ತುಮಕೂರು:
ಪಾವಗಡ ತಾಲೂಕು ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಮೇಗಲಹಳ್ಳಿ ಗ್ರಾಮದ ಮನೆಗಳ ಬಾಗಿಲಿಗೆ ಕ್ಯಾನ್‍ಗಳ ಮೂಲಕ ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ತಿಳಿಸಿದ್ದಾರೆ.
ಮಂಗಳವಾರ ಪಾವಗಡ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅಚ್ಚಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಪಿ.ಡಿ.ಓ.ಗೆ ಮೇಗಲಹಳ್ಳಿಯಲ್ಲಿರುವ ಎಲ್ಲ ಮನೆಗಳ ಬಾಗಿಲಿಗೆ ಕುಡಿಯುವ ನೀರನ್ನು ಕ್ಯಾನ್ ಮೂಲಕ ಸರಬರಾಜು ಮಾಡಲು ನಿರ್ದೇಶನ ನೀಡಲಾಗಿತ್ತು. ಮೇಗಲಹಳ್ಳಿಯಲ್ಲಿದ್ದ ಆರ್.ಓ. ಪ್ಲಾಂಟ್ ಕೆಟ್ಟು ಹೋಗಿದ್ದರಿಂದ ಗ್ರಾಮಸ್ಥರು 1 ಕಿ.ಮೀ. ದೂರದಿಂದ ಕುಡಿಯುವ ನೀರು ತರುತ್ತಿರುವ ಬಗ್ಗೆ ಕಳೆದ ಫೆಬ್ರುವರಿ 2ರಂದು ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಬರ ಪರಿಶೀಲನಾ ಸಭೆಯಲ್ಲಿ ಚರ್ಚೆಯಾಗಿತ್ತು. ಕೂಡಲೇ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದ್ದರ ಪರಿಣಾಮ ಮೇಗಳಹಳ್ಳಿ ಗ್ರಾಮದ ಮನೆಗಳ ಬಾಗಿಲಿಗೆ 20 ಹೊಸ ಕ್ಯಾನ್ ಖರೀದಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಮೂಲಕ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕೆಟ್ಟು ಹೋಗಿರುವ ಆರ್.ಓ. ಪ್ಲಾಂಟ್ ಅನ್ನು 3 ದಿನಗಳೊಳಗಾಗಿ ದುರಸ್ಥಿಪಡಿಸಲಾಗುವುದು. ಆರ್.ಓ. ಪ್ಲಾಂಟ್ ದುರಸ್ಥಿಯಾಗುವವರೆಗೂ ಗ್ರಾಮಸ್ಥರ ಮನೆ ಬಾಗಿಲಿಗೆ ಕ್ಯಾನ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.