ಮಧುಗಿರಿ :
ಸಾಮಾನ್ಯ ಜನರಲ್ಲಿರುವ ದೇಶ ಪ್ರೇಮ ಪ್ರತಿಯೊಬ್ಬರಲ್ಲೂ ಮೂಡುವಂತಾಗಬೇಕೆಂದು ಕೊರಟಗೆರೆ ತಾಲ್ಲೂಕಿನ ಎಲೆರಾಂಪುರ ಕುಂಚಿಟಿಗರ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು.
ಪಟ್ಟಣದ ಕುಂಚಿಟಿಗ ಒಕ್ಕಲಿಗರ ಸಂಘದ ಆವರಣದಲ್ಲಿ ಮಧುಗಿರಿ ತಾಲ್ಲೂಕು ರಕ್ತಧಾನಿ ಶಿಕ್ಷಕರ ಸ್ನೇಹ ಬಳಗ, ರೋಟರಿ ಕ್ಲಬ್, ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ 49 ಯೋಧರು ಮೃತಪಟ್ಟ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ದೇಶವನ್ನು ಕಾಯುವ ಯೋಧ ಮತ್ತು ಜನರಿಗೆ ಆಹಾರ ನೀಡುವ ರೈತನನ್ನು ಯಾವುದೇ ಸಮುದಾಯದವರು ಗೌರವವನ್ನು ನೀಡಲೇಬೇಕು ತಂದೆ ತಾಯಿಗಳಿಗಿಂತಲೂ ಯೋಧ ಮತ್ತು ರೈತನಿಗೆ ಸಮಾಜದಲ್ಲಿ ಮನ್ನಣೆ ದೊರೆಯುವಂತಾಗಬೇಕು. ರಾಜಕಾರಣವನ್ನು ಪಕ್ಕಕ್ಕೆ ಇಟ್ಟು ಸ್ವಾರ್ಥ ಬಿಟ್ಟು ದೇಶವನ್ನು ಕಾಯುವ ಯೋಧನಿಗೆ ಸಕಲ ಗೌರವಗಳು ಸಮಾಜದಲ್ಲಿ ದೊರಕುವಂತೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಯೋಧನಾದವನು ಬಡ ಕುಟುಂಬದಿಂದ ಬಂದವನಾಗಿರುವವರನ್ನೆ ಹೆಚ್ಚಾಗಿ ಕಾಣುತ್ತೇವೆ. ರಾಜಕಾರಣಿಗಳು ಮತ್ತು ಕೋಟ್ಯಾಧಿಪತಿಗಳ ಮಕ್ಕಳ್ಯಾರು ವೈದ್ಯ ಮತ್ತು ಇಂಜಿನಿಯರ್‍ಗಳಾಗಲು ಮುಂದಾಗುತ್ತಾರೇ ಹೊರತು ಯೋಧನಾಗಲು ಇಷ್ಟ ಪಡುವುದಿಲ್ಲ. ಈ ಮನೋ ವೃತ್ತಿ ಬದಲಾಗಬೇಕಾಗಿದೆ ಎಂದರು.
ಸಭೆ ಆರಂಭಕ್ಕೂ ಮುನ್ನ ಎರಡು ನಿಮಿಷ ಮೌನಾಚರಣೆ ಮಾಡಿ ಮೃತ ಯೋಧರ ಆತ್ಮಕ್ಕೆ ಶಾಂತಿ ಕೋರಿ ರಾಷ್ಟ್ರಗೀತೆ ಹಾಡಲಾಯಿತು.