ಮಧುಗಿರಿ :
ಸರ್ವಜ್ಞ ಸಮಾಜಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಪ್ರಸ್ತುತ. ಸಮಾಜದ ಅಂಕು ಡೊಂಕುಗಳನ್ನು ತಿದ್ದುವುದಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಮಹಾತ್ಮ ಸರ್ವಜ್ಞ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ತಾಲೂಕು ಆಡಳಿತ, ಕವಿ ಸರ್ವಜ್ಞ ವೇದಿಕೆ ಮತ್ತು ತಾಲೂಕು ಕುಂಬಾರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಮಹನೀಯರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ. ಸರ್ಕಾರದ ವತಿಯಿಂದ ಸರ್ವಜ್ಞ ಜಯಂತಿಯನ್ನು ಆಚರಿಸುತ್ತಿರುವುದು ಸ್ವಾಗತಾರ್ಹ. ಎಲ್ಲಾ ವರ್ಗಗಳನ್ನು ಪ್ರೀತಿ ವಿಶ್ವಾಸದಿಂದ ಗೌರವಿಸಿ ಮೈತ್ರಿ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
ತಾಲೂಕು ಸರ್ವಜ್ಞ ವೇದಿಕೆಗೆ ಸರ್ಕಾರದ ವತಿಯಿಮದ ಸ್ಥಳ ಮಂಜೂರಾಗಿದ್ದು, ಸಮುದಾಯದ ಅಭಿವೃದ್ದಿಗೆ ಈ ಸ್ಥಳದಲ್ಲಿ ನಿವೇಶನ ನಿರ್ಮಿಸಿಕೊಳ್ಳಲು ಅಗತ್ಯವಿರುವ ನೆರವನ್ನು ಒದಗಿಸಲು ಬದ್ದ. ಸಮುದಾಯದ ಮುಖಂಡರ ಒತ್ತಾಯದಂತೆ ಪಟ್ಟಣದ ಒಚಿದು ರಸ್ತೆಗೆ ಕವಿ ಸರ್ವಜ್ಞನ ಹೆಸರಿಡಲು ಪುರಸಭೆಗೆ ಸೂಚಿಸಲಾಗುವುದು ಎಂದರು.
ಸರ್ವಜ್ಞ ವೇದಿಕೆಯ ತಾಲೂಕು ಅಧ್ಯಕ್ಷ ವೆಂಕಟರವಣಪ್ಪ ಮಾತನಾಡಿ ಅಕ್ಷರ ಜ್ಞಾನದಿಂದಾಗಿ ಇಂದು ಜಾತಿಗಳ ನಡುವೆ ಇರುವ ಕಂದಕ ದೂರವಾಗುತ್ತಿದೆ. ಹರಿಯಾಣ ಮತ್ತು ತಮಿಳುನಾಡು ಹೊರತುಪಡಿಸಿ ದೇಶದ ಯಾವ ರಾಜ್ಯದಲ್ಲೂ ಕುಂಬಾರ ಸಮುದಾಯ ಸುಸ್ಥಿತಿಯಲ್ಲಿಲ್ಲ. ಉಪ ಕಸುಬುಗಳನ್ನು ಅವಲಂಭಿಸಿರುವ ಸಮುದಾಯಗಳು ಇಂದು ನಿರುದ್ಯೋಗಿಗಳಾಗಿದ್ದು, ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ತಳ ಸಮುದಾಯಗಳಾದ ಸವಿತಾ ಸಮಾಜ, ಕುಂಬಾರ ಮತ್ತು ಮಡಿವಾಳ ಸೇರಿದಂತೆ ಇನ್ನಿತರ 20 ತಳಸಮುದಾಯಗಳು ಬಹಳಷ್ಟು ಹಿಂದುಳಿದಿದ್ದು, ಸರ್ಕಾರ ಪರಿಶಿಷ್ಟ ಜಾತಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ.18 ರಿಂದ ಶೇ.20 ಕ್ಕೆ ಹೆಚ್ಚಿಸಿ ಈ ಸಮುದಾಯಗಳನ್ನೂ ಪರಿಶಿಷ್ಟ ಜಾತಿಗೆ ಸೇರಿಸಿ ಶೇ. 5 ರಷ್ಟು ಒಳ ಮೀಸಲಾತಿಯನ್ನು ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಕೆಂಚಮಾರಯ್ಯ, ತಹಶೀಲ್ದಾರ್ ನಂದೀಶ್, ಪುರಸಭಾ ಸದಸ್ಯರಾದ ಎಂ.ಎಸ್. ಚಂದ್ರಶೇಖರ್ ಬಾಬು, ಎಂ.ಎಲ್. ಗಂಗರಾಜು, ನಾರಾಯಣ್, ಪ್ರಾಂಶುಪಾಲರಾದ ಟಿ.ಎನ್. ನರಸಿಂಹಮೂರ್ತಿ, ಮುನೀಂದ್ರಕುಮಾರ್, ಜಿಲ್ಲಾ ಕುಂಬಾರ ವೇದಿಕೆ ಅಧ್ಯಕ್ಷ ರಾಮಚಂದ್ರಪ್ಪ, ತಾಲೂಕು ಕ.ಸಾ.ಪ ಅಧ್ಯಕ್ಷ ಚಿ.ಸೂ. ಕೃಷ್ಣಮೂರ್ತಿ, ಮುಖಂಡ ತುಂಗೋಟಿ ರಾಮಣ್ಣ, ದಾರ್ಮಿಕ ಮುಖಂಡ ಡಾ. ಎಂ.ಜಿ.ಶ್ರೀನಿವಾಸ ಮೂರ್ತಿ, ಪ್ರೋ. ಮ.ಲ.ನ. ಮೂರ್ತಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಗಂಗಪ್ಪ, ನಾಗಾರ್ಜುನ ಇದ್ದರು.