ತುಮಕೂರು :
ಬುದ್ಧನ ಕಾರಣ್ಯ, ಬಸವಣ್ಣನ ಸಮಾನತೆ ತತ್ವವನ್ನು ಚಾಚೂ ತಪ್ಪದೇ ಪಾಲಿಸಿದ ಲಿಂಗೈಕ್ಯ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ವಿಶ್ವರತ್ನಕ್ಕೆ ಸಮಾನ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಣ್ಣಿಸಿದರು.
ಸಿದ್ಧಗಂಗಾ ಮಠದ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿಂದು ಏರ್ಪಡಿಸಿದ್ದ ಲಿಂಗೈಕ್ಯ ಡಾ|| ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಪುಣ್ಯಸ್ಮರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ನೆರವನ್ನು ಕೋರದ ಶ್ರೀಗಳು:
ನಾಡಿನ ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೀಗಳ ಸೇವೆ ಅನನ್ಯ. ಲಕ್ಷಾಂತರ ದೀನ-ದಲಿತರು, ಕಡು ಬಡ ಮಕ್ಕಳಿಗೆ ಶಿಕ್ಷಣ, ಅನ್ನ ಹಾಗೂ ವಸತಿ ದಾಸೋಹ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದ ಅವರು ಸಿದ್ದಗಂಗಾ ಕ್ಷೇತ್ರದ ಅಭಿವೃದ್ಧಿಗಾಗಿ ಎಂದೂ ಸರ್ಕಾರದ ನೆರವನ್ನು ಕೋರಿಲ್ಲ. ಪೂಜ್ಯರು ಯಾವುದೇ ರೀತಿಯ ಪ್ರಚಾರಕ್ಕೊಳಗಾಗದೆ 1930 ರಿಂದ ತಮ್ಮ ಅಂತಿಮ ದಿನಗಳವರೆಗೂ ಧಾರ್ಮಿಕ ಸೇವೆಯನ್ನು ಸಲ್ಲಿಸುವ ಮೂಲಕ ಭಕ್ತರ ಹೃದಯಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರ ಅಂತಿಮದರ್ಶನಕ್ಕಾಗಿ ಹರಿದುಬಂದ ಲಕ್ಷಾಂತರ ಭಕ್ತಸಮೂಹವೇ ಇದಕ್ಕೆ ಸಾಕ್ಷಿ ಎಂದು ನುಡಿದರು.
ಕರ್ನಾಟಕ ರತ್ನ ಘೋಷಣೆ ಅವಕಾಶ ನನ್ನ ಪುಣ್ಯ:
ಶ್ರೀಗಳಿಗೆ 2006-07ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡುವ ಅವಕಾಶ ದೊರೆತಿದ್ದುದು ನನ್ನ ಪುಣ್ಯವೆಂದು ಭಾವಿಸಿದ ಅವರು ಮಠದ ಸಾಮಾಜಿಕ ಸೇವೆಯನ್ನು ನೋಬೆಲ್ ಪಾರಿತೋಷಕ ಬಹುಮಾನಕ್ಕೆ ಪರಿಗಣಿಸಲು ಶಿಫಾರಸು ಮಾಡಲಾಗುವುದಲ್ಲದೆ ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀಗಳ ಹೆಸರನ್ನು ಜನಮಾನಸದಲ್ಲಿ ಅವಿಸ್ಮರಣೀಯವಾಗಿ ಅಚ್ಚಳಿಯದೇ ಉಳಿಯುವಂತೆ ಯೋಜನೆಯೊಂದನ್ನು ರೂಪಿಸಲಾಗುವುದೆಂದು ತಿಳಿಸಿದರು.
ಶ್ರೀಗಳ ಸ್ಮರಣೆಯಿಂದಲೇ ದಿನಾರಂಭ:
ಕಾಯಕ ದಾಸೋಹವನ್ನು ಪಾಲಿಸಿದ್ದ ಶ್ರೀಗಳ ಭಾವಚಿತ್ರವನ್ನು ಮುಖ್ಯಮಂತ್ರಿಗಳ ಕಚೇರಿಯಲ್ಲೂ ಅಳವಡಿಸಲಾಗಿದ್ದು, ಬಸವಣ್ಣ ಹಾಗೂ ಶ್ರೀಗಳ ಸ್ಮರಣೆಯಿಂದಲೇ ದಿನದ ಕಾಯಕವನ್ನು ಪ್ರಾರಂಭಿಸುತ್ತಿದ್ದೇನೆ ಎಂದರಲ್ಲದೆ ಶ್ರೀಗಳ ಹುಟ್ಟೂರು ವೀರಾಪುರವನ್ನು ಮಾದರಿ ಗ್ರಾಮವನ್ನಾಗಿ ನಿರ್ಮಾಣ ಮಾಡಿ ನಾಡಿಗೆ ಅರ್ಪಿಸಲಾಗುವುದೆಂದರು.
ನಂತರ ನಡೆದ ಶ್ರೀಗಳ ನುಡಿನಮನದಲ್ಲಿ ಉಪ ಮುಖ್ಯಮಂತ್ರಿ ಡಾ|| ಜಿ. ಪರಮೇಶ್ವರ ದೇಶದಲ್ಲಿ ಧರ್ಮ, ಜ್ಞಾನ ಸಂಸ್ಕøತಿಗೆ ಅಡಿಪಾಯ ಹಾಕಿದವರು ಶ್ರೀಗಳು. ಶ್ರೀಗಳ 111 ವರ್ಷಗಳ ಕಾಲ ಘಟ್ಟದಲ್ಲಿ ನಾವೆಲ್ಲರೂ ಬದುಕಿದ್ದೇವೆ ಎಂಬುದೇ ನಮ್ಮೆಲ್ಲರ ಪುಣ್ಯ. ಶ್ರೀಗಳು ಲಕ್ಷಾಂತರ ಮಕ್ಕಳಿಗೆ ಜ್ಞಾನದಾಸೋಹ ನೀಡುವ ಮೂಲಕ ವಿಶ್ವಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡು ಸಹಸ್ರಾರು ಕುಟುಂಬಗಳ ದೀಪವಾಗಿ ಬೆಳಗುತ್ತಿದ್ದಾರೆ ಎಂದರು.
ಶ್ರೀಗಳು ಶಾರೀರಿಕವಾಗಿ ನಮ್ಮನ್ನು ಅಗಲಿದ್ದಾರೆ ಹೊರತು ಅವರ ಆತ್ಮ, ಆದರ್ಶಗಳು ನಮ್ಮೊಂದಿಗೆ ಸದಾ ಜೀವಂತವಾಗಿರುತ್ತವೆ. ಅವರ ನಡೆ-ನುಡಿಗಳೇ ನಮಗೆ ಪುಸ್ತಕವಾಗಿವೆ. ಪ್ರತಿನಿತ್ಯ ಸುಮಾರು 10 ಸಾವಿರ ಮಕ್ಕಳಿಗೆ ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹವನ್ನು ನೀಡಿ ಶತಮಾನದ ಯುಗಪುರುಷ ಎನಿಸಿಕೊಂಡಿದ್ದಾರೆ ಎಂದು ಶ್ರೀಗಳನ್ನು ಕೊಂಡಾಡಿದರು.
ಗೃಹಸಚಿವ ಎಂ.ಬಿ ಪಾಟೀಲ್ ಮಾತನಾಡಿ ನಾನು ಕಂಡಂತೆ ಮಕ್ಕಳಿಗೆ ಹೆತ್ತ ತಂದೆ-ತಾಯಿಗಳಂತೆ ಪ್ರೀತಿ-ವಾತ್ಸಲ್ಯದಿಂದ ತ್ರಿವಿಧ ದಾಸೋಹವನ್ನು ನೀಡಲು ಸಾಧ್ಯವಾಗಿದ್ದು ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ಮಾತ್ರ. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿದರೆ ಆ ಪ್ರಶಸ್ತಿಯ ಗೌರವ ಇನ್ನೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ ಸಾಮಾಜಿಕ ವ್ಯವಸ್ಥೆಯ ಬದಲಾವಣೆ ಬಯಸಿದ್ದ ಶ್ರೀಗಳು ಸಮಾನತೆ ಸಮಾಜದ ಕನಸನ್ನು ಕಂಡಿದ್ದರು. ಇಡೀ ಸಮಾಜವನ್ನು ಪ್ರೀತಿಸುತ್ತಿದ್ದರಲ್ಲದೆ ಸಮಾಜವಾದಿಗಳನ್ನೂ ಸಹ ಆಕರ್ಷಿಸುವ ದಿವ್ಯ ಶಕ್ತಿಯಾಗಿದ್ದರು. ದೇಶ ಮಾತ್ರವಲ್ಲದೆ ವಿದೇಶದ ಗಣ್ಯಾತಿಗಣ್ಯರು ಭೇಟಿ ನೀಡುತ್ತಿದ್ದ ಹೆಗ್ಗಳಿಗೆ ಮಠಕ್ಕಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ನುಡಿಗವನ ವಾಚಿಸುವುದರ ಮೂಲಕ ತಮ್ಮ ನುಡಿನಮನ ಸಲ್ಲಿಸಿದ ಅವರು ಶ್ರೀಗಳು ದೇಶದಲ್ಲಿದ್ದ ಅನಕ್ಷರತೆಯ ಶಾಪವನ್ನು ಹೋಗಲಾಡಿಸಿದ ಸಾಧಕರು. ಮಠವನ್ನು ಧರ್ಮ ಹಾಗೂ ಸಾಮಾಜಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಂಡಿದ್ದ ಏಕೈಕ ಸಂತರಾಗಿದ್ದರು ಎಂದು ತಿಳಿಸಿದರು.
ಡಾ|| ಗೊ.ರು. ಚನ್ನಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಗಳಿಗೆ ಚಿಕಿತ್ಸೆ ನೀಡಿದ ಡಾ|| ವೆಂಕಟರಮಣ ಹಾಗೂ ಬಿ.ಎಸ್. ರವೀಂದ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಿದ್ಧಗಂಗಾಮಠದ ಶ್ರೀ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳ ದಿವ್ಯನೇತೃತ್ವದಲ್ಲಿ ಜರುಗಿದ ಪುಣ್ಯಸ್ಮರಣೆ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮಿಗಳು ವಹಿಸಿದ್ದರು. ಸಿರಿಗೆರೆ ತರಳಬಾಳು ಸಂಸ್ಥಾನಮಠದ ಪರಮಪೂಜ್ಯ ಡಾ|| ಶ್ರೀ ಶ್ರೀ ಶಿವಮೂರ್ತಿ ಶಿವಾಚಾರ್ಯಮಹಾಸ್ವಾಮಿಗಳು, ಶ್ರೀಶೈಲಂ ಸೂರ್ಯಸಿಂಹಾಸನ ಮಹಾಪೀಠದ ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರುಡಾ|| ಚನ್ನಸಿದ್ಧರಾಮಶಿವಾಚಾರ್ಯಮಹಾಸ್ವಾಮಿಗಳು, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು, ಬೆಂಗಳೂರು ಆರ್ಟ್ ಆಫ್ ಲಿವಿಂಗ್‍ನ ಪೂಜ್ಯ ಶ್ರೀ ರವಿಶಂಕರ್ ಗುರೂಜಿ, ಕನಕಪುರ ದೇಗುಲಮಠದ ಪೂಜ್ಯ ಶ್ರೀ ಮುಮ್ಮಡಿ ನಿರ್ವಾಣಮಹಾಸ್ವಾಮಿಗಳು ಹಾಗೂ ಬೇಲಿಮಠದ ಶಿವಾನುಭವಚರಮೂರ್ತಿ ಪೂಜ್ಯ ಶ್ರೀ ಶಿವರುದ್ರಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಿದ್ದರು.
ಮಾಜಿ ಸಚಿವರಾದ ಬಸವರಾಜ್ ಹೊರಟ್ಟಿ, ಶಾಮನೂರು ಶಿವಶಂಕರಪ್ಪ, ಕಾರ್ಮಿಕ ಸಚಿವ ವೆಂಕಟರಮಣಪ್ಪ, ಸಣ್ಣ ಕೈಗಾರಿಕಾ ಸಚಿವ ಎಸ್.ಆರ್. ಶ್ರೀನಿವಾಸ್, ಸಚಿವರಾದ ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಜೆ.ಸಿ. ಮಾಧುಸ್ವಾಮಿ, ಎಂ.ವಿ. ವೀರಭದ್ರಯ್ಯ, ಗೌರಿಶಂಕರ್, ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಬೆಮೆಲ್ ಕಾಂತರಾಜ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾರವಿಕುಮಾರ್, ಬೆಂಗಳೂರು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ತುಮಕೂರು ಪಾಲಿಕೆ ಮೇಯರ್ ಲಲಿತಾ ರವೀಶ್, ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್, ಎಸ್.ಪಿ. ವಂಶಿ ಕೋನ್ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಗಳ ಪುಣ್ಯಸ್ಮರಣೆಯಲ್ಲಿ ಲಕ್ಷಾಂತರ ಮಂದಿ ಭಕ್ತಾದಿಗಳು ಗದ್ದುಗೆ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಭಕ್ತಾದಿಗಳಿಗಾಗಿ ಮಠದ ಆವರಣದಲ್ಲಿ ಐದಾರು ಕಡೆ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.