ತುಮಕೂರು:
ಶಿಕ್ಷಣ, ಕ್ರೀಡೆ ಮಾತ್ರವಲ್ಲದೆ ಸಾಂಸ್ಕೃತಿಕ ರಂಗದ ಕೊಡುಗೆಯಲ್ಲೂ ಮಹಿಳೆಯರದು ಬಹುಪಾಲು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಿಳ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗಳ ಸಹಯೋಗದಲ್ಲಿಂದು ನಗರದ ಬಾಲಭವನದಲ್ಲಿ ಏರ್ಪಡಿಸಿದ್ದ “ಮಹಿಳಾ ಸಾಂಸ್ಕೃತಿಕ ಉತ್ಸವ”ವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಇಂದು ಸಮಾಜದಲ್ಲಿ ಪುರುಷರಷ್ಟೆ ಸಮಾನತೆಯನ್ನು ಪಡೆದುಕೊಳ್ಳುವುದರ ಜೊತೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಮಹಿಳಾ ಸಾಂಸ್ಕೃತಿಕ ಉತ್ಸವದ ಮೂಲಕ ಮಹಿಳೆಯರಲ್ಲಿರುವ ಪ್ರತಿಭೆಯನ್ನು ಪ್ರದರ್ಶನ ಮಾಡಲು ಪ್ರತ್ಯೇಕ ವೇದಿಕೆ ಕಲ್ಪಿಸಿರುವುದು ಸ್ವಾಗತಾರ್ಹ. ಮಹಿಳೆಯರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಂಡು ರಾಷ್ಟ್ರಮಟ್ಟದಲ್ಲಿ ಕೀರ್ತಿ ತರಬೇಕೆಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮಹಿಳೆಯರು ಅಡುಗೆ ಮನೆಗಷ್ಟೇ ಸೀಮಿತವಾಗದೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಪುರುಷರಿಗಿಂತ ಉನ್ನತಮಟ್ಟದ ಹುದ್ದೆಗಳಲ್ಲಿ ನಾವಿಂದು ಮಹಿಳೆಯರನ್ನು ಕಾಣಬಹುದಾಗಿದೆಯಲ್ಲದೆ ಯಾವುದೇ ಕ್ಷೇತ್ರವಿರಲಿ ಉತ್ತಮ ಸಾಧನೆ ಮಾಡುವ ಗುಣ ಅವರಿಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಸಾಧನೆ ಮಾಡಬೇಕು ಎಂದು ಆಶಿಸಿದರು.
ಪಾಲಿಕೆ ಮೇಯರ್ ಲಲಿತ ರವೀಶ್ ಮಾತನಾಡಿ ಮಹಿಳೆಯರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ ಸಂಪೂರ್ಣವಾಗಿ ನಿಲ್ಲಬೇಕು. ಹೆಣ್ಣು ಮಕ್ಕಳು ದುಡಿದರೆ ಒಂದು ಹೆಜ್ಜೆ ಮುಂದೆ ಹೋದಂತೆ ಎಂಬ ಮಾತಿನಂತೆ ಇಂದು ಬಹುತೇಕ ಎಲ್ಲ ಮಹಿಳೆಯರು ದುಡಿಯುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾಳೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಬಾ.ಹ ರಮಾಕುಮಾರಿ ಮಾತನಾಡಿ ಮಹಿಳೆಯರು ಸಮಾಜಮುಖಿ ಆಲೋಚನೆಗಳನ್ನು ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮಹಿಳೆಯರು ಶೇ.100 ರಷ್ಟು ಮತದಾನ ಮಾಡಬೇಕು ಎಂದು ತಿಳಿಸಿದರು.
ಪಾಲಿಕೆ ಉಪಮೇಯರ್ ರೂಪಶ್ರೀ ಮಾತನಾಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಚಂದ್ರಕಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅಂಬಿಕಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಚನ್ನಕೇಶವ ಸೇರಿದಂತೆ ಮತ್ತಿತರು ಉಪ್ಥಿತರಿದ್ದರು.