ತುಮಕೂರು:
ಸತತ ಬರದಿಂದ ಬೆಸತ್ತಿರುವ ಜಿಲ್ಲೆಯ ಜನರಿಗೆ ಅದರಲ್ಲಿಯೂ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೆ ಒಂದು ಹಸು ನೀಡುವ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿಗಳು ಹಾಗೂ ಸರಕಾರದೊಂದಿಗೆ ಮಾತುಕತೆ ನಡೆಸಲಿದ್ದೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.
ತಾಲೂಕಿನ ಬೆಳ್ಳಾವಿ ಹೋಬಳಿ ನಾಗಾರ್ಜುನಹಳ್ಳಿಯಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆವತಿಯಿಂದ ಹಮ್ಮಿಕೊಂಡಿದ್ದ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರಿಗೆ ನಿರಂತರ ಬರದಿಂದ ಬದುಕು ಕಷ್ಟವಾಗಿದೆ. ಬೇರೆ ಬೇರೆ ಯೋಜನೆಗಳಿಗೆ ಸಾವಿರಾರು ಕೋಟಿ ರೂಗಳನ್ನು ಸರಕಾರ ಖರ್ಚು ಮಾಡುತ್ತಿದೆ. ಈ ಹಣದಲ್ಲಿ ಪ್ರತಿ ಕುಟುಂಬಕ್ಕೆ ಒಂದು ಹಸು ವಿತರಿಸುವ ಮೂಲಕ ಅವರು ಸಹ ಬರವನ್ನು ಸಮರ್ಥವಾಗಿ ಎದುರಿಸುವ ಶಕ್ತಿಯನ್ನು ನೀಡಲಿ ಎಂಬ ಉದ್ದೇಶದಿಂದ ಬಜೆಟ್ ಮಂಡನೆಗು ಮುನ್ನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಂಬಂಧಪಟ್ಟ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು ಎಂದರು.
ಕೃಷಿ, ತೋಟಗಾರಿಕೆ ಮತ್ತು ಹೈನುಗಾರಿಕೆಗೆ ಸರಕಾರ ಹಲವು ಯೋಜನೆಗಳ ಸೇರಿಸುವ ಮೂಲಕ ರೈತರ ನೆರವಿಗೆ ಸರಕಾರದ ಧಾವಿಸುತ್ತಿದೆ.ಇದರಲ್ಲಿ ಕಾಲುಬಾಯಿ ಜ್ವರದ ವಿರುದ್ದ ಲಸಿಕೆಯೂ ಒಂದು.ಜನರಿಗೆ ಖಾಯಿಲೆಯಾದರೆ ಹೇಳಿಕೊಳ್ಳಲು ಬಾಯಿ ಇದೆ.ಆದರೆ ಮೂಕ ಪ್ರಾಣಿಗಳಿಗೆ ಹೇಳಿಕೊಳ್ಳಲಾಗದು.ಆದ್ದರಿಂದ ಕಾಲ ಕಾಲಕ್ಕೆ ನಾವುಗಳೇ ಅಗತ್ಯವಿರುವ ಲಸಿಕೆ ಕೊಡುವ ಮೂಲಕ ಅವುಗಳ ಆರೋಗ್ಯ ಕಾಪಾಡಬೇಕಿದೆ.ಜನರು ಹಾಲು ಕಡಿಮೆಯಾಗುತ್ತದೆ ಎಂದು ಹಸುಗಳಿಗೆ ಲಸಿಕೆ ಹಾಕಿಸುವುದನ್ನು ಬಿಡಬಾರದು. ಒಂದೆರಡು ದಿನ ಕಡಿಮೆಯಾದರೂ ನಂತರ ಸರಿಯಾಗುತ್ತದೆ. ಒಂದು ವೇಳೆ ಕಾಯಿಲೆಯಿಂದ ಸತ್ತರ ಹತ್ತಾರು ಸಾವಿರ ನಷ್ಟ.ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ಹಾಗೆಯೇ ಅಧಿಕಾರಿಗಳು ಸಹ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಶಾಸಕ ಡಿ.ಸಿ.ಗೌರಿಶಂಕರ್ ಸಲಹೆ ನೀಡಿದರು.
ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು. ಅಗತ್ಯವಿದ್ದಾಗ ರೈತರ ಹೊಲ, ಗದ್ದೆಗಳಿಗೆ ಹೋಗಿ ಅವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವ ಮೂಲಕ ಬೆಳೆ ನಷ್ಟವಾಗದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ ಅವರು,ಜಾನುವಾರುಗಳಿಗೆ ತೊಂದರೆ ಉಂಟಾದ ಮಾಹಿತಿ ಬಂದರೆ, ಹಗಲು ರಾತ್ರಿ ಎನ್ನದೆ ವೈದ್ಯರು ರೈತರಿಗೆ ಸಹಕಾರ ನೀಡುವಂತೆ ಡಿ.ಸಿ.ಗೌರಿಶಂಕರ್ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಜೀವರಾಯ, ಜಿಲ್ಲೆಯಲ್ಲಿ ಒಟಟು 69491 ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕೆ ಹಾಕಬೇಕಾಗಿದೆ.ಇವುಗಳಲ್ಲಿ 57363 ದನ, 11824 ಎಮ್ಮೆ, 304 ಹಂದಿಗಳಿದ್ದು, ಇವುಗಳಿಗೆ ಲಸಿಕೆ ಹಾಕಲು,ತುಮಕೂರು ಹಾಲು ಒಕ್ಕೂಟದ ಸಹಕಾರದೊಂದಿಗೆ 3 ತಂಡಗಳನ್ನು ರಚಿಸಿ, 21 ಪಶು ವೈದ್ಯರನ್ನು ಮೇಲ್ವಿಚಾರಕರಾಗಿ,43 ಜನ ಲಸಿಕೆದಾರರನ್ನು ನೇಮಕ ಮಾಡಿ ಮುಂದಿನ ಫೆಬ್ರವರಿ 16ರ ವರೆಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಕಾಲು ಬಾಯಿ ಜ್ವರದ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ. ಪ್ರತಿನಿತ್ಯ 4-5 ಹಳ್ಳಿಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ವಿರುತ್ತದೆ.ರೈತರು, ಹಸುಗಳ ಮಾಲೀಕರ ಗಾಳಿ ಸುದ್ದಿಗೆ ಕಿವಿಗೊಡದೆ ಹಾಲು ಕರೆಯುತ್ತಿರುವ ಹಸುಗಳು ಸೇರಿದಂತೆ ಎಲ್ಲಾ ಹಸುಗಳಿಗೂ ಲಸಿಕೆ ಹಾಕಿಸುವ ಮೂಲಕ ಈ ರೋಗದ ಹತೋಟಿಗೆ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.