈತ ಸಂಘ ಜಿಲ್ಲಾ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ ಬಗರ್‍ಹುಕುಂ ಸಾಗುವಳಿದಾರರು ಹಾಲಿ ನಮೂನೆ 57ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಸಲ್ಲಿಸುವಾಗ ಷರತ್ತು ಮತ್ತು ಕುಂಟು ನೆಪ ನೀಡಿ ಅರ್ಜಿ ಹಾಕುವುದನ್ನು ತಪ್ಪಿಸದೆ ಸಾಗುವಳಿದಾರರು ನೀಡುವ ಅರ್ಜಿಗಳನ್ನು ಸ್ವೀಕರಿಸಿ ಸ್ವೀಕೃತಿ ನೀಡಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ,1982ರಲ್ಲಿ ಇದೇ ಜನವರಿ 19ರಂದು ನಡೆದ ಮೊದಲ ಕಾರ್ಮಿಕ ರೈತ ಕೃಷಿ ಕೂಲಿಕಾರ ಐಕ್ಯ ಹೋರಾಟದಲ್ಲಿ ಐದು ಜನ ಸಂಗಾತಿಗಳು ಪೊಲೀಸ್ ದೌರ್ಜನ್ಯಕ್ಕೆ ಬಲಿಯಾಗಿದ್ದರು. ಇಂಥ ಹಿನ್ನೆಲೆಯಿರುವ ಹೋರಾಟದ ಭಾಗವಾಗಿ ಪ್ರತಿವರ್ಷ ಇಂದು ರೈತ-ಕಾರ್ಮಿಕ ಸೌಹಾರ್ದ ದಿನವನ್ನಾಗಿ ಆಚರಿಸಿ ರೈತರ ಹೋರಾಟಗಳಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲಿ ರೈತ-ಕಾರ್ಮಿಕರ ಸಖ್ಯತೆಗಳು ಬಲಿಷ್ಠಗೊಂಡರೆ ಮಾತ್ರವೇ ದೇಶದ ಅಭಿವೃದ್ಧಿ ಮತ್ತು ನಮ್ಮ ಉಳಿವು ಎಂದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರೊ.ಕೆ.ದೊರೈರಾಜ್ ಮಾತನಾಡಿದರು. ಸಿಐಟಿಯು ಮುಖಂಡರಾದ ನೌಷಾದ್ ಸೆಹಗನ್, ಎನ್.ಕೆ.ಸುಬ್ರಮಣ್ಯ, ಖಲೀಲ್, ಶಂಕರಪ್ಪ, ಟಿ.ಎಂ.ಗೋವಿಂದರಾಜು ಹಾಜರಿದ್ದರು.