ತುಮಕೂರು :
ತಮ್ಮ ಅಧಿಕಾರಾವಧಿಯಲ್ಲಿ ಜಿಲ್ಲೆಯ ಲೋಕಸಭಾ ಕ್ಷೇತ್ರದ ಜನರ ಬೇಡಿಕೆಗನುಗುಣವಾಗಿ ಸಂಸದರ ನಿಧಿಯನ್ನು ಸದ್ವಿನಿಯೋಗಿಸಲಾಗಿದೆ ಎಂದು ಎಂದು ಲೋಕಸಭಾ ಸದಸ್ಯ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ನಗರದ ದೇವರಾಯ ಪಟ್ಟಣ ಬಡಾವಣೆಯಲ್ಲಿಂದು ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ದಿನ ಪಾಲಿಕೆ ವ್ಯಾಪ್ತಿಯ 23 ಕಡೆ ಕುಡಿಯುವ ನೀರಿನ ಘಟಕ, ಹೈಮಾಸ್ಡ್ ಲೈಟ್ ಅಳವಡಿಕೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಕೇಂದ್ರದಿಂದ 5 ವರ್ಷಗಳ ಅವಧಿಗಾಗಿ ಸಂಸದರ ನಿಧಿಗೆ 25ಕೋಟಿ ರೂ. ಗಳ ಅನುದಾನ ಹಂಚಿಕೆಯಾಗಿದ್ದು, ಈ ಅನುದಾನದ ಪ್ರತಿಯೊಂದು ಪೈಸೆಯನ್ನು ಜನೋಪಯೋಗಿ ಕಾರ್ಯಗಳಿಗೆ ಮಾತ್ರ ಖರ್ಚು ಮಾಡಲಾಗಿದೆ. ಲೋಕಸಭಾ ಸದಸ್ಯರ ನಿಧಿಯಿಂದ ಕೈಗೊಂಡಿರುವ ಕಾಮಗಾರಿಗಳು ಹಾಗೂ ವೆಚ್ಚದ ವಿವರಗಳ ಮಾಹಿತಿ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದೇನೆ ಎಂದು ತಿಳಿಸಿದ ಅವರು, ಜಿಲ್ಲಾದ್ಯಂತ ಪ್ರವಾಸ ಕೈಗೊಂಡು ಜನರ ಮೂಲಭೂತ ಸೌಕರ್ಯಗಳನ್ನು ಅರಿತು ಅದಕ್ಕನುಗುಣವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಾರದೆನ್ನುವ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದ್ದು, ಶಾಲೆ-ಕಾಲೇಜುಗಳು ಇರುವ ಪ್ರದೇಶದಲ್ಲಿ ಕಿರು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯ ದೇವರಾಯಪಟ್ಟಣ, ಸತ್ಯಮಂಗಲ ಬಡಾವಣೆ, 9ನೇ ವಾರ್ಡ್, 7ನೇ ವಾರ್ಡ್, ಗುಂಚಿ ಸರ್ಕಲ್ ಬಳಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಅದೇ ರೀತಿ ಗೂಳೂರು, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜು ಆವರಣ, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು, ಸಿದ್ಧಾರ್ಥ ಡಿಇಡಿ ಕಾಲೇಜು, ವಿದ್ಯೋದಯ ಕಾನೂನು ಕಾಲೇಜು, ಸಾರ್ವಜನಿಕ ಆಸ್ಪತ್ರೆ, ಶ್ರೀ ಸಿದ್ದಗಂಗಾ ಮಹಿಳಾ ಪದವಿಪೂರ್ವ ಕಾಲೇಜು, ಶ್ರೀ ಸಿದ್ಧಗಂಗಾ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣ, ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಎನ್.ಸಿ.ಸಿ. ತರಬೇತಿ ಶಿಬಿರ, ಪಾಲಿಟೆಕ್ನಿಕ್ ಕಾಲೇಜು, ಕುಂಚಿಟಿಗರ ಸಂಘ ಹಾಗೂ ಕುಂಚಿಟಿಗರ ಸಂಘದ ವಿದ್ಯಾರ್ಥಿ ನಿಲಯ ಆವರಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಗುವುದು. ಅಲ್ಲದೆ ಗೂಳರಿವೆ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್ ಪ್ರದೇಶದಲ್ಲಿ ಹೈಮಾಸ್ಡ್ ಲೈಟ್ ಅಳವಡಿಕೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ದೇವರಾಯಪಟ್ಟಣವು ಪಾಲಿಕೆ ವ್ಯಾಪ್ತಿಯ ದೇವ ಮೂಲೆಯಾಗಿರುವುದರಿಂದ ಇಲ್ಲಿಂದಲೇ ಕಾಮಗಾರಿಗಳ ಶುಭಾರಂಭ ಮಾಡಲಾಗಿದ್ದು, ಬರುವ ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮುನ್ನವೇ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಪ್ರತಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಅಂದಾಜು 10ಲಕ್ಷ ರೂ., ಕಿರು ನೀರು ಘಟಕ ನಿರ್ಮಾಣಕ್ಕೆ 1.75ಲಕ್ಷ ರೂ., ಹೈ ಮಾಸ್ಡ್ ದೀಪ ಅಳವಡಿಕೆಗೆ 5ಲಕ್ಷ ರೂ. ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.