ತುಮಕೂರು:
ಜಿಲ್ಲಾ ಪಂಚಾಯತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಶುಭಾ ಕಲ್ಯಾಣ್ ಅವರು ಅಧಿಕಾರ ಸ್ವೀಕರಿಸಿದರು.
ಶುಭಾ ಕಲ್ಯಾಣ್ ಅವರು ಈ ಹಿಂದೆ 2014ರ ಐಎಎಸ್ ಅಧಿಕಾರಿಗಳ ತಂಡದಲ್ಲಿ ನೇಮಕಾತಿ ಹೊಂದಿ, ಮಂಡ್ಯ ಜಿಲ್ಲೆಯ ಪ್ರೊಬೆಷನರಿ ಅಧಿಕಾರಿಯಾಗಿ ನಂತರ ಕೋಲಾರ ಜಿಲ್ಲೆಯಲ್ಲಿ ಹಿರಿಯ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಜಿಲ್ಲಾ ಪಂಚಾಯತಿ ಸಿಇಓ ಕೊಠಡಿಯಲ್ಲಿಂದು ಪೂರ್ವಾಹ್ನ ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಎಲ್ಲಾ ತಾಲ್ಲೂಕುಗಳ ಬರ ನಿರ್ವಹಣೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ವೈಯಕ್ತಿಕವಾಗಿ ನನಗೆ ಹೆಚ್ಚಿನ ಆಸಕ್ತಿ ಇದ್ದು, ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಜಿಲ್ಲೆಯನ್ನು ಮೊದಲನೇ ಸ್ಥಾನಕ್ಕೆ ತರುವ ಗುರಿ ಇಟ್ಟುಕೊಂಡಿದ್ದೇನೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಾಗುವುದು ಎಂದರಲ್ಲದೆ, ಅರಣ್ಯ, ತೋಟಗಾರಿಕೆ, ಕೃಷಿ ಇಲಾಖೆಗಳ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಶೌಚಾಲಯ, ಮತ್ತಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶ್ರಮಿಸುತ್ತೇನೆ. ಜನಪ್ರತಿನಿಧಿಗಳೊಂದಿಗೆ ಕೈಜೋಡಿಸಿ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ (ಅಭಿವೃದ್ಧಿ) ಬಿ.ಕೃಷ್ಣಪ್ಪ, ಉಪಕಾರ್ಯದರ್ಶಿ (ಆಡಳಿತ) ಡಾ: ಪ್ರೇಮ್‍ಕುಮಾರ್ ಹಾಗೂ ಯೋಜನಾ ನಿರ್ದೇಶಕ ಮಹಾಂಕಾಳಪ್ಪ ಉಪಸ್ಥಿತರಿದ್ದರು.