ತುಮಕೂರು:

      ಕಳೆದ 10 ವರ್ಷಗಳಿಂದ ನಗರದಲ್ಲಿ ನಿರಂತರವಾಗಿ ಸಾಹಿತ್ಯ,ಸಂಗೀತ,ನಾಡು, ನುಡಿ, ಭಾರತೀಯ ಸಂಸ್ಕøತಿಯ ವಿಚಾರವಾಗಿ ಉಪನ್ಯಾಸಗಳನ್ನು ಏರ್ಪಡಿಸುತ್ತಾ ಬಂದಿರುವ ಜ್ಞಾನಬುತ್ತಿ ಸತ್ಸಂಗ ಕೇಂದ್ರದ 500ನೇ ಕಾರ್ಯಕ್ರಮ 2019ರ ಫೆಬ್ರವರಿ 05 ರಂದು ಸೋಮೇಶ್ವರಪುರಂನ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಲಾಗಿದೆ ಎಂದು ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಪಿ.ಶಾಂತಿಲಾಲ್ ತಿಳಿಸಿದ್ದಾರೆ.

      ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಶಿಸ್ತು ಮತ್ತು ಸಮಯ ಪ್ರಜ್ಞೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡು ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು,ಪ್ರತಿ ಮಂಗಳವಾರ ವಿದ್ಯಾವಾಹಿನಿ ಕಾಲೇಜಿನಲ್ಲಿ,ಗುರುವಾರ ಸಾಯಿಬಾಬಾ ದೇವಾಲಯದಲ್ಲಿ ಮತ್ತು ಭಾನುವಾರಗಳಂದು ರಾಮದೇವರ ಬೆಟ್ಟದಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ಏರ್ಪಡಿಸುತಿದ್ದು,ಇದು ಗಿನ್ನಿಸ್ ದಾಖಲೆ ಸೇರಿದೆ.ಇದರ 500 ನೇ ಕಾರ್ಯಕ್ರಮವನ್ನು ಸಹ ವಿಶೇಷವಾಗಿ ಆಚರಿಸಲು ತೀರ್ಮಾನಿಸಿದ್ದು,ಫೆಬ್ರವರಿ 05 ರಂದು ವಾಸವಿ ದೇವಾಲಯದಲ್ಲಿ ಕುಮಾರವ್ಯಾಸ ಭಾರತ ಕಾವ್ಯದಲ್ಲಿರುವ ನವರಸಗಳು ಎಂಬ ವಿಷಯ ಕುರಿತು ಗಮಕ ಕಲೆಯನ್ನು ಪ್ರದರ್ಶಿಸುವ ಕಾರ್ಯಕ್ರಮವಿದೆ.ಕೆಲ ಸಮಾನ ಮನಸ್ಕ ಗೆಳೆಯರೊಂದಿಗೆ ಕಟ್ಟಿದ ಈ ಸಂಸ್ಥೆ ಇಂದು ಹತ್ತು ವರ್ಷ ಪೂರೈಸುತ್ತಾ ಬಂದಿರುವುದು ಸಂತೋಷದ ವಿಚಾರ ಎಂದರು.

       ಜ್ಞಾನಬುತ್ತಿ ಸತ್ಸಂಗದ 500ನೇ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್‍ನ ವಕ್ತಾರ ಹಾಗೂ ಕೌಶ್ಯಲಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ಜ್ಞಾನಬುತ್ತಿ ಸತ್ಸಂಗದವರು ಸಾಹಿತ್ಯ ಪರಿಚಯ ಕಾರ್ಯಕ್ರಮವನ್ನು ಒಂದು ಆಂದೋಲನದ ರೀತಿ ನಡೆಸಿಕೊಂಡು ಬರುತ್ತಿದ್ದಾರೆ.ಇದು ಮತ್ತಷ್ಟು ಬೆಳೆದು ಹಿರಿಯ, ಕಿರಿಯ ಸಾಹಿತಿಗಳಿಗೆ ಸ್ಪೂರ್ತಿಯಾಗಬೇಕೆಂಬ ಹಿನ್ನೆಲೆಯಲ್ಲಿ ಫೆಬ್ರವರಿ 05 ರಂದು ಕಾರ್ಯಕ್ರಮ ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.

      ನಿರಂತರ ಹತ್ತುವರ್ಷಗಳ ಕಾಲ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಕಚೇರಿಗೆ ಒಂದು ನಿವೇಶನದ ಅಗತ್ಯವಿದ್ದು, ಇದನ್ನು ಒದಗಿಸಿಕೊಡಲು ಶ್ರಮಿಸುವುದಾಗಿ ತಿಳಿಸಿದ ಮುರುಳೀಧರ ಹಾಲಪ್ಪ,ಸರಕಾರಿ ಸಂಸ್ಥೆಗಳ ಕಾರ್ಯವೈಖರಿಯನ್ನು ನಾಚಿಸುವಂತೆ ಶಿಸ್ತು ಮತ್ತು ಸಮಯ ಪಾಲನೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.

      ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಹಾಲಿ ಅಧ್ಯಕ್ಷ ವಿದ್ವಾನ್ ಎಂ.ಜಿ.ಸಿದ್ದರಾಮಯ್ಯ ಮಾತನಾಡಿ, ಜ್ಞಾನ ಬುತ್ತಿ ಸತ್ಸಂಗ ಕೇಂದ್ರ ಹಿರಿಯ, ಕಿರಿಯರ ಸಂಗಮವಾಗಿದೆ.ಎಲ್ಲಾ ವಯಸ್ಸಿನ ಸಾಹಿತ್ಯಾಸಕ್ತರು ಇಲ್ಲಿ ಸೇರಿ ಉಪನ್ಯಾಸಗಳನ್ನು ಕೇಳುತ್ತಿದ್ದು,ಜಿಲ್ಲಾಡಳಿತ ಕಳೆದ ಸಾಲಿನ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕೆಲಸಗಳನ್ನು ಕೇಂದ್ರ ಮಾಡಲಿದೆ ಎಂದರು.

(Visited 27 times, 1 visits today)