ತುಮಕೂರು :

      ನಗರದ ಉಪ್ಪಾರಹಳ್ಳಿ ಕೆಳಸೇತುವೆ ಬಳಿ ಸೋಮವಾರ ತಡರಾತ್ರಿ 11.30ರ ಸಮಯದಲ್ಲಿ ಇನ್ನೋವಾ ಕ್ರಿಸ್ತಾ ಕಾರನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದ 6 ಜನ ಯುವಕರನ್ನು ಮದ್ಯಪಾನ ತಪಾಸಣೆ ಮಾಡುವ ಸಂದರ್ಭದಲ್ಲಿ ಜಯನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ನವೀನ್ ಕುಮಾರ್ ಆಯತಪ್ಪಿ ಬಿದ್ದು ಮುಖ, ಮೂಗು, ಕೈ, ಮೊಣಕಾಲುಗಳಿಗೆ ತೀವ್ರತರ ಪೆಟ್ಟಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ.ವಂಶಿಕೃಷ್ಣ ತಿಳಿಸಿದರು.

      ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸೋಮವಾರ ತಡರಾತ್ರಿ ಪಿಎಸ್‍ಐ ನವೀನ್ ಕುಮಾರ್ ಅವರು ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಅನುಮಾನಾಸ್ಪದವಾಗಿ ಬಂದ ಕಾರನ್ನು ತಡೆಯಲು ಹೋದಾಗ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಪಾನಮತ್ತ ಸ್ಥಿತಿಯಲ್ಲಿದ್ದ ಸುಮಾರು 25 ರಿಂದ 35 ವರ್ಷದೊಳಗಿನ 6 ಯುವಕರು ಹಾಗೂ ಅಪರಾಧ ಕೃತ್ಯಗಳಿಗೆ ಬಳಸುವ ಉಪಕರಣಗಳು ಇರುವುದು ಕಂಡುಬಂದಿದೆ. ತಪಾಸಣೆಗಾಗಿ ಕಾರಿನ ಸ್ಟೇರಿಂಗ್ ಹಿಡಿದು ನಿಲ್ಲಿಸಲು ಪಿಎಸ್‍ಐ ಪ್ರಯತ್ನ ಮಾಡಿದ ಸಂದರ್ಭದಲ್ಲಿ ಯುವಕರು ಅತೀ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋದಾಗ ನವೀನ್‍ಕುಮಾರ್ ಆಯತಪ್ಪಿ ಬಿದ್ದಿರುವುದರಿಂದ ತೀವ್ರತರ ಗಾಯಗಳಾಗಿವೆ ಎಂದು ತಿಳಿಸಿದರು.

      ಘಟನೆ ವೇಳೆಯಲ್ಲಿ 6 ಯುವಕರ ಪೈಕಿ 25 ವರ್ಷದ ವಿತೇಶ್ ಎಂಬ ಆರೋಪಿ ಸಿಕ್ಕಿಬಿದ್ದಿದ್ದು, ಉಳಿದ ಐವರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧಕಾರ್ಯ ನಡೆಸಲಾಗುತ್ತಿದೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು. ಗಾಯಗೊಂಡ ಪಿಎಸ್‍ಐ ನವೀನ್‍ಕುಮಾರ್ ಅವರ ಕರ್ತವ್ಯವನ್ನು ಪ್ರಶಂಸಿಸಿದರಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು.

      ಆರೋಪಿಗಳು ಯಾವುದೋ ಅಪರಾಧ ಕೃತ್ಯ ಮಾಡಲು ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮೈಸೂರಿನಲ್ಲಿಯೂ ಇದೇ ರೀತಿಯ ಘಟನೆ ನಡೆದಿದ್ದು, 2 ಘಟನೆಗಳಿಗೂ ಸಂಬಂಧವಿದೆಯೇ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ತಿಳಿಸಿದರು.

      ಜಿಲ್ಲೆಯಲ್ಲಿ ರೌಡಿಗಳನ್ನು ಮಟ್ಟಹಾಕಲು ಹಾಗೂ ವಿವಿಧ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಗಣ್ಯವ್ಯಕ್ತಿಯಾಗಲೀ, ಸಾಮಾನ್ಯ ಜನರಾಗಲಿ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೆ ಎಂದು ತಿಳಿಸಿದ ಅವರು ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಚಾಲನೆ ಮಾಡಬೇಕು. ಸಾರ್ವಜನಿಕರು ನಿಗಧಿತ ಆಟೋ/ಬಸ್ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಬೇಕು. ನಗರದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವುದಕ್ಕೆ ಖುದ್ದು ಗಸ್ತು ಕಾರ್ಯನಿರ್ವಹಿಸುವಂತೆ ಎಲ್ಲ ಪಿಎಸ್‍ಐಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

(Visited 8 times, 1 visits today)