ತುಮಕೂರು:
ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ ಅವರು ಕಲ್ಲು ಗಣಿಗಾರಿಕೆ ಮಾಲೀಕರಿಂದ ೨೫ ಲಕ್ಷ ರೂ. ಹಫ್ತ ವಸೂಲಿ ಮಾಡಿದ್ದಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡ ಆರೋಪಿಸಿದ್ದಾರೆ.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಡಿ.ಸಿ.ಗೌರಿಶಂಕರ ಅವರು ಮತ್ತು ಅವರ ಹಿಂಬಾಲಕರಾದ ಹರಳೂರು ಗ್ರಾಮದ ರುದ್ರೇಶ ಮತ್ತು ಸಂಗಡಿಗರು ದಿನಾಂಕ 16-01-2019 ರಂದು ರಾತ್ರಿ 8.30 ಇಂದ 9 ಗಂಟೆ ಸಮಯದಲ್ಲಿ ನಂದಿಹಳ್ಳಿ ಗ್ರಾಮದ ಸರ್ವೆ ನಂಬರ್ 42 ರಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯ ಸ್ಥಳಕ್ಕೆ ಅಕ್ರಮವಾಗಿ ನುಗ್ಗಿ ಕಲ್ಲು ದಿಮ್ಮಿ ತುಂಬಿದ್ದ 6 ಲಾರಿಗಳನ್ನು ಅಡ್ಡಗಟ್ಟಿ ಚಾಲಕರಿಗೆ ಬಾಟಲ್ ತೋರಿಸಿ ತಿವಿಯುವುದಾಗಿ ಬೆದರಿಸಿ ಅದೇ ಚಾಲಕರಿಂದ ಗ್ರಾನೈಟ್ ಮಾಲೀಕರಿಗೆ ಪೋನು ಮಾಡಿಸಿದ ಶಾಸಕರು ಗ್ರಾನೈಟ್ ಮಾಲೀಕರಿಗೆ ರೂ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ.
ಈ ವಿಷಯಕ್ಕೆ ಗ್ರಾನೈಟ್ ಮಾಲಿಕರು ಹಣ ನೀಡಲು ತಿರಸ್ಕರಿಸಿರುತ್ತಾರೆ, ಕೂಡಲೇ ಗಣಿ ಮತ್ತು ಭೂ ವಿಜ್ಘಾನ ಇಲಾಖೆಯ ಜಿಯಾಲಿಜಿಸ್ಟ್ ನವೀನ್ ಮತ್ತು ಇಂಜಿನಿಯರ್ ವಿನಯ್ ಹಾಗು ಕ್ಯಾತ್ಸಂದ್ರ ಪಿ,ಎಸ್,ಐ ರಾಜು ಅವರಿಗೆ ಕರೆ ಮಾಡಿ ಶಾಸಕರು ಸ್ಥಳಕ್ಕೆ ಕರೆಸಿಕೊಂಡಿರುತ್ತಾರೆ. ಅಧಿಕಾರಿಗಳು ಶಾಸಕರು ಸೇರಿ ಗ್ರಾನೈಟ್ ಮಾಲೀಕರೊಂದಿಗೆ ಮದ್ಯಸ್ಥಿಕೆ ವಹಿಸಿರುತ್ತಾರೆ, ಆಗ ಗ್ರಾನೈಟ್ ಮಾಲೀಕರು ರೂ 10 ಲಕ್ಷ ರೂ ನೀಡುವುದಾಗಿ ತಿಳಿಸಿರುತ್ತಾರೆ, ಇದಕ್ಕೆ ಶಾಸಕರು ಒಪ್ಪದೇ ಇದ್ದಾಗ ರೂ 30 ಲಕ್ಷ ಹಣ ನೀಡುವಂತೆ ಅಧಿಕಾರಿ ತಿಳಿಸಿರುತ್ತಾರೆ, ಇದಕ್ಕೆ ಸಮ್ಮತಿಸಿದ ಮಾಲೀಕರು ಮಾರನೇ ದಿನ ಬಂದು ಹಣ ನೀಡುವುದಾಗಿ ಭರವಸೆ ನೀಡಿರುತ್ತಾರೆ.
ಸ್ಥಳದಲ್ಲಿ ಇದ್ದ ಅಧಿಕಾರಿಗಳು ಮತ್ತು ಪೋಲೀಸರು ವಾಹನಗಳನ್ನು ತಮ್ಮ ವಶಕ್ಕೆ ಪಡೆಯಲು ಮುಂದಾದಾಗ ಅಧಿಕಾರಿಗಳ ವಿರುದ್ದ ಕೆಂಡಾಮಂಡಲರಾದ ಶಾಸಕರನ್ನು ಕಂಡು ಅಧಿಕಾರಿಗಳು, ಅಸಹಾಯಕರಂತೆ ವರ್ತಿಸಿರುತ್ತಾರೆ, ತರುವಾಯ ಹಣ ನೀಡುವವರೆಗೆ ಲಾರಿಗಳು ನಮ್ಮ ಸುಪರ್ಧಿಯಲ್ಲಿ ಇರಲಿ ಎಂದು ತಮ್ಮ ಬೆಂಬಲಿಗ ಜೆಡಿಎಸ್ ಮುಖಂಡ ಹರಳೂರು ರುದ್ರೇಶ ಅವರು ಶಾಸಕರ ಅಣತಿಯಂತೆ 6 ಲಾರಿಗಳ ಪೈಕಿ 4 ಲಾರಿಗಳನ್ನು ಹಿರೇಹಳ್ಳಿ ಕೈಗಾಕಾಪ್ರದೇಶದಲ್ಲಿರುವ ಸೂರ್ಯ ಸೂಪರ್ ಸ್ಟೋನ್ ಪಾಲೀಷ್ ಗ್ರಾನೈಟ್ ಗೋಡಾನಿನಲ್ಲಿ ನಿಲ್ಲಿಸಿಕೊಂಡಿರುತ್ತಾರೆ.
ದಿನಾಂಕ 17/01/2019 ರಂದು ಮದ್ಯಾಹ್ನ ಸಿದ್ದಗಂಗ ಮಠದ ಸಮೀಪ ಗ್ರಾನೈಟ್ ಮಾಲೀಕರು ರೂ 25 ಲಕ್ಷ ಹಣವನ್ನು ಶಾಸಕರಿಗೆ ನಿಡಿರುತ್ತಾರೆ. ಹಣ ನೀಡಿದ ತರುವಾಯ ಮಾಲೀಕರು ಲಾರಿಗಳನ್ನು ಸೂರ್ಯ ಸೂಪರ್ ಸ್ಟೋನ್ ಪಾಲೀಷ್ ಗ್ರಾನೈಟ್ ಫ್ಯಾಕ್ಟರಿಯಿಂದ ತೆಗೆದುಕೊಂಡು ಹೋಗುವ ಮುಂಚೆ ಸಾರ್ವಜನಿಕರಿಗೆ ಮಾಹಿತಿ ತಿಳಿದು ನಮ್ಮ ಪಕ್ಷದ ಕಾರ್ಯಕರ್ತರು ಲಾರಿ ಇರುವ ಸ್ಥಳಕ್ಕೆ ಹೋಗಿ ಖಚಿತಪಡಿಸಿಕೊಂಡು ಫ್ಯಾಕ್ಟರಿ ಹತ್ತಿರ ಘೇರಾವ್ ಹಾಕಿ ಗಣಿ ಮತ್ತು ಭೂ ವಿಜ್ಘಾನ ಇಲಾಖಾ ಅಧಿಕಾರಿಗಳಿಗೆ ಮತ್ತು ಪೋಲೀಸರಿಗೆ ಮಾಹಿತಿ ತಿಳಿಸಿ ದೂರು ನೀಡಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಪಡಿಸಿದ್ದೇವೆ ಎಂದರು.
ಗಣಿ ಮತ್ತು ಭೂ ವಿಜ್ಘಾನ ಇಲಾಖಾ ಅಧಿಕಾರಿಗಳು ನಾವು ನೀಡಿರುವ ದೂರನ್ನು ಪರಿಗಣಿಸದೆ ಹಾಲಿ ಶಾಸಕರ ಅಣತಿಯಂತೆ ಅವರಿಗೆ ಬೇಕಾದ ರೀತಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. ಶಾಸಕರಿಗೆ ಸರ್ಕಾರದ ಬೊಕ್ಕಸದ ಬಗ್ಗೆ ಕಾಳಿಜಿ ಇರುವುದೇ ಆಗಿದ್ದಲ್ಲಿ ಸದರೀ ಲಾರಿಗಳನ್ನು ಇಲಾಖಾ ವಶಕ್ಕೆ ನೀಡಿ ಕೇಸು ಹಾಕಿಸಿ ಸರ್ಕಾರದ ಬೊಕ್ಕಸಕ್ಕೆ ದಂಡ ಪಾವತಿ ಆಗುವಂತೆ ನೋಡಿಕೊಳ್ಳಬೇಕಿತ್ತು ಆದರೆ ಹಿರೇಹಳ್ಳಿ ಗೋಡಾನಿನಲ್ಲಿ ನಿಲ್ಲಿಸಿಕೊಂಡು ವಸೂಲಿಗೆ ಇಳಿದಿರುತ್ತಾರೆ.
ಈ ವಿಚಾರವಾಗಿ ಹಾಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕರ ವಿರುದ್ದ ಮತ್ತು ಸಂಬಂದಪಟ್ಟ ಇಂಜಿನಿಯರ್ ಜಿಯಾಲಿಜಿಸ್ಟ್ ಮತ್ತು ಕ್ಯಾತ್ಸಂದ್ರ ಪಿ,ಎಸ್,ಐ ವಿರುದ್ದ ಸಮಗ್ರ ತನಿಖೆ ನಡೆಸುವಂತೆ ಮಾನ್ಯ ಲೋಕಾಯಕ್ತರು ಕರ್ನಾಟಕ ಹಾಗೂ ಭ್ರಷ್ಠಾಚಾರ ನಿಗ್ರಹ ದಳ (ಎ.ಸಿ.ಬಿ) ದಲ್ಲಿ ನಮ್ಮ ತಾ,ಪಂ ಅಧ್ಯಕ್ಷರಾದ ಗಂಗಾಂಜಿನೇಯ ಅವರು ದೂರು ದಾಖಲಿಸಿದ್ದಾರೆ.
ಗಣಿಗಾರಿಕೆ ಇಲಾಖೆ ಅಧಿಕಾರಿಗಳು ಮೊಕ್ಕದ್ದಮೆ ದಾಖಲು ಮಾಡುವಾಗ ಕೇವಲ ಕೂಲಿಗೆ ಬಂದಿರುವ ಲಾರಿಗಳ ಮೇಲೆ ಮಾತ್ರ ಕೇಸು ಹಾಕಿದ್ದು ಲಾರಿಗಳ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ಪಡೆದು ತಪ್ಪಿತಸ್ಥರ ವಿರುದ್ದ ಮೊಕದ್ದಮೆ ದಾಖಲು ಮಾಡುವಂತೆ ಹಾಲಿ ಶಾಸಕರು ತಮ್ಮ ಪ್ರಭಾವವನ್ನು ಬಳಸಿ ತನಿಖೆಯ ದಿಕ್ಕು ತಪ್ಪಸಿ ತನಿಖೆಗೆ ಅಡ್ಡಿ ಪಡಿಸುವ ಸಾಧ್ಯತೆಗಳು ಇರುವುದರಿಂದ ಸದರೀ ವಿಚಾರವನ್ನು ನ್ಯಾಯಯುತವಾಗಿ ಪಾರದರ್ಶಕವಾಗಿ ತನಿಖೆ ನಡೆಸಬೇಕು. ಭ್ರಷ್ಟಾಚಾರದಲ್ಲಿ ಭಾಗಿ ಆಗಿರುವ ಶಾಸಕರನ್ನು ಮತ್ತು ಸ್ಥಳದಲ್ಲೇ ಇದ್ದು ಕುಮ್ಮಕ್ಕು ನೀಡಿರುವ ಅಧಿಕಾರಿಗಳನ್ನು ಬಂದಿಸಬೇಕೆಂದು ಆಗ್ರಹಿಸಿದ್ದಾರೆ.