ತುಮಕೂರು:
ಜಿಲ್ಲೆಯ ದಲಿತ ಕಾಲೋನಿಗಳಲ್ಲಿ ಅಂಬೇಡ್ಕರ್ ಸಮುದಾಯ ಭವನಗಳನ್ನು ನಿರ್ಮಿಸಬೇಕೆಂದು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ನಡೆದ ಸಾಮಾನ್ಯ ಸ್ಥಾಯಿ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದಲಿತ ಕಾಲೋನಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲು ಈಗಾಗಲೇ ಅನುದಾನ ಬಿಡುಗಡೆಯಾಗಿದ್ದರೂ ಇನ್ನೂ ಅಧಿಕಾರಿಗಳು ಮುಂದಾಗಿಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಾಲೋನಿಗಳಲ್ಲಿ ಸಮುದಾಯಗಳನ್ನು ನಿರ್ಮಿಸಿದರೆ ಬಡ ಕುಟುಂಬಗಳು ಮದುವೆ, ಮತ್ತಿತರ ಶುಭ ಸಮಾರಂಭಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದರಲ್ಲದೆ ದಲಿತರ ಸ್ಮಶಾನಭೂಮಿಗೆ ಆವರಣ ಗೋಡೆಗಳನ್ನು ನಿರ್ಮಿಸದಿದ್ದರೆ ಒತ್ತುವರಿಯಾಗುವ ಸಾಧ್ಯತೆಯಿದ್ದು, ಅಧಿಕಾರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ಸೂಚಿಸಿದರು.
ಸಾಮಾನ್ಯ ಸ್ಥಾಯಿ ಸಮಿತಿ ಸಭೆಗೆ ಮಾಹಿತಿ ನೀಡಲು ತಡವರಿಸಿದ ಅಧಿಕಾರಿಗಳಿಗೆ ಕೂಡಲೇ ನೋಟೀಸ್ ನೀಡುವಂತೆ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ(ಆಡಳಿತ) ಪ್ರೇಮ್ ಕುಮಾರ್ ಅವರಿಗೆ ಸೂಚನೆ ನೀಡಿದರು.
ಸಮರ್ಪಕ ಮಾಹಿತಿ ನೀಡದಿದ್ದರೆ ಪ್ರಗತಿಯನ್ನು ಪರಿಶೀಲಿಸುವುದಾದರೂ ಹೇಗೆ? ಮಾರ್ಚ್ ಅಂತ್ಯದೊಳಗೆ ಪ್ರಗತಿ ಸಾಧಿಸದೇ ಇದ್ದಲ್ಲಿ ಅನುದಾನ ವಾಪಸ್ ಹೋಗುತ್ತದೆ. ಇದಕ್ಕೆ ಯಾರು ಜವಾಬ್ದಾರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಲ್ಲದೆ 2017-18ರಲ್ಲಿ ಜಿ.ಪಂ ಕಚೇರಿಗೆ ಲಿಫ್ಟ್ ಅಳವಡಿಕೆಗೆ ಅನುದಾನ ಬಿಡುಗಡೆಯಾಗಿದ್ದರೂ ಈವರೆಗೂ ಕಾಮಗಾರಿ ಪ್ರಾರಂಭಿಸಿಲ್ಲದ ಬಗ್ಗೆ ಸಹಾಯಕ ಇಂಜಿನಿಯರ್ ಚನ್ನವೀರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಸೂಚನೆ ನೀಡಿದರು.
ಸಾಮಾನ್ಯ ಸ್ಥಾಯಿ ಸಮಿತಿಯನ್ನು ಕಟ್ಟಡ ನಿರ್ಮಾಣಗಳ ಪ್ರಗತಿ ಪರಿಶೀಲನೆಗಾಗಿಯೇ ರಚಿಸಲಾಗಿದ್ದು, ಎಲ್ಲಾ ಇಲಾಖೆಯಲ್ಲಿ ಬಾಕಿ ಉಳಿದಿರುವ ಕಟ್ಟಡ, ವಸತಿ, ರೇಷ್ಮೆ ಸಲಕರಣಾ ಮನೆಗಳು, ಬಾಗಿಲು, ಕಿಟಕಿ, ನೀರಿನ ವ್ಯವಸ್ಥೆ, ಹಳೆ ಕಟ್ಟಡಗಳ ದುರಸ್ಥಿ ಕಾಮಗಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಈಗಾಗಲೇ ಪೂರ್ಣಗೊಂಡಿರುವ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಮುಂದಿನ ಸಭೆಯಲ್ಲಿ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಎಂದು ಅವರು ಸೂಚನೆ ನೀಡಿದರು.
ಜಿ.ಪಂ. ಉಪ ಕಾರ್ಯದರ್ಶಿ ಪ್ರೇಮ್‍ಕುಮಾರ್ ಮಾತನಾಡಿ ತುಮಕೂರು, ಮಧುಗಿರಿ ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಶಾಲೆಗಳಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಮುಗಿಸಬೇಕು ಹಾಗೂ ಲಿಂಕ್ ಡಾಕ್ಯುಮೆಂಟ್ ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು ಎಂದು ಡಿಡಿಪಿಐಗಳಾದ ರಾಜೇಂದ್ರ ರೆಡ್ಡಿ, ಮಂಜುನಾಥ್ ಅವರಿಗೆ ಆದೇಶಿಸಿದರು.
ಶಾಲೆಗಳ ಅಭಿವೃದ್ಧಿ ಕಾಮಗಾರಿಗಳ ಜವಾಬ್ದಾರಿಯನ್ನು ಅನುಷ್ಠಾನಾಧಿಕಾರಿಗಳಿಗೆ ವಹಿಸದೇ ಡಿಡಿಪಿಐಗಳೇ ಹೊರಬೇಕು. ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಡಿಡಿಪಿಐಗಳು ಖುದ್ದು ಪರಿಶೀಲನೆ ನಡೆಸಬೇಕು. ಶಾಲೆಗಳಲ್ಲಿ ಶೌಚಾಲಯಗಳ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಿ ಮಾಹಿತಿ ನೀಡಬೇಕೆಂದು ಪಿಆರ್‍ಇಡಿ ಹಾಗೂ ಕೆಆರ್‍ಡಿಎಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಸಿಸಿ ಟಿವಿ ಅಳವಡಿಕೆ, ಜಿಲ್ಲಾ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕೊಠಡಿಯಲ್ಲಿ ಶೌಚಾಲಯ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ತಿಮ್ಮಯ್ಯ, ಜಿ.ವಿ. ರೇಣುಕ ಕೃಷ್ಣಮೂರ್ತಿ, ಭಾಗ್ಯಮ್ಮ, ಭಾರತಿ ಹಿತೇಶ್, ಅಂಬುಜ ಎಸ್.ಆರ್.ಗೌಡ್ರು, ಮುಖ್ಯ ಯೋಜನಾಧಿಕಾರಿ ಬಾಲರಾಜು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಜರಿದ್ದರು.