ತುಮಕೂರು:
ಯಾರು ಅಹಂಕಾರವನ್ನು ನಿರಾಕರಿಸುತ್ತಾನೋ ಅವನೇ ನಿಜವಾದ ಶರಣ ಎಂದು ಶಾಸಕ ಜಿ.ಬಿ ಜ್ಯೋತಿಗಣೇಶ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಜಿಲ್ಲಾ ಮತ್ತು ತಾಲೂಕು ಮಡಿವಾಳ ಜನಸಂಘಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಮಾಚಿದೇವರು 12ನೇ ಶತಮಾನದಲ್ಲಿ ನಡೆದ ವಚನ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿದ್ದವರು. ಸಮಾಜವನ್ನು ಸರಿದಾರಿಗೆ ತಂದ ಮಹಾ ದಾರ್ಶನಿಕರು. ಶಿಕ್ಷಣ ಪಡೆದವರು ಮಾತ್ರ ಸಬಲರಾಗಲು ಸಾಧ್ಯ. ಈ ನಿಟ್ಟಿನಲ್ಲಿ ಮಡಿವಾಳ ಜನಾಂಗದವರು ವಿದ್ಯಾವಂತರಾಗಿ ಉನ್ನತ ಮಟ್ಟದಲ್ಲಿ ಸಾಧನೆ ಮಾಡುವಂತೆ ತಿಳಿಸಿದರು. ಸಮುದಾಯದ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯ ದೊರೆಯು ವಂತೆ ಮಾಡಲು ಪ್ರಯತ್ನಿಸುತ್ತನೆ ಎಂದರು.
ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದ ಹಿರೇಮಠದ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಅವರು ಮಡಿವಾಳ ಮಾಚಿದೇವ ಮಹಾನಾಯಕ. 12ನೇ ಶತಮಾನದಲ್ಲಿ ಸುದ್ದಿ-ಸದ್ದು ಮಾಡಿದ ಏಕೈಕ ಶರಣ. ಅವರ ವಚನಗಳು ಇಂದಿಗೂ ಸಹ ಬಡಿದೆಬ್ಬಿಸುವ ರೀತಿಯಲ್ಲಿ ಸಾತ್ವಿಕತೆಯನ್ನು ಹೊಂದಿದೆ. ನಾಲಿಗೆಯನ್ನೇ ಕತ್ತಿಯನ್ನಾಗಿಸುವ ಶಕ್ತಿಯನ್ನು ಮಾಚಿದೇವ ಹೊಂದಿದ್ದು, ಜನರ ಮನಸ್ಸಿನ ಕೊಳಕನ್ನು ತೊಳೆಯುವ ಧ್ಯೇಯವನ್ನು ಹೊಂದಿದ್ದನು. ಸಾಧಿಸುವ ಛಲವಿದ್ದರೆ ಸಾಕು ಸಮಾಜದಲ್ಲಿ ಏನಾದರೂ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಮಾಚಿದೇವನ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕತೆಯನ್ನು ಕಂಡುಕೊಳ್ಳಬೇಕು. ಯಾವುದೇ ಕೆಲಸವನ್ನು ಪ್ರಾಮಾಣಿಕತೆಯಿಂದ ಪರಿಶುದ್ಧ ಮನಸ್ಸಿನಿಂದ ಮಾಡಿದರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರಲ್ಲದೆ ಸರ್ಕಾರದಿಂದ ಮಡಿವಾಳ ಜನಾಂಗಕ್ಕೆ ಸೌಲಭ್ಯ ದೊರೆಯುವಂತೆ ಮನವಿ ಮಾಡುವುದರ ಜೊತೆಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ತುಮಕೂರಿನ ಸಾಹಿತಿ ಮತ್ತು ವಿಮರ್ಶಕ ಡಾ|| ರವಿಕುಮಾರ್ ನೀ.ಹ ಅವರು ಉಪನ್ಯಾಸ ನೀಡುತ್ತಾ ಮಾಚಿದೇವರ 354 ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪ್ರಚಾರ ಕ್ಷೇತ್ರ್ರಗಳಲ್ಲಿ ಸಾಧನೆ ಮಾಡಿದ ಬಿ.ವೆಂಕಟರಾಮಯ್ಯ, ವೈದ್ಯಕೀಯ ಸೇವೆಗಾಗಿ ವಿನುತ, ಸಮಾಜದ ಹಿರಿಯ ಕುಲ ಕಸುಬದಾರರಾದ ಬಾಲಮ್ಮ ಹಾಗೂ ವೆಂಕಟರಾಂ, ಉತ್ತಮ ಸಮಾಜ ಸೇವೆಗಾಗಿ ಲಕ್ಷೀನರಸಿಂಹಯ್ಯ ಹಾಗೂ ಚಿಕ್ಕಣ್ಣ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಆಪಿನಕಟ್ಟೆ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ವಿಷ್ಣುವರ್ಧನ್, ಉಪಾಧ್ಯಕ್ಷ ಬಿ.ಚಿಕ್ಕಣ್ಣ, ಪಾಲಿಕೆಯ ನಾಗೇಶ್ ಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.