ತುಮಕೂರು :
ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ-ಯುಟಿಲಿಟಿ ಮಾಲ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಅಧ್ಯಕ್ಷೆ ಡಾ: ಶಾಲಿನಿ ರಜನೀಶ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಬೋರ್ಡ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ತುಮಕೂರು ಕೈಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯುಟಿಲಿಟಿ ಮಾಲ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆ ವತಿಯಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಗರವನ್ನು ಅಭಿವೃದ್ಧಿಪಡಿಸಲಾಗುವುದು. ಸುಮಾರು 19592 ಚ.ಮೀ.(sqm)ಅಳತೆಯಲ್ಲಿ ಮೂರು ಅಂತಸ್ತಿನ ಮಲ್ಟಿ-ಯುಟಿಲಿಟಿ ಮಾಲ್ ಅನ್ನು ನಿರ್ಮಾಣ ಮಾಡಲಾಗುವುದು. ಖಾಯಂ ಹೆಲಿಪ್ಯಾಡ್ ಸೇರಿದಂತೆ ಉದ್ಯಮಿಗಳು ಸಭೆ ನಡೆಸಲು ಸಭಾಂಗಣ, ಹೋಟೆಲ್, ರೆಸ್ಟೋರೆಂಟ್, ಸೆಲೋನ್ ಸೆಂಟರ್, ಎಟಿಎಂಗಳು, ಸೂಪರ್ ಮಾರುಕಟ್ಟೆ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಈ ಮಾಲ್ ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯಡಿ ಆಸ್ಪತ್ರೆಗಳ ಆಧುನೀಕರಣ ಹಾಗೂ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುವುದು. ಅಲ್ಲದೆ ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆಯ ವಿವಿಧ ಸೇವೆಗಳನ್ನು ಯಾರ ನೆರವೂ ಇಲ್ಲದೆ ಸ್ವತಃ ತಾವೇ ಪಡೆದುಕೊಳ್ಳಲು ಅನುಕೂಲವಾಗುವಂತೆ ಮಾಹಿತಿ ತಂತ್ರಜ್ಞಾನವುಳ್ಳ ಸ್ಮಾರ್ಟ್ ಲಾಂಜ್ನ್ನು ನಿರ್ಮಿಸಲಾಗುವುದು. ಈ ಲಾಂಜ್ನಲ್ಲಿ ಸಾರ್ವಜನಿಕರು ಕಿಯೋಸ್ಕ್ ಹಾಗೂ ಸಕಾಲ ಮೂಲಕ ಆಸ್ತಿ ತೆರಿಗೆ ವಿದ್ಯುತ್, ನೀರಿನ ಶುಲ್ಕ, ಒಳಚರಂಡಿ ತೆರಿಗೆ ಹಾಗೂ ಮೊಬೈಲ್ ಬಿಲ್ಗಳನ್ನು ಪಾವತಿಸಬಹುದು. ಜೊತೆಗೆ ಆರ್ಸಿ, ಡಿಎಲ್ ಎಕ್ಸ್ಟ್ರ್ಯಾಕ್ಟ್, ಎಲ್ಐಸಿ ವಿಮೆ ಮೊತ್ತ ಪಾವತಿ, ಆಯ್ದ ಶಾಲಾ ಕಾಲೇಜುಗಳ ಶುಲ್ಕ ಪಾವತಿ, ಜನನ-ಮರಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ರೈಲ್ವೆ ಟಿಕೇಟ್ ಬುಕ್ಕಿಂಗ್, ವಿವಾಹ ನೋಂದಣಿ ಪ್ರಮಾಣ ಪತ್ರ ಮತ್ತಿತರ ಸೌಲಭ್ಯಗಳನ್ನು ಪಡೆಯಲು ಅವಕಾಶವಿರುತ್ತದೆ ಎಂದು ತಿಳಿಸಿದರು.
ವಿಶ್ವ ವನ :-
ಬೆಂಗಳೂರಿನ ಲಾಲ್ಬಾಗ್ ಮಾದರಿಯಲ್ಲಿ ವಿಶ್ವ ವನ ನಿರ್ಮಾಣಕ್ಕೆ ಸ್ಮಾರ್ಟ್ ಸಿಟಿ ಸಂಸ್ಥೆ ಮುಂದಾಗಿದ್ದು, ವರ್ಣರಂಜಿತ ಫಲಪುಷ್ಪ ಸಸಿಗಳನ್ನು ಒಳಗೊಂಡ ಪ್ರಸಿದ್ಧ ಸಸ್ಯೋದ್ಯಾನವನ್ನು ಈ ವಿಶ್ವ ವನದಲ್ಲಿ ಕಾಣಬಹುದಾಗಿದೆ. ಶಿಲ್ಪಿಗಳ ವನ, ಥೀಮ್ ಪಾರ್ಕ್, ಜಿಮ್ ಪಾರ್ಕ್, ಗ್ರೀನ್ಪಾರ್ಕ್, ಲೋಟಸ್ ಪಾರ್ಕ್, ಮಿನಿ ಸೋಲಾರ್ ಟ್ರೈನ್ ಪಾರ್ಕ್ ಸೇರಿದಂತೆ ಹಲವಾರು ಉದ್ಯಾನವನಗಳನ್ನು ಈ ವನದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರದ ರಸ್ತೆ ಅಭಿವೃದ್ಧಿ, ಸಿಸಿಟಿವಿ, ಟ್ರಾಫಿಕ್ ನಿಯಂತ್ರಣ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪುನರುಜ್ಜೀವನ ಕಾರ್ಯ, ಡಿಜಿಟಲ್ ಗ್ರಂಥಾಲಯ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ಸ್ಮಾರ್ಟ್ ಲಾಂಜ್, ಎಲ್ಇಡಿ ಸ್ಮಾರ್ಟ್ ಲೈಟ್, ಶಿಕ್ಷಣ, ಕ್ರೀಡೆ ಸೇರಿದಂತೆ ಹಲವಾರು ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಲಾಯಿತು.
ಮೇಯರ್ ಲಲಿತಾ ರವೀಶ್, ಉಪ ಮೇಯರ್ ಬಿ.ಎಸ್.ರೂಪಶ್ರೀ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎ.ಬಿ.ಇಬ್ರಾಹಿಂ, ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ಕುಮಾರ್, ಪಾಲಿಕೆ ಆಯುಕ್ತ ಟಿ.ಭೂಪಾಲನ್, ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಟಿ.ರಂಗಸ್ವಾಮಿ, ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಜೇಯ್ ವಿಠ್ಠಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ವಂಶಿಕೃಷ್ಣ ಸೇರಿದಂತೆ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.