ತುಮಕೂರು:
ಕುಷ್ಠರೋಗ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂದಿನಿಂದ ಜನವರಿ 13ರವರೆಗೆ ಕುಷ್ಠ ರೋಗ ಅರಿವು ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಡಾ: ಪ್ರೇಮ್‍ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜರುಗಿದ ಜಿಲ್ಲಾ ಕುಷ್ಠರೋಗ ಅರಿವು ಆಂದೋಲನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ 72 ಕುಷ್ಠ ರೋಗ ಪ್ರಕರಣಗಳು ನೋಂದಣಿಯಾಗಿದ್ದು, ಡಿಸೆಂಬರ್ ಅಂತ್ಯಕ್ಕೆ 67 ಪ್ರಕರಣಗಳಿಗೆ ಔಷಧೋಪಚಾರ ಮಾಡಲಾಗಿದೆ ಎಂದು ತಿಳಿಸಿದರು.
ಆಂದೋಲನ ಕಾರ್ಯಕ್ರಮಕ್ಕೆ ನಿಯೋಜಿಸಿರುವ ಅಧಿಕಾರಿಗಳು ಕಾರ್ಯಕ್ರಮಕ್ಕೆ ಕೈಜೋಡಿಸಿ ಸಹಕರಿಸಬೇಕೆಂದು ಸೂಚಿಸಿದರಲ್ಲದೆ ಕುಷ್ಠರೋಗ ನಿವಾರಣೆ ಕುರಿತಂತೆ ಗ್ರಾಮಸಭೆ, ಶಾಲಾ ಮಕ್ಕಳೊಂದಿಗೆ ಕ್ವಿಜ್ ಕಾರ್ಯಕ್ರಮ, ಅಂಗನವಾಡಿ ಕೇಂದ್ರ, ಸ್ವಸಹಾಯ ಸಂಘಗಳೊಂದಿಗೆ ಅರಿವು ಕಾರ್ಯಕ್ರಮಗಳನ್ನು ನಡೆಸಲು ತಾಕೀತು ಮಾಡಿದರು.
ಸಭೆಯಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ಸನತ್‍ಕುಮಾರ್, ಜಿಲ್ಲಾ ಆಶಾ ಮೇಲ್ವಿಚಾರಕಿ ಆರ್. ಯಶೋಧ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಮುಂತಾದವರು ಭಾಗವಹಿಸಿದ್ದರು.