ತುಮಕೂರು :
ರಾಜ್ಯದಲ್ಲಿ ಸಣ್ಣ ಕೈಗಾರಿಕೆಯಿಂದಲೇ ಶೇ.60ರಷ್ಟು ಉದ್ಯೋಗ ಸೃಷ್ಟಿ ಹಾಗೂ ಶೇ. 40ರಷ್ಟು ಜಿ.ಎಸ್.ಟಿ. ಸಂಗ್ರಹವಾಗುತ್ತಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಬೆಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಧಾರವಾಡದ ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ(ಸಿಡಾಕ್)ದ ವತಿಯಿಂದ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿಂದು ಏರ್ಪಡಿಸಿದ್ದ 6 ದಿನಗಳ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ಯುವಕರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಕೈಗಾರಿಕಾ ಇಲಾಖೆಯಿಂದ ದೊರೆಯುವ ಸಾಲ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಸಹಾಯಧನಕ್ಕಾಗಿಯೇ ಸಾಲವನ್ನು ಪಡೆಯಬಾರದು. ಇಲಾಖೆಯು ಸ್ವಯಂ ಉದ್ಯೋಗ ಕೈಗೊಳ್ಳಲು ನೀಡುವ ಸಾಲ ಸೌಲಭ್ಯದಿಂದ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಾಲ ಸೌಲಭ್ಯವನ್ನು ಒಂದೇ ಕುಟುಂಬದವರು ಪಡೆಯದೆ ಇತರೆ ಬಡ ಕುಟುಂಬದ ನಿರುದ್ಯೋಗಿಗಳಿಗೆ ಅವಕಾಶ ಮಾಡಿಕೊಡಬೇಕು. ದುಡಿಯುವ ಕೈಗಳಿಗೆ ಮಾತ್ರ ಸಾಲ ಸೌಲಭ್ಯ ದೊರೆಯುವಂತಾಗಬೇಕು ಎಂದರಲ್ಲದೆ, ಕೇಂದ್ರವು ಕೌಶಲ್ಯಾಭಿವೃದ್ಧಿಗಾಗಿ 5ಸಾವಿರ ಕೋಟಿ ರೂ.ಗಳ ಅನುದಾನವನ್ನು ರಾಜ್ಯಕ್ಕೆ ಬಿಡುಗಡೆ ಮಾಡಲಾಗುತ್ತಿದ್ದು, ಅರ್ಹರಿಗೆ ಅಗತ್ಯ ಕೌಶಲ್ಯ ತರಬೇತಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ತೆಂಗು ನಾರಿನ ಕೈಗಾರಿಕೆಗಳು ರೋಗಗ್ರಸ್ತವಾಗಿದ್ದು, ಇದನ್ನು ಅಭಿವೃದ್ಧಿಪಡಿಸಲು ತಮಿಳು ನಾಡು ಹಾಗೂ ಕೇರಳ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಾಗಿದೆ. ಈ ಎರಡೂ ರಾಜ್ಯಗಳು ತೆಂಗುನಾರು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದು, ತೆಂಗು ನಾರಿನ ಉತ್ಪನ್ನಗಳನ್ನು ಹೊರದೇಶಗಳಿಗೆ ರಫ್ತು ಮಾಡುವ ಮೂಲಕ ಆರ್ಥಿಕ ಲಾಭ ಗಳಿಸುತ್ತಿವೆ ಎಂದು ತಿಳಿಸಿದರು.
ನಂತರ ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆ(ಸಿ.ಎಂ.ಇ.ಜಿ.ಪಿ)ಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಪತ್ರ ವಿತರಣೆ ಮಾಡಲಾಯಿತು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್, ಮತ್ತಿತರರು ಹಾಜರಿದ್ದರು.