ತುಮಕೂರು:

      ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಡಿಸಿರುವ ಬಜೆಟ್‍ನಲ್ಲಿ ಬಿಸಿಯೂಟ ನೌಕರರನ್ನು ಕಡೆಗಣಿಸಿರುವುದನ್ನು ಹಾಗೂ ಬಿಸಿಯೂಟ ಯೋಜನೆಯನ್ನು ಗುತ್ತಿಗೆ ನೀಡುವುದನ್ನು ವಿರೋಧಿಸಿ ತುಮಕೂರು ನಗರದಲ್ಲಿ ಬಿಸಿಯೂಟ ತಯಾರಕರು ಟೌನ್‍ಹಾಲ್‍ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

      2002-03ರಲ್ಲಿ ಪ್ರಾರಂಭಗೊಂಡಿರುವ ಅಕ್ಷರ ದಾಸೋಹ ಯೋಜನೆಯಡಿ ರಾಜ್ಯಾದ್ಯಂತ 1,18,000 ಬಿಸಿಯೂಟ ಕಾರ್ಯಕರ್ತರು ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ತಿಂಗಳು 2,700, 2,600 ರೂ ನೀಡುತ್ತಿದ್ದು, ಕನಿಷ್ಠ ವೇತನ, ಇಎಸ್‍ಐ, ಪಿಎಫ್, ಗ್ರಾಜುಯಿಟಿ, ಬೋನಸ್ ಮುಂತಾದ ಯೋಜನೆಗಳನ್ನು ಜಾರಿಗೊಳಿಸಿಲ್ಲ, ರಾಷ್ಟ್ರದಾದ್ಯಂತ 25ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಿಸಿಯೂಟ ಕಾರ್ಯಕರ್ತೆಯರಾಗಿ ದುಡಿಯುತ್ತಿದ್ದು, ಸರ್ಕಾರಗಳು ಅವರನ್ನು ಕಡೆಗಣಿಸಿವೆ ಎಂದು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದರು.

      ಕಳೆದ 16 ವರ್ಷಗಳಿಂದ ಬಿಸಿಯೂಟ ಕಾರ್ಯಕರ್ತೆಯರಿಗೆ ಯಾವುದೇ ಸೌಲಭ್ಯವನ್ನು ಸರ್ಕಾರಗಳು ನೀಡುತ್ತಿಲ್ಲ, ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು ಬಿಸಿಯೂಟದ ಮಹಿಳೆಯರಿಗೆ ಸೌಲಭ್ಯ ಕಲ್ಪಿಸಲಿಲ್ಲ, ಬಿಸಿಯೂಟ ನೌಕರರಿಗೆ ಕನಿಷ್ಠ 10,500 ರೂ ವೇತನ, ಇಎಸ್‍ಐ, ಪಿಎಫ್, ಗ್ರಾಜುಯಿಟಿ ಹಾಗೂ ಕನಿಷ್ಠ 5000 ಪಿಂಚಣಿ ನೀಡಬೇಕು, ಅಪಘಾತ ಪರಿಹಾರ ವಿಮೆ ನೀಡಬೇಕು ಎಂದರು.

      ಬಿಸಿಯೂಟ ಯೋಜನೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು, 17 ಲಕ್ಷ ಜನರಿಗೆ ಅನ್ನ ನೀಡುವ ಅಕ್ಷಯ ಪಾತ್ರೆ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಅವರು, ಅಕ್ಷಯ ಫೌಂಡೇಶನ್ ಸಂಸ್ಥೆ ಸೇವೆ ಶ್ಲಾಘನೀಯ ಎನ್ನುತ್ತಾರೆ, ರಾಜ್ಯವೊಂದರಲ್ಲಿಯೇ 65 ಲಕ್ಷ ಮಂದಿಗೆ ಬಿಸಿಯೂಟ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದಾರೆ, ಇವರ ಸೇವೆ ಪ್ರಧಾನಮಂತ್ರಿಗಳಿಗೆ ಕಾಣಿಸುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

      ಅಧಿವೇಶನದಲ್ಲಿ ಭಾರತ ಸದೃಢವಾಗಿದೆ, ಕಪ್ಪು ಹಣ ನಿಯಂತ್ರಣಕ್ಕೆ ಬಂದಿದೆ ಎನ್ನುವ ಪ್ರಧಾನ ಮಂತ್ರಿಗಳು, ಬಿಸಿಯೂಟ ನೌಕರರು ಪಡೆಯುತ್ತಿರುವ 2 ಸಾವಿರ ವೇತನದಿಂದ ಸದೃಢರಾಗಲು ಸಾಧ್ಯವೇ? ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ಇರುವಾಗ ಭಾರತ ಸದೃಢವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

      ಬಿಸಿಯೂಟ ಯೋಜನೆಯನ್ನು ಅಕ್ಷಯ ಪಾತ್ರ ಫೌಂಡೇಶನ್‍ಗೆ ಗುತ್ತಿಗೆ ಕೊಡುವುದನ್ನು ಕೈಬಿಡಬೇಕು, ಈಗಾಗಲೇ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಅತಿ ಕಳಪೆ ಮಟ್ಟದ ಆಹಾರವನ್ನು ನೀಡುತ್ತಿದ್ದು, ಪ್ರಾರಂಭದಲ್ಲಿ ಉತ್ತಮ ಆಹಾರ ನೀಡುವ ಆಶ್ವಾಸನೆ ನೀಡಿ, ಒಂದೇ ಕಡೆ ಅಡುಗೆ ಮಾಡಿ ಬಡಿಸುವುದರಿಂದ ಕೊನೆಯಲ್ಲಿ ಗುಣಮಟ್ಟ ಕಳೆದುಕೊಳ್ಳಲಿದ್ದು, ಕಾರ್ಮಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಮೂಲ ಯೋಜನೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ತೀರ್ಮಾನವನ್ನು ಕೈಬಿಡಬೇಕೆಂದು ಒತ್ತಾಯಿಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಗೆ ಮನವಿ ಸಲ್ಲಿಸಿದರು.

      ಬಿಸಿಯೂಟ ನೌಕರರಿಗೆ ವೇತನ ಹೆಚ್ಚಿಸುವುದು, ಖಾಸಗೀಕರಣ ಕೈಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕಂಬೇಗೌಡ, ಚಿಕ್ಕನಾಯಕನಹಳ್ಳಿ ಚಂದ್ರು, ಮಲ್ಲಿಕಾರ್ಜುನಯ್ಯ, ಜಿಲ್ಲಾ ಸಂಚಾಲಕ ಸಿ.ಎಸ್.ಸತ್ಯನಾರಾಯಣ್, ಗುಬ್ಬಿ ವನಜಾಕ್ಷಿ, ಸಿರಾ ಸಾವಿತ್ರಮ್ಮ, ತುಮಕೂರು ಉಮಾದೇವಿ, ರಾಧಮ್ಮ, ಮಧುಗಿರಿ ಕಮಲಾಕ್ಷಿ, ಶಶಿಕಾಂತ್, ನಾಗರತ್ನಮ್ಮ, ಭಾರತಿ, ಪದ್ಮ, ನಳಿನಾ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

(Visited 77 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp