ತುಮಕೂರು:
ನಗರದ ಟಿಪ್ಪುನಗರ ಮುಖ್ಯರಸ್ತೆಯ ಮಾರಿಮುತ್ತು ದೇವಸ್ಥಾನದ ಹಿಂಭಾಗ ತುಮಕೂರು ಜಿಲ್ಲಾ ಅಂತಾರಾಷ್ಟ್ರೀಯ ಮಾನವ ಹಕ್ಕು ಕಾರ್ಯ ಸಮಿತಿಯನ್ನು ಉದ್ಘಾಟಿಸಲಾಯಿತು.
ಐ.ಹೆಚ್.ಆರ್.ಎ.ಸಿ. (International Human Rights Action Committee) ಅಂತಾರಾಷ್ಟ್ರೀಯ ಮಾನವಹಕ್ಕು ಕಾರ್ಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಂಸ್ಥಾಪಕ ಎಂ. ರಾಜಾ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂವಿಧಾನದಲ್ಲಿ ವಿಧಿಸಲಾಗಿರುವ ಕಾನೂನುಗಳು ಯಾವು ಮೇಲು ಕೀಳುಗಳಿಲ್ಲದೆ ಎಲ್ಲರಿಗೂ ಅನ್ವಯವಾಗುತ್ತವೆ. ಕಾನೂನಿನ ಮುಂದೆ ಯಾರೂ ದೊಡ್ಡವರೂ ಅಲ್ಲ ಚಿಕ್ಕವರೂ ಅಲ್ಲ. ಮಾನವ ಸ್ವತಂತ್ರವಾಗಿ ಬದುಕಲು ಕಾನೂನು ಹಾಗೂ ನಿಯಮ ನಿಬಂಧನೆಗಳನ್ನು ರಚಿಸಲಾಗಿದೆ. ಆದರೆ, ಕೆಲವೊಮ್ಮೆ ಸಮಾಜಘಾತುಕರಿಂದ ಹಾಗೂ ಮೋಸಗಾರರ ದಬ್ಬಾಳಿಕೆದಾರರ ಕುತಂತ್ರ ಹಾಗೂ ಕಾನೂನು ತಿರುಚುವಿಕೆಯಿಂದ ಅಮಾಯಕರು ನರಳಾಡುವಂತಾಗಿದೆ. ಆದ್ಧರಿಂದ ಸರ್ವರೂ ಸಂವಿಧಾನದಲ್ಲಿ ಮಾನವನಿಗಾಗಿ ನೀಡಲಾಗಿರುವ ಮೂಲಭೂತ ಹಕ್ಕುಗಳ ಬಗ್ಗೆ ಅರಿಯುವುದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು, ಪ್ರತಿಯೊಬ್ಬರಿಗೂ ಕಾನೂನಿನ ಅರಿವಿನ ನೆರವು ನೀಡುವುದು ಹಾಗೂ ಅವಶ್ಯಕತೆ ಇರುವಲ್ಲಿ ಮಾನವಹಕ್ಕುಗಳ ಬಗ್ಗೆ ಹೋರಾಡುವುದು ಸಂಘಟನೆಯ ಧ್ಯೇಯವಾಗಿದೆ ಎಂದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂತಾರಾಷ್ಟ್ರೀಯ ಮಾನವಹಕ್ಕು ಕಾರ್ಯ ಸಮಿತಿಯ ಜಿಲ್ಲಾಧ್ಯಕ್ಷ ಇಮ್ರಾನ್ ಪಾಷ ವಹಿಸಿದ್ದರು. ಜಿಲ್ಲಾ ಗೌರವಾಧ್ಯಕ್ಷ ಮುನೀರ್ ಅಹಮದ್ (ಬಾಬು), ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಅಯಾಜ್ ಅಹಮದ್, ಜಿಲ್ಲಾ ಸಂಘಟನಾ ಜಂಟಿ ಕಾರ್ಯದರ್ಶಿ ಸುನೀಲ್ ಕುಮಾರ್, ಕಾನೂನು ಸಲಹೆಗಾರ ಹನುಮಂತರಾಯ, ಜಿಲ್ಲಾ ಯುವ ಅಧ್ಯಕ್ಷ ಮಹಮದ್ ನಿಶಾದ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶಾಹಿನಾ ಬಾನು, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಲೀ, ಸಂಘಟನಾ ಕಾರ್ಯದರ್ಶಿ ಸಿದ್ದೀಕ್ ಷಾ, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಅಯಾಜ್ ಉಲ್ಲಾ ಖಾನ್, ಜೀಶಾನ್, ರಫೀಉಲ್ಲಾ ಮತ್ತಿತರರು ಇದ್ದರು.
ಕಾರ್ಯಕ್ರಮದ ಆರಂಭಕ್ಕೆ ಮೊದಲು ಸೋಮವಾರ ಇಹಲೋಕ ತ್ಯಜಿಸಿದ ತ್ರಿವಿಧ ದಾಸೋಹಿ, ಕರ್ನಾಟಕ ರತ್ನ, ಶತಾಯುಶಿ, ತುಮಕೂರು ಸಿದ್ಧಗಂಗಾ ಮಠದ ಡಾ|| ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಸಂತಾಪ ಸೂಚಿಸಿ, ಶ್ರೀಗಳಿಗೆ ಗೌರವ ಸಮರ್ಪಿಸಲಾಯಿತು.