ತುಮಕೂರು:
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅವರು ತಮ್ಮ ಕಛೇರಿಯಲ್ಲಿಂದು ವಿವಿಧ ರಾಜಕೀಯ ಪಕ್ಷಗಳ ಸಭೆ ನಡೆಸಿದರು.
ಸಭೆಯಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರಾಜಕೀಯ ಪಕ್ಷಗಳು ನಿರ್ವಹಿಸಬೇಕಾದ ಖರ್ಚು-ವೆಚ್ಚಗಳ ಅಂತಿಮ ದರವನ್ನು ನಿಗಧಿಗೊಳಿಸುವ ಬಗ್ಗೆ ಚರ್ಚಿಸಲಾಯಿತು. ನಂತರ ಜಿಲ್ಲಾಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆ, ಮಾದರಿ ನೀತಿ ಸಂಹಿತೆ, ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ದೂರು ಸಲ್ಲಿಕೆಗಳ ಬಗ್ಗೆ ಹಾಜರಿದ್ದ ಕಾಂಗ್ರೆಸ್ ಪಕ್ಷದ ನರಸಿಂಹಮೂರ್ತಿ, ಸಿಪಿಐಎಂ ಪಕ್ಷದ ಬಿ.ಉಮೇಶ್, ಸಿ.ಪಿ.ಐ ಪಕ್ಷದ ಗಿರೀಶ್ ಅವರಿಂದ ಸಲಹೆ, ಸೂಚನೆ, ಅಭಿಪ್ರಾಯಗಳನ್ನು ಪಡೆದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು, ದಿನಾಂಕ:01-01-2019ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಈಗಾಗಲೇ ಪರಿಷ್ಕøತ ಮತದಾರರ ಪಟ್ಟಿಯನ್ನು ತಯಾರಿಸಿ ಪ್ರಕಟಿಸಲಾಗಿದೆ. ಮತಪಟ್ಟಿಗೆ ಹೆಸರನ್ನು ಸೇರಿಸುವ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಆದರೆ ಮತಪಟ್ಟಿಗೆ ಹೊಸದಾಗಿ ಹೆಸರನ್ನು ಸೇರಿಸಲು ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಅಂತಿಮ ದಿನಾಂಕದ 10 ದಿನಗಳ ಮುನ್ನ ಸ್ವೀಕರಿಸಲಾದ ಅರ್ಜಿಗಳನ್ನು ಮಾತ್ರ ಪರಿಗಣಿಸಿ ಪೂರಕ ಮತಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಮಾಹಿತಿ ನೀಡಿದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ 24ಸಾವಿರ ವಿಕಲಚೇತನರನ್ನು ಗುರುತಿಸಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿತ್ತು. ಅಲ್ಲದೆ ಮತದಾನ ಮಾಡಲು ರ್ಯಾಂಪ್ ವ್ಯವಸ್ಥೆ, ವ್ಹೀಲ್ ಚೇರ್ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಈ ಬಾರಿಯೂ ಚುನಾವಣೆಯಲ್ಲಿ ವಿಕಲಚೇತನರ ಮತದಾನಕ್ಕೆ ವಿಶೇಷ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆಯಡಿ ಚುನಾವಣೆ ದಿನದ 48 ಗಂಟೆಗಳ ಮುನ್ನ ರಾಜಕೀಯ ಪಕ್ಷಗಳು ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಏರ್ಪಡಿಸುವ ಕಾರ್ಯಕ್ರಮಗಳಿಗಾಗಿ ಬಳಸಲಾಗುವ ಕರಪತ್ರ, ಪೋಸ್ಟರ್, ಹೋರ್ಡಿಂಗ್ಸ್, ಧ್ವನಿವರ್ಧಕಗಳು, ವಿಡಿಯೋ ಚಿತ್ರೀಕರಣ, ಛಾಯಾಚಿತ್ರ, ಟೋಪಿ, ಶಾಲು, ಬ್ಯಾಡ್ಜ್, ನೆಲಹಾಸು, ಬ್ಯಾರೆಕೇಡ್, ಹಣ್ಣುಗಳ ಬುಟ್ಟಿ, ಲೈಟಿಂಗ್, ಬಾಡಿಗೆ ವಾಹನ, ಮತ್ತಿತರೆ ಪ್ರಚಾರ ಸಾಮಗ್ರಿಗಳಿಗೆ ಮಾಡಲಾಗುವ ಖರ್ಚು-ವೆಚ್ಚಗಳ ಮಾಹಿತಿಯನ್ನು ವಹಿಯಲ್ಲಿ ದಾಖಲಿಸಿ ಪ್ರತಿದಿನ ಚುನಾವಣಾ ಶಾಖೆಗೆ ವರದಿ ಸಲ್ಲಿಸಬೇಕು. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಮುಂಚೆ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಬೇಕು ಎಂದು ತಿಳಿಸಿದರು.
ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸುವ ಮುನ್ನ ಅನುಮತಿ ಪಡೆಯಲು “ಸುವಿಧ”, ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಪ್ರತಿಯೊಬ್ಬ ನಾಗರಿಕರು ದೂರು ಸಲ್ಲಿಸಲು “ಸಿವಿಜಿಲ್”, ಮತಗಟ್ಟೆಗಳ ವಿವರವನ್ನು ಪಡೆಯಲು “ಚುನಾವಣಾ” ಹಾಗೂ ಚುನಾವಣಾ ಪ್ರಚಾರದಲ್ಲಿ ಬಳಸಲಾಗುವ ವಾಹನಗಳ ಅನುಮತಿಗಾಗಿ “ಸುಗಮ್” ಎಂಬ ಆ್ಯಪ್ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.