ತುಮಕೂರು:
ಒಂದು ಜಾತಿಯಿಂದ ಗೆಲುವು ಸಾಧಿಸಿದ್ದೇನೆ ಎಂದು ಹೇಳಿಕೆ ನೀಡಿರುವ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರನ್ನು ಸೋಲಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಕರೆ ನೀಡಿದೆ.
ಛಲವಾದಿ ಸಮುದಾಯದಿಂದ ನಾನು ಗೆಲುವು ಸಾಧಿಸಿದ್ದೇನೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ಸಮುದಾಯದ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದು, ಕಳೆದ ಚುನಾವಣೆ ಸಂದರ್ಭದಲ್ಲಿ ಹಿಂದುಳಿದ, ಅಲ್ಪಸಂಖ್ಯಾತ, ತಳಸಮುದಾಯಗಳು ಹಾಗೂ ಮಾದಿಗ ಸಮುದಾಯ ಬೆಂಬಲ ನೀಡಿದ್ದು, ಮಾದಿಗ ಸಮುದಾಯವನ್ನು ಕಡೆಗಣಿಸಿರುವ ಸಂಸದರನ್ನು ಸೋಲಿಸುವಂತೆ ಮಾದಿಗ ಸಂಘಟನೆಗಳು ನಿರ್ಣಯ ಕೈಗೊಂಡಿವೆ. ರಾಜಕೀಯ ಅಸ್ತಿತ್ವವೇ ಇಲ್ಲದ ಮುದ್ದಹನುಮೇಗೌಡರಿಗೆ ಮತ ನೀಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಜನಪರ ಯೋಜನೆಗಳು ಕಾರಣವಷ್ಟೇ, ಅದನ್ನು ಬಿಟ್ಟು ಬೇರೆ ಯಾವ ಕಾರಣಕ್ಕೂ ಎಸ್.ಪಿ.ಮುದ್ದಹನುಮೇಗೌಡರಿಗೆ ಮತ ನೀಡಿಲ್ಲ.
2013ರಲ್ಲಿ 3 ಅಹಿಂದ ವರ್ಗಕ್ಕೆ ಸೇರಿದ ಶಾಸಕರು ತುಮಕೂರು ಜಿಲ್ಲೆಯಲ್ಲಿದ್ದರು, ತುಮಕೂರು ನಗರ, ಚಿಕ್ಕನಾಯಕನಹಳ್ಳಿ, ಮಧುಗಿರಿಯಲ್ಲಿ ಅಹಿಂದ ನಾಯಕರ ಸೋಲಿಗೆ ಸಂಸದ ಮುದ್ದಹನುಮೇಗೌಡ ನೇರ ಕಾರಣವಾಗಿದ್ದು, ಇಂತಹ ಜಾತಿವಾದಿ ಸಂಸದರನ್ನು ಸೋಲಿಸಬೇಕಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಪತ್ರಿಕಾ ಹೇಳಿಕೆ ಮೂಲಕ ಕರೆ ನೀಡಿದೆ.
ದಲಿತ ಮುಖಂಡರ ಸಭೆಯಲ್ಲಿ ಕಿರಣ್, ಕೇಬಲ್ ರಘುಕುಮಾರ್, ಕುಮಾರ್‍ಮಾದರ್, ವೆಂಕಟೇಶ್, ಸೋರೆಕುಂಟೆ ಯೋಗೀಶ್, ರಾಮಾಂಜಿ, ರಂಜನ್, ರಾಮಯ್ಯ, ಸಿದ್ದೇಶ್, ಅಬ್ಬತ್ತನಹಳ್ಳಿ ಶ್ರೀನಿವಾಸ್, ನರಸಿಂಹಮೂರ್ತಿ, ಶ್ರೀನಿವಾಸ್ ಕಲ್ಕೆರೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.