ತುಮಕೂರು:
ನರೇಗಾ ಅನುದಾನವನ್ನು ಬಳಕೆ ಮಾಡಿ ಬತ್ತಿಹೋಗಿರುವ ಕೆರೆ, ಕಟ್ಟೆ, ಕಲ್ಯಾಣಿಗಳನ್ನು ಪುನಶ್ಚೇತನ ಹಾಗೂ ರಾಜಕಾಲುವೆ ತೆರವು ಮಾಡಿ ನೀರು ಹರಿಯುವಂತೆ ಮಾಡಬೇಕೆಂದು ಗ್ರಾಮೀಣ ಮೂಲಭೂತ ಸೌಕರ್ಯಗಳ ನಿರ್ದೇಶಕ ಡಾ|| ಎನ್. ಕೃಷ್ಣಪ್ಪ ಕೋಡಿಪಾಳ್ಯ ಸಲಹೆ ನೀಡಿದರು.
ಕುಣಿಗಲ್ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಇತ್ತೀಚೆಗೆ ಕುಣಿಗಲ್ ತಾಲೂಕಿನ ಎಲ್ಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿದ ಅವರು ಪಾತಾಳಕ್ಕೆ ಕುಸಿದಿರುವ ಅಂತರ್ಜಲವನ್ನು ಭರ್ತಿ ಮಾಡಲು ಮಳೆ ನೀರು ಇಂಗಿಸುವ ಕ್ರಮವನ್ನು ಅನುಸರಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತಿಗಳು ಕನಿಷ್ಠ ಒಂದು ಕೋಟಿ ರೂ.ಗಳ ಅನುದಾನ ಬಳಸಿಕೊಳ್ಳಲು ಅವಕಾಶವಿದ್ದು, ಸ್ಥಳೀಯ ಜನಪ್ರತಿನಿಧಿಗಳಿಂದ ಸಲಹೆ ಸಹಕಾರ ಪಡೆದು 2019-20ನೇ ಸಾಲಿನಲ್ಲಿ ಉತ್ತಮ ಕ್ರಿಯಾ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಕುಣಿಗಲ್ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಶಿವರಾಜು, ವ್ಯವಸ್ಥಾಪಕ ಬೋರೇಗೌಡ, ವಿವಿಧ ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪನಿರ್ದೇಶಕ ಕೆ.ಎಸ್. ಚಂದ್ರಶೇಖರ್ ಹಾಜರಿದ್ದರು.