ತುಮಕೂರು :
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಮುಂಬರುವ 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಮಾಹಿತಿ ತಿಳಿದುಕೊಳ್ಳಲು 1950 ಮತದಾರರ ಸಹಾಯವಾಣಿ ಕಾರ್ಯಾರಂಭಕ್ಕೆ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳ ಕಛೇರಿ ಸ್ಪಂದನ ಕೇಂದ್ರದಲ್ಲಿಂದು ಚಾಲನೆ ನೀಡಿದರು.
ಈ ಸ್ಪಂದನ ಕೇಂದ್ರದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಪಟ್ಟಿಯಿಂದ ತೆಗೆದು ಹಾಕುವುದು, ವರ್ಗಾವಣೆ ಮಾಹಿತಿಗಳು, ಮತಗಟ್ಟೆ ಮಾಹಿತಿ, ಇವಿಎಂ, ವಿವಿ ಪ್ಯಾಟ್‍ಗಳ ಕಾರ್ಯಾಚರಣೆ ಕುರಿತು ಟೋಲ್ ಫ್ರೀ ಸಂಖ್ಯೆ 1950ಗೆ ಮೊಬೈಲ್ ಅಥವಾ ಸ್ಥಿರ ದೂರವಾಣಿಯಿಂದ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದಾಗಿದೆ.
ಚುನಾವಣಾ ಸಂದರ್ಭದಲ್ಲಿ ಈ ಸಹಾಯವಾಣಿಗೆ ಕರೆ ಮಾಡುವ ಮೂಲಕ ಜಿಲ್ಲೆಗೆ ಸಂಬಂಧಿಸಿದ ದೂರುಗಳನ್ನು ಸಹ ದಾಖಲಿಸಬಹುದಾಗಿದ್ದು, ದೂರುದಾರರಿಗೆ ದೂರು ನೋಂದಣಿ ಸಂಖ್ಯೆಯನ್ನು ಒದಗಿಸಲಾಗುವುದು. ಜಿಲ್ಲೆಯ ಹೊರಗಿನಿಂದ ಕರೆ ಮಾಡಿ ಮಾಹಿತಿ ಪಡೆಯಬೇಕಾದಲ್ಲಿ ಎಸ್‍ಟಿಡಿ ಕೋಡ್ ಸಂಖ್ಯೆ 0816 ಬಳಸಿ, ಟೋಲ್ ಫ್ರೀ ಸಂಖ್ಯೆ 1950ಗೆ ಕರೆ ಮಾಡಬಹುದಾಗಿದೆ. ಈ ಸಹಾಯವಾಣಿಯು ಪ್ರಸ್ತುತ ಕಛೇರಿ ಅವಧಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಚುನಾವಣೆ ಘೋಷಣೆಯಾದ ನಂತರ ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಜಿಲ್ಲಾ ಸಂಪರ್ಕಾಧಿಕಾರಿ ಗಾಯಿತ್ರಿ, ಮತ್ತಿತರ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.