ತುಮಕೂರು:
ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಇಲ್ಲದೆ ಸಂಕಷ್ಟ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ “ನೇಗಿಲು” ಎಂಬ ನಾಟಕದ ಮೂಲಕ ರೈತ ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಜಾಗೃತಿ ಮೂಡಿಸಲು ಹೊರಟಿರುವುದು ಶ್ಲಾಘನೀಯ ಕೆಲಸ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.
ಗುಬ್ಬಿ ಪಟ್ಟಣದ ನಾಟಕರತ್ನ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ತುಮಕೂರು,ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಜಿ.ಇಂದ್ರಕುಮಾರ್ ರಚಿಸಿರುವ “ನೇಗಿಲು” ನಾಟಕದ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಇಂದು ರೈತರ ಸಮಸ್ಯೆಗಳ ಕುರಿತು ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಸುದ್ದಿ ಬಿತ್ತರಿಸುವುದು ಕಡಿಮೆಯಾಗಿದೆ. ಒಂದು ರೀತಿಯಲ್ಲಿ ರೈತ ಮಾಧ್ಯಮಗಳಿಗೆ ಟಿಆರ್‍ಪಿ ಗಳಿಸಿಕೊಡದ ವಿಷಯವಾಗಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ನಾಟಕದ ಮೂಲಕ ಯುವ ಸಮೂಹ ರೈತರ ಸಂಕಷ್ಟಗಳ ಪರಿಚಯ ಮಾಡಿಸಲು ಗ್ರಾಮೀಣ ಯುವಕರು,ವಿದ್ಯಾರ್ಥಿಗಳು ಹೊರಟಿರುವುದು ಹೆಮ್ಮೆ ಪಡುವ ವಿಚಾರವಾಗಿದೆ.ಇದಕ್ಕಾಗಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ಇದರ ಶಿವಕುಮಾರ್ ತಿಮ್ಮಾಲಾಪುರ, ನಿರ್ದೇಶಕರದ ಕಾಂತರಾಜು ಕೌತಮಾರನಹಳ್ಳಿ ಅವರಿಗೆ ಅಭಿನಂದನೆಗಳು ಎಂದರು.
ರೈತರ ದುಖಃ,ದುಮ್ಮಾನಗಳಿಗೆ ದ್ವನಿಯಾಗಿರುವ ಇಂತಹ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗೊಳ್ಳಬೇಕು.ರೈತರು ಅದರಲ್ಲಿಯೂ ಯುವ ರೈತರು ಇಂತಹ ನಾಟಕಗಳನ್ನು ನೋಡಿ, ಎಲ್ಲಿ ಎಡವಿದ್ದೇವೆ ಎಂಬುದನ್ನು ತಿಳಿದುಕೊಂಡು ತಿದ್ದುಪಡಿ ಮಾಡಿಕೊಂಡರೆ, ದೇಶದಲ್ಲಾಗುತ್ತಿರುವ ರೈತರ ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ.ಅಲ್ಲದೆ ಆಡಳಿತ ವರ್ಗದ ಜಾಣ ಕುರುಡನ್ನು ಹೋಗಲಾಡಿಸಬಹುದು ಎಂದು ಎ.ಗೋವಿಂದರಾಜು ನುಡಿದರು.
ವೇದಿಕೆಯಲ್ಲಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷರಾದ ಹೆಚ್.ಜಿ.ರಮೇಶ್, ಗುಬ್ಬಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಚೈತಾಲಿ ಕೆ.ಎಸ್., ನೈಸರ್ಗಿಕ ಕೃಷಿಕರಾದ ಪ್ರಸನ್ನಮೂರ್ತಿ ಟಿ.ಆರ್, ಶಿಕ್ಷಕರಾದ ಕೆ.ಎಸ್.ಸುಬ್ರಮಣ್ಯ,ಜಿ.ಪಂ.ಮಾಜಿ ಸದಸ್ಯ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಜಿ.ಇಂದ್ರಕುಮಾರ ರಚಿಸಿರುವ ನೇಗಿಲು ನಾಟಕ ಕಾಂತರಾಜು ಕೌತಮಾರನಹಳ್ಳಿ ಅವರ ನಿರ್ದೇಶನದಲ್ಲಿ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರಿಂದ ಪ್ರದರ್ಶನಗೊಂಡಿತ್ತು.