ತುಮಕೂರು:

      ರಾಜ್ಯ ಸರಕಾರ ಕಳೆದ 4 ವರ್ಷಗಳಿಂದ ಶಿವಕುಮಾರಶ್ರೀಗಳಿಗೆ ಭಾರತ ರತ್ನ ಪ್ರದಾನ ಮಾಡುವಂತೆ ಶಿಫಾರಸ್ಸು ಮಾಡುತ್ತಿದ್ದರು, ಕೇಂದ್ರ ಸರಕಾರ ಸಿದ್ಧಗಂಗಾಶ್ರೀಗಳ ಹೆಸರನ್ನು ನಿರಾಕರಿಸುವ ಮೂಲಕ ಅಪಾರ ಭಕ್ತ ಸಮೂಹಕ್ಕೆ ಅವಮಾನ ಮಾಡಿದೆ ಎಂದು ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.

      ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕರ್ನಾಟಕದ ಹೆಸರಿನಲ್ಲಿ ಕೊಡಲಾಗಿರುವ ಪದ್ಮಶ್ರೀಯಲ್ಲಿ ಸಾಲುಮರದ ತಿಮ್ಮಕ್ಕ ಒಬ್ಬರೇ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ, ಉಳಿದವರು ಯಾರು ಕರ್ನಾಟಕದಲ್ಲಿ ಸೇವೆಯನ್ನು ಸಲ್ಲಿಸದೇ ಇದ್ದರೂ ಅವರಿಗೆ ಕರ್ನಾಟಕದ ಹೆಸರಿನಲ್ಲಿ ಪ್ರಶಸ್ತಿ ಘೋಷಣೆ ಮಾಡುವ ಮೂಲಕ, ಕನ್ನಡಿಗರನ್ನು ಪ್ರಶಸ್ತಿ ಆಯ್ಕೆಯಲ್ಲಿ ಕಡೆಗಣಿಸಲಾಗಿದೆ ಎಂದರು.

      ಕರ್ನಾಟಕ ಮೂಲದವರಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ತಮಿಳುನಾಡು ರಾಜ್ಯದಿಂದ ಆಯ್ಕೆಯಾದವರ ಪಟ್ಟಿಯಲ್ಲಿಯೂ ಇವರ ಹೆಸರು ಉಲ್ಲೇಖಿಸಲಾಗಿದೆ, ಅವರ ಸಾಧನೆಗೆ ಪ್ರಶಸ್ತಿ ನೀಡಿರುವುದರಲ್ಲಿ ನಮಗೆ ಯಾವುದೇ ಆಕ್ಷೇಪವಿಲ್ಲ, ಆದರೆ ಕರ್ನಾಟಕದಲ್ಲಿ ಅನನ್ಯ ಸೇವೆ ಸಲ್ಲಿಸಿದರವರಿಗೆ ಪ್ರಶಸ್ತಿ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಲಕ್ಷಾಂತರ ಜನರಿಗೆ ವಿದ್ಯಾದಾನ ಮಾಡಿದ ಶ್ರೀಗಳಿಗೆ ಭಾರತ ರತ್ನವನ್ನು ಘೋಷಣೆ ಮಾಡದೇ ಇರುವುದು ನಿರಾಸೆಯನ್ನುಂಟು ಮಾಡಿದೆ ಎಂದರು.

      ಕೇಂದ್ರ ಸರಕಾರ ಈ ಭಾರೀ 94 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿ ಆಯ್ಕೆ ಮಾಡುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದು, ಚುನಾ ವಣೆಯನ್ನು ಗಮನದಲ್ಲಿರಿಸಿಕೊಂಡು ಭಾರತರತ್ನವನ್ನು ನೀಡಿರಬಹುದು, ಶ್ರೀಗಳಿಗೆ ಪ್ರಶಸ್ತಿಯನ್ನು ನೀಡಬಹುದಿತ್ತು ಅಲ್ಲವೇ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ ಮೇಲೆ ಗುವಾಹಟಿಯಲ್ಲಿ ಎಫ್‍ಐಅರ್ ದಾಖಲಿಸಲಾಗಿದೆ. ದೇಶದಲ್ಲಿ ಪ್ರಶ್ನಿಸುವುದು, ಅಭಿ ಪ್ರಾಯವನ್ನು ವ್ಯಕ್ತಪಡಿಸುವುದು ತಪ್ಪು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮೋದಿ ಒಬ್ಬರೇ ಸರ್ವಾಧಿಕಾರಿ ರೀತಿ ವರ್ತಿಸು ತ್ತಿದ್ದಾರೆ ಎಂದು ತಿಳಿಸಿದರು. 

       ರಾಹುಲ್‍ಗಾಂಧಿ ಅವರು ಮಾಜಿ ರಕ್ಷಣಾ ಸಚಿವ, ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಭೇಟಿ ಮಾಡಿ ರುವುದು ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲವನ್ನು ಸೃಷ್ಟಿಸಿದೆ. ರಫೇಲ್ ಹಗರಣದ ಸಂಬಂಧಿಸಿದಂತೆ ದಾಖಲೆಗಳ ವಿನಿಮಯವನ್ನು ಮಾಡಿಕೊಳ್ಳಲಾಗಿದೆ ಎನ್ನಲಾಗುತ್ತಿರುವುದನ್ನು ಬಿಜೆಪಿ ಅರಗಿಸಿಕೊಳ್ಳಲು ಆಗುತ್ತಿಲ್ಲ, ಕೇಂದ್ರ ಸರಕಾರದ ದಬ್ಬಾಳಿಕೆಯನ್ನು ಖಂಡಿಸಿ ಕಳೆದ ಒಂದು ವರ್ಷದಿಂದ ಈಚೆಗೆ ನೀತಿ ಆಯೋಗದ ಸದಸ್ಯರು ರಾಜೀನಾಮೆಯನ್ನು ನೀಡಿ ಹೊರಬಂದಿದ್ದು, ಕೇಂದ್ರ ಸರಕಾರದ ಆಡಳಿತ ವೈಫಲ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

      ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವ ಜೊತೆಯಲ್ಲಿ ರೈತರು, ನಿರುದ್ಯೋಗಿಗಳಿಗೆ ಕನಿಷ್ಠ ಆದಾಯಮಿತಿಯನ್ನು ಹೊಂದುವಂತೆ ಮಾಡುವುದಾಗಿ ಹೇಳಿದ್ದಾರೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಕಾಂಗ್ರೆಸ್ ಪಕ್ಷ ಜನರೊಂದಿಗೆ ಇದ್ದು, ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

      ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ,ಸಿದ್ಧಗಂಗಾಶ್ರೀಗಳಿಗೆ ಭಾರತರತ್ನವನ್ನು ನೀಡದೇ ಕೇಂದ್ರ ಸರಕಾರ ನಿರಾಕರಿಸಿರುವುದು ಸರಿಯಲ್ಲ, ತ್ರಿವಿಧ ದಾಸೋಹದ ಮೂಲಕ ಅನನ್ಯ ಸೇವೆಯನ್ನು ಸಲ್ಲಿರುವ ಶ್ರೀಗಳಿಗೆ ಭಾರತರತ್ನ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಒತ್ತಾಯಿಸಲಿದೆ ಎಂದು ಹೇಳಿದರು.

      ಸುದ್ದಿಗೋಷ್ಠಿಯಲ್ಲಿ ಪರಿಶಿಷ್ಟ ಪಂಗಡದ ಅಧ್ಯಕ್ಷ ಟಿ.ಬಿ.ಮಲ್ಲೇಶ್, ಮರಿಚೆನ್ನಮ್ಮ, ಮಂಜುನಾಥ್, ಮುಸ್ತಾಕ್‍ಅಹ್ಮದ್, ಮಂಜುನಾಥ್, ಕಿಸಾನ್ ವಿಭಾಗದ ಮುಖಂಡ ಜಿ.ಎನ್.ಗೌಡ,ಮಲ್ಲಿಕಾರ್ಜುನಯ್ಯ, ವೈ.ಎನ್.ನಾಗರಾಜು, ತರುಣೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 22 times, 1 visits today)