ತುಮಕೂರು :
ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಫೆಬ್ರುವರಿ 1 ರಿಂದ ಅನ್ವಯವಾಗುವಂತೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 1.50ರೂ.ಗಳಷ್ಟು ಹೆಚ್ಚಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ತಿಳಿಸಿದರು.
ಸರ್ಕಾರಿ ಪ್ರವಾಸಿ ಮಂದಿರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‍ಗೆ 22 ರೂ.ಗಳನ್ನು ನೀಡುತ್ತಿದ್ದು, ಫೆಬ್ರುವರಿ 1ರಿಂದ 23.50 ರೂ.ಗಳಿಗೆ ಹೆಚ್ಚಿಸಲಾಗುವುದು. ಜಿಲ್ಲೆಯಲ್ಲಿ ತೀವ್ರ ಬರಗಾಲವಿದ್ದು, ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಹಾಲಿನ ದರವನ್ನು ಹೆಚ್ಚಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ದಿನವೊಂದಕ್ಕೆ 10.30ಲಕ್ಷ ರೂ.ಗಳಷ್ಟು ಹೆಚ್ಚುವರಿ ಖರ್ಚು ಬರಲಿದೆ. ತುಮಕೂರು ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಮಾತ್ರ ಈ ದರವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಇದಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಹಾಲು ಉತ್ಪಾದಕ ಸದಸ್ಯರುಗಳ 70ಸಾವಿರ ರಾಸುಗಳಿಗೆ 5ಕೋಟಿ ರೂ. ವೆಚ್ಚದಲ್ಲಿ ವಿಮಾ ಸೌಲಭ್ಯ ಒದಗಿಸಲಾಗಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ 59 ವರ್ಷ ಮೀರದ ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಒಕ್ಕೂಟ, ರೈತ ಕಲ್ಯಾಣ ಟ್ರಸ್ಟ್ ಹಾಗೂ ಫಲಾನುಭವಿಗಳ ವಂತಿಕೆಯ 50:20:30 ಅನುಪಾತದಲ್ಲಿ 456 ರೂ. ಪ್ರೀಮಿಯಂನಂತೆ ಒಟ್ಟು 70ಸಾವಿರ ಸದಸ್ಯರಿಗೆ ಗುಂಪು ವಿಮಾ ಯೋಜನೆಯಡಿ ಒಕ್ಕೂಟದಿಂದ 3 ಕೋಟಿ ರೂ.ಗಳ ಅನುದಾನ ಕಾಯ್ದಿರಿಸಲಾಗಿದೆ ಹಾಗೂ 59 ವರ್ಷದೊಳಗಿನ ಸದಸ್ಯರು ಮತ್ತು ಸಂಘಗಳ ಸಿಬ್ಬಂದಿಗಳಿಗೆ ಒಂದು ಲಕ್ಷ ರೂ.ಗಳ ವಿಮಾ ಸೌಲಭ್ಯ ಒದಗಿಸಲಾಗುವುದು. ಅಲ್ಲದೆ 60 ವರ್ಷ ಮೀರಿದ ಸದಸ್ಯರಗಳು ಮರಣ ಹೊಂದಿದಲ್ಲಿ ಅವರಿಗೆ ವಿಮಾ ಪರಿಹಾರ ಮೊತ್ತ ದೊರೆಯದ ಕಾರಣ ಕಲ್ಯಾಣ ಟ್ರಸ್ಟ್ ಹಾಗೂ ಒಕ್ಕೂಟದ ವತಿಯಿಂದ 25ಸಾವಿರ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.
ಒಕ್ಕೂಟವು ಹೆಣ್ಣು ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ನಗರದಲ್ಲಿ ಉಚಿತ ವಸತಿ ನಿಲಯವನ್ನು ಪ್ರಾರಂಭಿಸಿದ್ದು, ಜಿಲ್ಲೆಯ 200 ವಿದ್ಯಾರ್ಥಿನಿಯರು ಈ ವಸತಿ ನಿಲಯದ ಪ್ರಯೋಜನ ಪಡೆಯುತ್ತಿದ್ದಾರೆ. ಒಕ್ಕೂಟದ ಮಾರಾಟ ಜಾಲವನ್ನು ವಿಸ್ತರಿಸುವ ಹಿನ್ನಲೆಯಲ್ಲಿ ಮುಂಬೈ ಮಹಾನಗರದಲ್ಲಿ ದಿನವಹಿ 85ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ದಿನವಹಿ 1.50ಲಕ್ಷ ಲೀಟರ್ ಹಾಲು ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಒಕ್ಕೂಟದ ಡೈರಿ ಆವರಣದಲ್ಲಿ 25ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿರುವ ತೃಪ್ತಿ ಬ್ರಾಂಡ್ ಹೆಸರಿನಲ್ಲಿ 80ಸಾವಿರ ಲೀಟರ್ ಹಾಲನ್ನು ಪ್ಯಾಕ್ ಮಾಡುವ ಹಾಗೂ 90 ದಿನಗಳ ಜೀವಿತಾವಧಿಯುಳ್ಳ ಹಾಲನ್ನು ತಯಾರಿಸುವ ಯುಹೆಚ್‍ಟಿ ಫ್ಲೆಕ್ಸಿ ಪ್ಯಾಕ್ ಘಟಕದಲ್ಲಿ ಸ್ಥಳೀಯವಾಗಿ ಹಾಗೂ ಜಮ್ಮು-ಕಾಶ್ಮೀರ, ಮುಂಬೈ, ಆಂಧ್ರಪ್ರದೇಶ, ದೆಹಲಿ, ಮತ್ತಿತರ ರಾಜ್ಯಗಳಿಗೆ ದಿನವಹಿ 50ಸಾವಿರ ಲೀಟರ್ ಹಾಲು ಮಾರಾಟ ಮಾಡಲಾಗುತ್ತಿದೆ ಎಂದರಲ್ಲದೆ, ಒಕ್ಕೂಟದ ಮೊಸರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವುದರಿಂದ ದಿನವಹಿ ಇರುವ 40ಸಾವಿರ ಕೆ.ಜಿ. ಮೊಸರು ಉತ್ಪಾದನೆಯನ್ನು ಒಂದು ಲಕ್ಷ ಕೆ.ಜಿ.ಗೆ ವಿಸ್ತರಿಸುವ ಪ್ರತ್ಯೇಕ ಘಟಕವನ್ನು ಪ್ರಾರಂಭಿಸಿದ್ದು, ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ ಎಂದರು.
ಡೈರಿ ಆವರಣದಲ್ಲಿ 6ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಟರ್ ಡೀ-ಫ್ರೀಜರ್ ಮತ್ತು ಡ್ರೈ ಪ್ರಾಡಕ್ಟ್ಸ್ ಗೋದಾಮು ನಿರ್ಮಾಣ ಮಾಡುವ ಯೋಜನೆ ಹೊಂದಲಾಗಿದೆ. ಹಾಲು ಶೇಖರಣೆಗೆ ತಕ್ಕಂತೆ ಮಾರಾಟವನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ಅನುದಾನ ಪಡೆದು 150ಕೋಟಿ ರೂ. ಅಂದಾಜು ವೆಚ್ಚದಲ್ಲಿ ದಿನವಹಿ 8ಲಕ್ಷ ಲೀಟರ್‍ಗಳಿಂದ 10ಲಕ್ಷ ಲೀಟರ್ ಸಾಮಥ್ರ್ಯಕ್ಕೆ ವಿಸ್ತರಿಸಬಹುದಾದ ಸ್ವಯಂ ಚಾಲಿತ ಮೆಗಾ ಡೈರಿಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಸರ್ಕಾರದಿಂದ ಜಾರಿಯಾಗಿರುವ ಕ್ಷೀರಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ವಿತರಿಸಲು 1190 ಮೆ.ಟನ್ ಹಾಲಿನ ಪುಡಿಯನ್ನು ದಾಸ್ತಾನು ಮಾಡಲಾಗಿದೆ ಹಾಗೂ ಗ್ರಾಹಕರಿಗೆ ಮಾರಾಟ ಮಾಡಲು ಒಕ್ಕೂಟದಲ್ಲಿ 736 ಮೆ.ಟನ್ ಬೆಣ್ಣೆಯನ್ನು ದಾಸ್ತಾನು ಇಡಲಾಗಿದೆ ಎಂದು ತಿಳಿಸಿದರು.
ಲಿಂ.ಶ್ರೀಗಳ ಪುಣ್ಯಸ್ಮರಣೆಗೆ ಉಚಿತ ತುಪ್ಪ:-
ಕರ್ನಾಟಕ ಹಾಲು ಮಹಾಮಂಡಳಿಯು ಜನವರಿ 31ರಂದು ನಡೆಯಲಿರುವ ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ನಿಮಿತ್ತ 2ಲಕ್ಷ ರೂ. ಮೌಲ್ಯದ 500 ಲೀಟರ್ ತುಪ್ಪವನ್ನು ಉಚಿತವಾಗಿ ಇಂದು ಮಠಕ್ಕೆ ನೀಡಲಾಗುತ್ತಿದೆ. ತುಮಕೂರು ಹಾಲು ಒಕ್ಕೂಟದ ವತಿಯಿಂದ ಅತಿ ಕಡಿಮೆ ದರದಲ್ಲಿ 100 ಟನ್ ತುಪ್ಪ ಹಾಗೂ ಉಚಿತವಾಗಿ 7ಸಾವಿರ ಲೀಟರ್ ಹಾಲನ್ನು ಮಠಕ್ಕೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ಹಾಗೂ ಕೊಂಡವಾಡಿ ಚಂದ್ರಶೇಖರ್, ನಿರ್ದೇಶಕರಾದ ಈಶ್ವರಯ್ಯ ಹಾಗೂ ಚನ್ನಮಲ್ಲಯ್ಯ, ವ್ಯವಸ್ಥಾಪಕ ನಿರ್ದೇಶಕ ಮುನೇಗೌಡರು, ವ್ಯವಸ್ಥಾಪಕರಾದ ನಾಗರಾಜ ಹಾಗೂ ವಿಶ್ವನಾಥ್ ನಾಡಿಗ್, ಉಪ ವ್ಯವಸ್ಥಾಪಕ ಕೃಷ್ಣ ನಾಯಕ್ ಉಪಸ್ಥಿತರಿದ್ದರು.