ತುಮಕೂರು :
ಜಿಲ್ಲಾದ್ಯಂತ ಮಾರ್ಚ್ 1 ರಿಂದ 18ರವರೆಗೆ ಒಟ್ಟು 34 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಯಾವುದೇ ಲೋಪದೋಷವಿಲ್ಲದಂತೆ ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ನಿಷೇದಾಜ್ಞೆಯು ಮಾರ್ಚ್ 1 ರಿಂದ 18ರವರೆಗೆ ಪ್ರತೀದಿನ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಬೆಳಿಗ್ಗೆ 9 ಗಂಟೆಯಿಂದ ಸಂಜೆ 5.30ರವರೆಗೆ ಜಾರಿಯಲ್ಲಿದ್ದು, ಈ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಹಾಗೂ ಬೆರಳಚ್ಚು ಕೇಂದ್ರಗಳನ್ನು ಮುಚ್ಚಬೇಕು. ನಿಷೇಧಿತ ಪ್ರದೇಶದಲ್ಲಿ ಅನಧಿಕೃತ ವ್ಯಕ್ತಿಗಳು ಪ್ರವೇಶಿಸುವಂತಿಲ್ಲ. ನಿಷೇಧಾಜ್ಞೆಯನ್ನು ಉಲ್ಲಂಘಿಸಿದ ವ್ಯಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಉತ್ತೇಜನ ನೀಡುವಂತಹ ವ್ಯಕ್ತಿಗಳು ಕಂಡು ಬಂದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.