ತುಮಕೂರು:
ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದ್ದು, ಇಲ್ಲದ ಸಬೂಬು ಹೇಳಿ ಚುನಾವಣಾ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್‍ಕುಮಾರ್ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ತುರ್ತು ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು ಲೋಕಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವ ಎಲ್ಲ ನೋಡಲ್ ಅಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಮತ್ತಿತರ ಅಧಿಕಾರಿಗಳು ಚುನಾವಣಾ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚುನಾವಣಾ ಪೂರ್ವ ಸಿದ್ಧತೆ ಬಗ್ಗೆ ನಡೆಯುವ ಎಲ್ಲ ತರಬೇತಿಗಳು ಹಾಗೂ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಸೂಚಿಸಿದ ಚುನಾವಣಾ ಕೆಲಸಗಳನ್ನು ನಿಗಧಿತ ಅವಧಿಯಲ್ಲಿ ಮುಗಿಸಬೇಕು ಎಂದರಲ್ಲದೆ ಯಾವುದೇ ಲೋಪದೋಷಗಳಿಲ್ಲದೆ ಪಾರದರ್ಶಕವಾಗಿ ಚುನಾವಣೆಯನ್ನು ನಡೆಸಲು ಸಿದ್ಧರಾಗಿರಬೇಕು ಎಂದು ಸೂಚಿಸಿದರು.
ನಿಯೋಜಿತ ಎಲ್ಲ ನೋಡಲ್ ಅಧಿಕಾರಿಗಳು ತಪ್ಪದೇ ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ರ್ಯಾಂಪ್ ವ್ಯವಸ್ಥೆ, ಕಿಟಕಿ-ಬಾಗಿಲುಗಳು ಸುಸ್ಥಿತಿ, ಶೌಚಾಲಯ, ಬೆಳಕು, ನೀರಿನ ವ್ಯವಸ್ಥೆಯಿರುವ ಬಗ್ಗೆ ಭೌತಿಕ ಪರಿಶೀಲನೆ ನಡೆಸಿ ಅಗತ್ಯವಿರುವ ಕಡೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಮತದಾನ ಸಂದರ್ಭದಲ್ಲಿ ಮತಗಟ್ಟೆಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ವತಿಯಿಂದ ವಿಕಲಚೇತನರಿಗೆ ವ್ಹೀಲ್ ಚೇರ್, ದೃಷ್ಠಿದೋಷವುಳ್ಳವರಿಗೆ ಭೂತಕನ್ನಡಿ ಒದಗಿಸುವ ವ್ಯವಸ್ಥೆ ಮಾಡಬೇಕು. ಮತದಾನ ಕೊಠಡಿಯಲ್ಲಿ ದುರಸ್ತಿಯಲ್ಲಿರುವ ವಿದ್ಯುದ್ದೀಪಗಳನ್ನು ಸರಿಪಡಿಸಲು ಎಲ್ಲ ಪಿಡಿಓಗಳಿಗೆ ಸುತ್ತೋಲೆ ಹೊರಡಿಸಬೇಕೆಂದು ನಿರ್ದೇಶನ ನೀಡಿದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ನನಗೆ ಅಪ್‍ಡೇಟ್ ಮಾಡುತ್ತಿರಬೇಕು. ನೋಡೆಲ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕೀಯ ನಾಯಕರ ಅಥವಾ ಯಾವುದೇ ಪಕ್ಷದ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು, ವಿಡಿಯೋಗಳನ್ನು ಪ್ರಸಾರ ಮಾಡುವುದು ಕಂಡು ಬಂದರೆ ಅಂತಹವರನ್ನು ಅಮಾನತ್ತು ಮಾಡಲಾಗುವುದು ಎಂದು ಎಚ್ಚರಿಸಿದರು.
ಚುನಾವಣಾ ಮಾದರಿ ನೀತಿ ಸಂಹಿತೆಯಡಿ ಮತದಾನ ದಿನದ 48 ಗಂಟೆಗಳ ಮುನ್ನ ರಾಜಕೀಯ ಪಕ್ಷಗಳು ತಮ್ಮ ಪಕ್ಷಕ್ಕೆ ಸಂಬಂಧಿಸಿದ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಬೇಕು. ನೀತಿ ಸಂಹಿತೆ ಜಾರಿ ಅವಧಿಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ಏರ್ಪಡಿಸುವ ಕಾರ್ಯಕ್ರಮಗಳಿಗಾಗಿ ಬಳಸಲಾಗುವ ಕರಪತ್ರ, ಪೋಸ್ಟರ್, ಹೋರ್ಡಿಂಗ್ಸ್, ಧ್ವನಿವರ್ಧಕಗಳು, ವಿಡಿಯೋ ಚಿತ್ರೀಕರಣ, ಛಾಯಾಚಿತ್ರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶುಭಾ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನ ವಂಶಿಕೃಷ್ಣ, ಚುನಾವಣಾ ತಹಶೀಲ್ದಾರ್ ಮೋಹನ್, ಮತ್ತಿತರೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದರು.