ಸಂವಿಧಾನದ ಆಶಯಗಳು ಎಲ್ಲರಿಗೂ ತಿಳಿಯಬೇಕು ಮತ್ತು ವೈಚಾರಿಕತೆ ವಿಸ್ತರಣೆಯಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್.ಜಗದೀಶ್ ಅಭಿಪ್ರಾಯಪಟ್ಟರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಿ ಜನಜಾಗೃತಿ ಆಂದೋಲನ ಮತ್ತು ಸಂವಿಧಾನ ಪ್ರೀತಿ ಕಲಾಬಳಗ ವತಿಯಿಂದ ತುಮಕೂರಿನ ರೈಲ್ವೆ ನಿಲ್ಧಾಣದ ಸಮೀಪ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಲಾಜಾಥಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂವಿಧಾನ ಪ್ರೀತಿ ಕಲಾಬಳಗದ ಕಲಾವಿದರು ಸಂವಿಧಾನದ ಆಶಯಗಳೇನೆಂಬುದನ್ನು ಬೀದಿನಾಟಕದ ಮೂಲಕ ಅತ್ಯಂತ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟಿದ್ದಾರೆ. ಬೀದಿನಾಟಕ ಪರಿಣಾಮಕಾರಿ ಸಾಧನವಾಗಿದೆ. ಇದಕ್ಕಾಗಿ ಕಲಾತಂಡಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಮಾತನಾಡಿ, ಸಂವಿಧಾನ ಅಳವಡಿಸಿಕೊಂಡು 70 ವರ್ಷಗಳ ನಂತರ ಸಂವಿಧಾನದ ಆಶಯಗಳನ್ನು ಜನರಿಗೆ ತಿಳಿಸಬೇಕಾದಂತಹ ಸನ್ನಿವೇಶ ಬಂದಿರುವುದು ವಿಷಾದನೀಯ. ಶಾಲಾ ಕಾಲೇಜುಗಳಲ್ಲಿ ಸಂವಿಧಾನದ ಪ್ರಾಥಮಿಕ ವಿಷಯಗಳನ್ನು ತಿಳಿಸುವ ನಿಟ್ಟಿನಲ್ಲಿ ಪಠ್ಯದಲ್ಲಿ ಅಳವಡಿಸಬೇಕು. ಕೇವಲ ರಾಜ್ಯಶಾಸ್ತ್ರ ಓದುವ ವಿದ್ಯಾರ್ಥಿಗಳು ಮಾತ್ರ ತಿಳಿದುಕೊಂಡರೆ ಸಾಲದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಸಮಾನತೆ, ಸಮಾನ ಅವಕಾಶಗಳು ಎಲ್ಲರ ನಡುವೆ ಇರಬೇಕು. ಆದರೆ ಇಂದು ಕೆಲ ರಾಜಕೀಯ ಪಕ್ಷಗಳು ಜನರು ಯಾವ ಬಟ್ಟೆ ತೊಡಬೇಕು. ಏನನ್ನು ತಿನ್ನಬೇಕು. ಯಾರೊಂದಿಗೆ ಇರಬೇಕು. ಯಾರ ಜೊತೆ ಮಾತನಾಡಬೇಕು ಎಂಬುದನ್ನು ತೀರ್ಮಾನಿಸುತ್ತಿವೆ. ಇದು ಬಹುತ್ವ ಭಾರತಕ್ಕೆ ಧಕ್ಕೆಯಾಗಿದೆ. ಇದು ತಪ್ಪಬೇಕಾದರೆ ಯುವ ಜನತೆ ಸಂವಿಧಾನ ತತ್ವಗಳನ್ನು ಎಲ್ಲರಿಗೂ ವಿಸ್ತರಿಸುವ ಕೆಲಸ ಮಆಡಬೇಕು ಎಂದು ಹೇಳಿದರು.
ಕೆಲವರು ಸಂವಿಧಾನವನ್ನು ಸುಡುವ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ಸಂವಿಧಾನವನ್ನು ಬದಲಿಸುವ ಮಾತನಾಡುತ್ತಿದ್ದಾರೆ. ಇದೆಲ್ಲವೂ ಸಂವಿಧಾನ ವಿರೋಧಿಯಾದ ನಿಲುಗಳಾಗಿವೆ. ಸಂವಿಧಾನದಲ್ಲಿ ಸಮಾನತೆ, ಭ್ರಾತೃತ್ವ, ಅಸಹಿಂಸೆ ಮೊದಲಾದ ಅಂಶಗಳು ಈ ದೇಶವನ್ನು ಒಳ್ಳೆಯ ದಾರಿಯಲ್ಲಿ ನಡೆಯಲು ಸಹಕರಿಸುತ್ತವೆ. ಇವುಗಳನ್ನು ಎಲ್ಲರೂ ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದು ತಿಳಿಸಿದರು.
ಬುದ್ದ, ಬಸವ ಅಂಬೇಡ್ಕರ್ ಅವರು ಕಂಡ ಕನಸುಗಳನ್ನು ನನಸು ಮಾಡುವತ್ತ ಯುವಜನತೆ ಮುಂದಾಗಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೂಡಿ ಬಾಳಬೇಕು. ಜೀವನದಲ್ಲಿ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಸಾಗಿದರೆ ಸುಂದರ ಸಮಾಜ ನಿರ್ಮಾಣ ಸಾದ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಸೈಯದ್ ಮುಜೀಬ್, ಸ್ಲಂ ಜನಾಂದೋಲನ ಸಂಚಾಲಕ ಎ.ನರಸಿಂಹಮೂರ್ತಿ, ಸಮುದಾಯ ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ಈ.ಸಿದ್ದಯ್ಯ, ಡಾ.ಟಿ.ಆರ್.ಲೀಲಾವತಿ, ಜಿ.ಕೆ.ನಾಗರಾಜು, ಮುದ್ದಗಂಗಯ್ಯ. ಅಶ್ವಾಕ್ ಅಹಮದ್, ಪ್ರಸನ್ನ, ಬಿ.ಎಸ್.ಸೌಭಾಗ್ಯ, ರೇಣುಕಾ ಡಿ.ಆರ್. ಕೃಷ್ಣಾನಾಯ್ಕ್, ತಿಮ್ಮಾನಾಯ್ಕ್, ರಾಜೇಶ್, ಎ.ಆರ್. ಮಹೇಶ್, ಶಿವಲಿಂಗಮೂರ್ತಿ, ಜೆ.ಬಿ. ಪ್ರಸನ್ನಕುಮಾರ್, ಹೆಚ್.ಸಿ. ಪ್ರ¸ನ್ನಕುಮಾರ್ ಮತ್ತು ಬೋಧಕೇತರ ಸಿಬ್ಬಂದಿ, ಶೆಟ್ಟಾಳಯ್ಯ, ರಘು ಮೊದಲಾದವರು ಹಾಜರಿದ್ದರು.