ತುಮಕೂರು:
ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ ನೀಡುತ್ತಿರುವ 3500 ರೂ.ಗಳ ಸಂಭಾವನೆಯನ್ನು 4000 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ|| ಜಿ. ಪರಮೇಶ್ವರ ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ, ಕಿದ್ವಾಯ್ ಸಂಸ್ಥೆ, ಅಪೋಲೋ ಆಸ್ಪತ್ರೆ, ಬಿ.ಜಿ.ಎಸ್. ಆಸ್ಪತ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘಗಳ ಸಹಯೋಗದಲ್ಲಿ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದಲ್ಲಿಂದು ಏರ್ಪಡಿಸಿದ್ದ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಆಶಾ ಕಾರ್ಯಕರ್ತೆಯರಿಗೆ ಮಾಹೆಯಾನ 3500 ರೂ.ಗಳ ಸಂಭಾವನೆ ನೀಡಲಾಗುತ್ತಿತ್ತು. ಪ್ರಸ್ತುತ 500 ರೂ.ಗಳನ್ನು ಹೆಚ್ಚಳ ಮಾಡಿ ಆಯವ್ಯಯದಲ್ಲಿ ಮಂಡಿಸಲಾಗಿದೆ. ಹುದ್ದೆಯನ್ನು ಖಾಯಂಗೊಳಿಸುವ ಬಗ್ಗೆ ಆಶಾ ಕಾರ್ಯಕರ್ತೆಯರಿಂದ ಬೇಡಿಕೆಯಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಆರೋಗ್ಯ ಇಲಾಖೆಗಳ ವ್ಯವಸ್ಥೆಯಲ್ಲಿ ರಾಜ್ಯ ಸರ್ಕಾರ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದರೆ ತಪ್ಪಾಗಲಾರದು. ರಾಜ್ಯದಲ್ಲಿ ಸುಮಾರು 6000 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಗ್ರಾಮೀಣ ಭಾಗದ ಜನರಲ್ಲಿ ಅರಿವಿನ ಕೊರತೆಯಿಂದಲೋ, ಮೂಢ ನಂಬಿಕೆಗಳಿಂದಲೋ ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಇವರಿಗೆ ಉತ್ತಮ ಆರೋಗ್ಯ ಕಲ್ಪಿಸುವ ದೃಷ್ಟಿಯಿಂದ ಈ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ. ಮೇಳದಲ್ಲಿ ತಜ್ಞವೈದ್ಯರು ಆರೋಗ್ಯ ತಪಾಸಣೆ ಮಾಡಲಿದ್ದು, ಜನರು ಮೇಳದ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಪ್ರತಿಯೊಬ್ಬರೂ ಆರೋಗ್ಯವಂತರಾಗಿರಬೇಕೆಂಬ ದೃಷ್ಟಿಯಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಬೃಹತ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯು 1614 ಚಿಕಿತ್ಸೆಗಳನ್ನೊಳಗೊಂಡಿದೆ. ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಕಿಡ್ನಿ, ಹೃದಯ, ಬೈಪಾಸ್ ಸರ್ಜರಿ, ಮತ್ತಿತರ ಮಾರಕ ಖಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದಲ್ಲದೆ ರೋಗಿಗೆ 5ಲಕ್ಷ ರೂ.ಗಳವೆರೆಗೂ ಆರೋಗ್ಯ ಸೌಲಭ್ಯ ಒದಗಿಸಲಾಗುವುದು. ಎಪಿಎಲ್ ಪಡಿತರರಿಗೆ ಶೇ.30ರಷ್ಟು ರಿಯಾಯಿತಿಯಲ್ಲಿ ಚಿಕಿತ್ಸೆ ನೀಡಲಾಗುವುದು. ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಬೇಕೆಂದು ವಿಶ್ವಬ್ಯಾಂಕ್ ನೆರವಿನಿಂದ ಜಿಲ್ಲಾಸ್ಪತ್ರೆಗಳಿಗೆ ಸಿಟಿಸ್ಕ್ಯಾನ್, ಎಂಆರ್‍ಐ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಆಧುನಿಕ ಎಕ್ಸರೇ ಸೇರಿದಂತೆ ಹೊಸ ಉಪಕರಣಗಳನ್ನು ಅಳವಡಿಸಲು ಪ್ರಯತ್ನ ಮಾಡಲಾಗುತ್ತಿದೆ. ಜನರು ಈ ಮುಂಚೆ ಹೃದ್ರೋಗ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಹೋಗಬೇಕಿತ್ತು. ಜಯದೇವ ಆಸ್ಪತ್ರೆಯಲ್ಲಿ ಕೇವಲ 35000 ರೂ. ವೆಚ್ಚದಲ್ಲಿ ಬೈಪಾಸ್ ಸರ್ಜರಿ, ಸ್ಟಂಟ್ ಅಳವಡಿಕೆ, ಮತ್ತಿತರ ಚಿಕಿತ್ಸೆ ಪಡೆಯಬಹುದಾಗಿದೆ. ಇದೇ ಚಿಕಿತ್ಸೆಯನ್ನು ಪಡೆಯಲು ಖಾಸಗಿ ಆಸ್ಪತ್ರೆಯಲ್ಲಿ 3ಲಕ್ಷ ರೂ.ಗಳವರೆಗೂ ಖರ್ಚಾಗಲಿದೆ. ಇದನ್ನು ಮನಗಂಡ ಸರ್ಕಾರ ಹೃದ್ರೋಗಕ್ಕೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯವನ್ನು ಗುಲ್ಬರ್ಗಾ, ಮೈಸೂರು ಜಿಲ್ಲೆಯ ಆಸ್ಪತ್ರೆಗಳಿಗೂ ವಿಸ್ತರಿಸಿದೆ ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ 58 ಕೋಟಿ ರೂ. ವೆಚ್ಚದಲ್ಲಿ ಟ್ರೋಮಾಸೆಂಟರ್(ಅಪಘಾತ ವಿಭಾಗ), 60 ಕೋಟಿ ರೂ. ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದೆ. ಜಿಲ್ಲೆಯಲ್ಲಿ ಮಾರಕ ಖಾಯಿಲೆಗಳಿಗೂ ಚಿಕಿತ್ಸಾ ಸೌಲಭ್ಯ ನೀಡುವ ಸಲುವಾಗಿ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ಚಿಕಿತ್ಸೆ ನೀಡಲು ಹೊಸದಾಗಿ ಕಾರ್ಡಿಯಾಲಜಿ ಘಟಕವನ್ನು ಸ್ಥಾಪಿಸಲು ಚಿಂತನೆ ನಡೆಸಲಾಗಿದೆ ಎಂದರು.
ಸಂಸದ ಎಸ್.ಪಿ. ಮುದ್ದಹನುಮೇಗೌಡ ಮಾತನಾಡಿ ಜನರಿಗೆ ಆರೋಗ್ಯವೇ ಸಂಪತ್ತು. ಆರೋಗ್ಯವಿಲ್ಲದಿದ್ದರೂ ಎಷ್ಟೇ ಅಂತಸ್ತು, ಐಶ್ವರ್ಯವಿದ್ದರೂ ಎಲ್ಲವೂ ನಗಣ್ಯ. ಆರೋಗ್ಯ ಹೆಚ್ಚು-ಕಡಿಮೆ ಆದಾಗಲೇ ಅದರ ಪಾಮುಖ್ಯದ ಬಗ್ಗೆ ಅರಿವಾಗುತ್ತದೆ. ಹಣಕಾಸಿನ ಮುಗ್ಗಟ್ಟಿನಿಂದಲೋ, ಕಾಲಾವಕಾಶದ ಕೊರೆತೆಯಿಂದಲೋ ಗ್ರಾಮೀಣ ಪ್ರದೇಶದವರು ತಮಗಿರುವ ರೋಗದ ಬಗ್ಗೆ ವೈದ್ಯರನ್ನು ಸಂಪರ್ಕಿಸುವುದೇ ಇಲ್ಲ. ಅನಾರೋಗ್ಯದಿಂದ ಸಕಾಲದಲ್ಲಿ ಚಿಕಿತ್ಸೆ ದೊರೆಯದೇ ಅಕಾಲಿಕ ಸಾವನ್ನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಎಲ್ಲ ತಾಲೂಕುಗಳಲ್ಲಿಯೂ ಡಯಾಲಿಸಿಸ್ ಘಟಕವನ್ನು ಸ್ಥಾಪಿಸಲಾಗಿದ್ದು, ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ ಸಾಮಾನ್ಯ ಜನರಿಗೂ ಕೂಡ ಹೈಟೆಕ್ ಆಸ್ಪತ್ರೆಯಲ್ಲಿ ದೊರೆಯುವ ಚಿಕಿತ್ಸೆಯನ್ನು ಜಿಲ್ಲಾಸ್ಪತ್ರೆಯಲ್ಲಿ ನೀಡುವಂತಾಗಬೇಕು ಎಂದು ತಿಳಿಸಿದರು.
ನಂತರ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್, ಡಿವೈಎಸ್‍ಪಿ ಡಾ|| ಶೋಭಾರಾಣಿ, ಡಿಹೆಚ್‍ಓ ಡಾ|| ಬಿ.ಆರ್. ಚಂದ್ರಿಕಾ ಅವರು 6 ಮಂದಿ ತುಂಬು ಗರ್ಭಿಣಿಯರಿಗೆ ಹರಿಶಿನ-ಕುಂಕುಮ ಹಚ್ಚಿ, ಹೂಮುಡಿಸಿ, ಮಡಿಲು ತುಂಬುವ ಮೂಲಕ ಸೀಮಂತ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಶ್ರೀನಿವಾಸಮೂರ್ತಿ, ಜಿಲ್ಲಾ ಸರ್ಜನ್ ಡಾ|| ವೀರಭದ್ರಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ವಂಶಿ ಕೋನ ಕೃಷ್ಣ, ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವ್‍ರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ|| ಶರತ್‍ಚಂದ್ರ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಮೇಳದಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳಿಂದ ಮಾಹಿತಿ ಹಾಗೂ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.