ತುಮಕೂರು :
ಜಿಲ್ಲೆಯ ಹೇಮಾವತಿ ಶಾಖಾ ನಾಲೆಯ ಆಧುನೀಕರಣಗೊಳಿಸಿದರೆ ಮಾತ್ರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಸಂಸದ ಎಸ್.ಪಿ. ಮುದ್ದಹನುಮೇಗೌಡ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಮಾವತಿ ಯೋಜನೆಯಡಿ ಜಿಲ್ಲೆಗೆ 24.8 ಟಿಎಂಸಿ ನೀರಿನ ಹಂಚಿಕೆಯಾಗಿದ್ದರೂ, ಈವರೆಗೂ ಪೂರ್ಣ ಪ್ರಮಾಣದ ನೀರನ್ನು ಹರಿಸಿಕೊಳ್ಳಲು ಸಾಧ್ಯವಾಗಿಲ್ಲ. ನಾಲೆಯಲ್ಲಿ ಹೂಳು ಹೆಚ್ಚಾಗಿ ತುಂಬಿಕೊಂಡಿದೆಯಲ್ಲದೆ ಮರಗಿಡಗಳು ಬೆಳೆದು ನೀರು ಸರಾಗವಾಗಿ ಹರಿಯಲು ಅಡಚಣೆಯಾಗುತ್ತಿದೆ. ನಾಲೆಯ ಹೂಳನ್ನು ತೆಗೆದು ಆಧುನೀಕರಣಗೊಳಿಸುವುದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆಯನ್ನು ನೀಗಿಸಬಹುದೆಂದರು.
ಎಕ್ಸ್‍ಪ್ರೆಸ್ ನಾಲೆ ಪ್ರಸ್ತಾವನೆ ಕೈಬಿಡಲು ಮನವಿ:-
ನಾಲೆಯಿಂದ ಜಿಲ್ಲೆಯ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸಿಕೊಳ್ಳಲು ನಾಲೆಯ 7ನೇ ಕಿ.ಮೀ.ನಿಂದ 165 ಕಿ.ಮೀ.ವರೆಗಿನ ಎಕ್ಸ್‍ಪ್ರೆಸ್ ನಾಲೆಯನ್ನು ನಿರ್ಮಿಸುವ ಪ್ರಸ್ತಾವನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಈ ಪ್ರಸ್ತಾವನೆಯನ್ನು ಸರ್ಕಾರ ಕೈಬಿಡಬೇಕೆಂದು ಮನವಿ ಮಾಡಿದರು.
ಎಕ್ಸ್‍ಪ್ರೆಸ್ ನಾಲೆ ನಿರ್ಮಿಸುವುದರಿಂದ ಜಿಲ್ಲೆಯ ರೈತರು, ನೀರಾವರಿ ಚಿಂತಕರು ಆತಂಕಗೊಳಗಾಗುವ ಸಾಧ್ಯತೆಯಿದ್ದು, ಜನರ ಹಿತದೃಷ್ಟಿಯಿಂದ ತಾತ್ಕಾಲಿಕ ಪರಿಹಾರ ನೀಡುವ ಎಕ್ಸ್‍ಪ್ರೆಸ್ ನಾಲೆ ಯೋಜನೆಯನ್ನು ಕೈಗೆತ್ತಿಕೊಳ್ಳದೆ 0-187 ಕಿ.ಮೀ.ವರೆಗಿನ ತುಮಕೂರು ಶಾಖಾ ನಾಲೆಯನ್ನು ಆಧುನೀಕರಣಗೊಳಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಎಕ್ಸ್‍ಪ್ರೆಸ್ ನಾಲೆ ನಿರ್ಮಾಣದ ಪ್ರಸ್ತಾವನೆಯನ್ನು ಕೈಬಿಡಲು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ, ನೀರಾವರಿ ಸಚಿವರನ್ನು ಖುದ್ದಾಗಿ ಭೇಟಿ ಮಾಡಿ ಮನವಿ ಮಾಡಲಾಗಿದೆಯಲ್ಲದೆ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರನ್ನು ತಮ್ಮ ನಿಲುವಿಗೆ ಸಹಕಾರ ನೀಡಬೇಕೆಂದು ಪತ್ರದ ಮೂಲಕ ಮನವಿ ಮಾಡಲಾಗಿದೆ ಎಂದು ತಿಳಿಸಿದರು.