ಗುಬ್ಬಿ :
ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಎಂಬ ಸರ್ಕಾರಿ ಶಾಲೆ ಉಳಿಸಿ ಎಂಬ ಘೋಷಣೆ ಕೇವಲ ಘೋಷಣೆಯಾಗಿ ಉಳಿದಿರುವುದಕ್ಕೆ ಸಾಕಷ್ಟು ನಿರ್ದೇಶನಗಳಿದ್ದು ಇದರಿಂದ ಪೋಷಕರುಗಳು ಸರ್ಕಾರಿ ಶಾಲೆಗಳತ್ತ ತಮ್ಮ ಮಕ್ಕಳು ಹೆಜ್ಜೆ ಹಾಕದಂತಹ ಸ್ಥಿತಿಯನ್ನು ಶಾಲಾ ಶಿಕ್ಷಕವೃಂದ ಮತ್ತು ಶಿಕ್ಷಣ ಇಲಾಖೆ ತಂದಿಟ್ಟಿರುವುದು ಎಷ್ಟು ಸರಿ.
ಸಣ್ಣ ಕೈಗಾರಿಕಾ ಸಚಿವರ ಕ್ಷೇತ್ರದಲ್ಲೇ ಸೂರಿಲ್ಲದೇ ಮಕ್ಕಳುಗಳು ಧಾರ್ಮಿಕ ಸೂರಿನಡಿಯಲ್ಲಿ ಪಾಠವನ್ನು ಕೇಳುವಂತಹ ಸ್ಥಿತಿ ತಲುಪಿರುವುದು ಈ ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳ ದುರಂತವೇ ಸರಿ. ಗುಬ್ಬಿ ಸಮೀಪವೇ ಇರುವ ಹೇರೂರು ಗ್ರಾಮ ಪಂಚಾಯ್ತಿಗೆ ಹೊಂದಿಕೊಂಡಿರುವ ಕಿಟ್ಟದಕುಪ್ಪೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಇದ್ದು ಸುಮಾರು 1-7ನೇ ತರಗತಿಯ ಸುಮಾರು 70 ಮಕ್ಕಳುಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಸುಮಾರು 5 ಜನ ಶಿಕ್ಷಕರಿದ್ದು ಸುಮಾರು 4 ಕೊಠಡಿಗಳು ಶಿಥಿಲಾವಸ್ಥೆತ ತಲುಪಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರತಿ ಕೆ.ಡಿ.ಪಿ ಸಭೆಯಲ್ಲೂ ಕೇವಲ ಬೆರಳೆಣಿಕೆಯಷ್ಟು ಶಿಥಿಲವಾಗಿರುವ ಶಾಲೆಗಳನ್ನು ತೋರಿಸುತ್ತಿದ್ದು ಪ್ರತಿನಿತ್ಯ ಓಡಾಡುವಂತಹ ಜಾಗದಲ್ಲೇ ಮಕ್ಕಳುಗಳು ದೇವಾಲಯದಲ್ಲಿ ಪಾಠ ಮಾಡುತ್ತಿರುವುದು ಈ ಅಧಿಕಾರಿಗಳ ಕಣ್ಣಿಗೆ ಕಾಣುತ್ತಿಲ್ಲವೇ?
ಶಿಥಿಲವಾದ ಕಟ್ಟಡವನ್ನು ಕೆಡವಿ ಸುಮಾರು ತಿಂಗಳುಗಟ್ಟಲೇ ಆದರೂ ಇಲ್ಲಿಯವರೆಗೂ ತಳಪಾಯವನ್ನು ಹಾಕದೇ ಕಾಮಗಾರಿಯ ವಿಳಂಬನೀತಿಯನ್ನು ಅನುಸರಿಸುತ್ತಿರಲು ಕಾರಣವೇನು ? ಈ ಎಲ್ಲಾ ಗೊಂದಲಗಳ ನಡುವೆ ದೇವಾಲಯದಲ್ಲಿ ಪಾಠ ಕೇಳುವಂತಹ ಮಕ್ಕಳಿಗೆ ಪಕ್ಕದಲ್ಲೇ ಹಾದುಹೋಗುವ ಹೇರೂರು ಹಾಗೂ ಬೆಲವತ್ತ ರಸ್ತೆ ಇದ್ದು ಪ್ರತಿ ನಿತ್ಯ ನೂರಾರು ಆಟೋ ಹಾಗೂ ದ್ವಿಚಕ್ರ ವಾಹನಗಳು ಓಡಾಡುತ್ತಿದ್ದು ಪಾದಚಾರಿಗಳು ಈ ದೇವಾಲಯದ ಮುಂಭಾಗದಿಂದಲೇ ಓಡಾಡುವಂತಹ ಸ್ಥಿತಿ ಇದ್ದು ಇದರಿಂದ ಮಕ್ಕಳಲ್ಲಿ ಪಾಠ ಕೇಳುವ ಏಕಾಗ್ರತೆ ಮೂಡಲು ಸಾಧ್ಯವೇ ? ಪಾಠ ಮಾಡುವ ಶಿಕ್ಷಕಿಯು ಗಮನವನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆಯೇ ? ಈಗಲಾದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಬೀದಿಬದಿಯಲ್ಲಿ ಪಾಠಮಾಡುವ ಕ್ರಮವನ್ನು ಕೈಬಿಡುವರೇ ಎಂದು ಪೋಷಕರು ಎದುರು ನೋಡುತ್ತಿದ್ದಾರೆ.