ಶಿರಾ :
ತಾಲ್ಲೂಕಿನ ಅಮಲಗೊಂದಿ ಗ್ರಾಮದ ಮಂಜು ಪ್ರಸಾದ್ ರವರ ತೋಟದ 20 ಅಡಿ ಆಳದ ಪಾಳು ಬಾವಿಯಲ್ಲಿ ಬಿದ್ದಿದ್ದ ಪುನುಗ ಬೆಕ್ಕನ್ನು (ಸ್ಮಾಲ್‍ಇಂಡಿಯನ್ ಸಿವಿಟ್ ಕ್ಯಾಟ್) ರಕ್ಷಣೆ ಮಾಡಲಾಗಿದೆ.
ಬಾವಿಯಲ್ಲಿ ಬಿದ್ದಿದ್ದ ಸುಮಾರು 2-3 ವರ್ಷದ ಪುನುಗ ಬೆಕ್ಕನ್ನು ಗಮನಿಸಿದ ರೈತ ಮಂಜು ಪ್ರಸಾದ್ ಮೊದಲಿಗೆ ಬಾವಿಯೊಳಗೆ ಏಣಿ ನಿಲ್ಲಿಸಿ ಬೆಕ್ಕು ತಾನಾಗಿಯೆ ಮೇಲೆ ಬರಲು ಪ್ರಯತ್ನಿಸಿದರು. ಗಾಬರಿಗೆ ಒಳಗಾಗಿದ್ದ ಪುನುಗ ಬೆಕ್ಕು ಮೇಲೆ ಬರಲಿಲ್ಲವಾದ್ದರಿಂದ ತುಮಕೂರಿನ ವನ್ಯಜೀವಿ ಜಾಗೃತಿ ಹಾಗೂ ಉರಗ ಸಂರಕ್ಷಣಾ ಸಂಸ್ಥೆಯವರಿಗೆ (ವಾರ್ಕೊ) ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ವಾರ್ಕೊ ಸಂಸ್ಥೆಯ ಕಾರ್ತಿಕ್ ಸಿಂಗ್, ಮನು ಮತ್ತು ಅವರ ತಂಡ ಮೊದಲಿಗೆ ಸ್ಥಳದಲಿದ್ದ ಜನರ ಗುಂಪನ್ನು ಶಾಂತಪಡಿಸಿ, ತಂಡದವರು ಬಾವಿಯೊಳಗೆ ಇಳಿದು ಸುರಕ್ಷಿತವಾಗಿ ಪ್ರಾಣಿಯನ್ನು ಬೋನಿನಿಂದ ಹಿಡಿದು ಮೇಲೆ ತಂದಿದ್ದಾರೆ
ಸ್ಥಳದಲ್ಲಿದ್ದ ಶಿರಾ ತಾಲ್ಲೂಕಿನ ವಲಯಅರಣ್ಯಾಧಿಕಾರಿರಾಧಾ ಮತ್ತು ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ನಾಗೇಂದ್ರರಾವ್ ರವರ ಮಾರ್ಗದರ್ಶನದಂತೆ ಪ್ರಾಣಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲವೆಂದು ಖಚಿತಪಡಿಸಿಕೊಂಡು ನಂತರ ಸುರಕ್ಷಿತವಾಗಿ ಹತ್ತಿರದ ಅರಣ್ಯಪ್ರದೇಶಕ್ಕೆ ಬಿಡಲಾಗಿದೆ.
ಈ ಸಂದರ್ಭದಲ್ಲಿ ಜನರಿಗೆ ಅರಿವು ಮೂಡಿಸಿದ ವಾರ್ಕೊ ಸಂಸ್ಥೆಯವರು ಪುನುಗ ಬೆಕ್ಕು ನಿಶಾಚರಿ ಪ್ರಾಣಿಯಾಗಿದ್ದು ಹಗಲಿನಲ್ಲಿ ಮಣ್ಣಿನ ಬಿಲ ಅಥವಾ ಕಲ್ಲು ಬಂಡೆಗಳ ಕೆಳಗೆ ನಿದ್ರಿಸುತ್ತವೆ. ಇವು ಮಾಂಸಹಾರಿ ಗಳಾಗಿದ್ದು, ಇಲಿ, ಸಣ್ಣ ಪಕ್ಷಿ, ಹಾವು, ಕಪ್ಪೆ ಹಾಗೂ ಕೆಲವೊಮ್ಮೆ ಹಣ್ಣು ಮತ್ತು ಗಿಡಗಳ ಬೇರುಗಳು ಇದರ ಪ್ರಮುಖ ಆಹಾರವಾಗಿರುತ್ತವೆ.
ಅಪಾಯದ ಅಂಚಿನಲ್ಲಿರುವ ಈ ಪ್ರಾಣಿಯ ಜೀವಿತಾವಧಿ 8-9 ವರ್ಷಗಳು ಮಾತ್ರ. ಸಾಮಾನ್ಯವಾಗಿ ಜನನಿಬಿಡ ಪ್ರದೇಶದಲ್ಲಿ ಕಾಣಸಿಗದ ಪುನುಗ ಬೆಕ್ಕು ಬೇಸಿಗೆ ಕಾಲವಾದ್ದರಿಂದ ಆಹಾರ ಮತ್ತು ನೀರನ್ನು ಅರಸಿ ಬಂದು ಆಯಾತಪ್ಪಿ ಬಿದ್ದಿರುತ್ತದೆ ಎಂದು ಜನರಲ್ಲಿಜಾಗೃತಿ ಮೂಡಿಸಿದರು.
ಸ್ಥಳದಲ್ಲಿ ವಾರ್ಕೊತಂಡದ ಸದಸ್ಯರಾದ ನಿಶ್ಚಲ್, ಚೇತನ್, ಸಚ್ಚಿನ್, ಧನುಶ್ ಕೆ., ಮಂತನ್, ಧನುಶ್‍ಗೌಡ ಹಾಗೂ ವನ್ಯಜೀವಿ ಛಾಯಾಗ್ರಹಕ ಚಂದನ್‍ಶಿವಣ್ಣ ಸಹಕರಿಸಿದರು.