ತುಮಕೂರು :
ಗ್ರಾಹಕರಿಗೆ ಭಾರತ ಸಂಚಾರ ನಿಗಮದಿಂದ 4ಜಿ ತರಂಗಗಳ ಸೇವೆಯನ್ನು ಕೂಡಲೇ ಒದಗಿಸಬೇಕೆಂದು ಎಯುಎಬಿ(ಆಲ್ ಯೂನಿಯನ್ಸ್ ಅಂಡ್ ಅಸೋಸಿಯೇಷನ್ಸ್ ಆಫ್ ಬಿಎಸ್ಎನ್ಎಲ್)ಯ ಜಿಲ್ಲಾ ಸಂಚಾಲಕ ಕಾಂ.ಹೆಚ್. ನರೇಶ್ ರೆಡ್ಡಿ ತಿಳಿಸಿದರು.
ನಗರದ ಬಿಎಸ್ಎನ್ಎಲ್ ಕಛೇರಿ ಮುಂದೆ ಫೆಬ್ರುವರಿ 18 ರಿಂದ 3 ದಿನಗಳ ಕಾಲ ಬಿಎಸ್ಎನ್ಎಲ್ ನೌಕರರಿಂದ ನಡೆಯುತ್ತಿರುವ ಮುಷ್ಕರದಲ್ಲಿಂದು ಪಾಲ್ಗೊಂಡು ಮಾತನಾಡಿದ ಅವರು ಎಯುಎಬಿ ಕರೆಯ ಮೇರೆಗೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ರಾಷ್ಟ್ರಾದ್ಯಂತ ಈ ಮುಷ್ಕರವನ್ನು ನಡೆಸಲಾಗುತ್ತಿದೆ. ಬಿಎಸ್ಎಲ್ಎಲ್ ನೌಕರರ 3ನೇ ವೇತನ ಪರಿಷ್ಕರಣೆ ಹಾಗೂ ಪಿಂಚಣಿ ಪರಿಷ್ಕರಣೆಯನ್ನು ದಿನಾಂಕ:1-1-2017ರಿಂದ ಜಾರಿಗೆ ತರಬೇಕು, 2ನೇ ವೇತನ ಪರಿಷ್ಕರಣೆಯಲ್ಲಿ ಆಗಿರುವ ಕೆಲವು ತಾರತಮ್ಯಗಳನ್ನು ಇತ್ಯರ್ಥಪಡಿಸಬೇಕು, ಬಿಎಸ್ಎನ್ಎಲ್ಗೆ ಸೇರಿದ ಖಾಲಿ ನಿವೇಶನ ಮತ್ತು ಆಸ್ತಿಯನ್ನು ಕೇಂದ್ರ ಸರ್ಕಾರದಿಂದ ನಿಗಮಕ್ಕೆ ಹಸ್ತಾಂತರಿಸಬೇಕು ಹಾಗೂ ಬಿಎಸ್ಎನ್ಎಲ್ ಟವರ್ಗಳನ್ನು ಹೊರಗುತ್ತಿಗೆಗೆ ನೀಡಬಾರದೆಂದು ಒತ್ತಾಯಿಸುತ್ತಿದ್ದೇವೆ ಎಂದು ತಿಳಿಸಿದರು.
ಎಯುಎಬಿ.ಯ ಅಧ್ಯಕ್ಷ ಕಾಂ. ಎಂ.ರಾಜ್ಕುಮಾರ್, ಎಸ್ಎನ್ಇಎ.ಯ ಜಿಲ್ಲಾ ಕಾರ್ಯದರ್ಶಿ ಕಾಂ. ಬಿ.ಕೆ. ಉಮೇಶ್, ಎಐಬಿಎಸ್ಎನ್ಎಲ್ಇಎ.ನ ಜಿಲ್ಲಾ ಕಾರ್ಯದರ್ಶಿ ಕಾಂ.ಎಸ್.ಭರತ್ ಅವರ ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದ್ದು, ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.